ADVERTISEMENT

ಕೋಲಾರ: IT, GST ಪಾವತಿದಾರರೆಂದು ‘ಗೃಹಲಕ್ಷ್ಮಿ’ಯಿಂದ ವಂಚಿತರಾದ 4ಸಾವಿರ ಮಹಿಳೆಯರು

ಜಿಲ್ಲೆಯಲ್ಲಿ 4,268 ಮಹಿಳೆಯರು ತಿಂಗಳಿಗೆ ₹ 2 ಸಾವಿರ ಯೋಜನೆಯಿಂದ ವಂಚಿತ

ಕೆ.ಓಂಕಾರ ಮೂರ್ತಿ
Published 8 ಜನವರಿ 2025, 5:53 IST
Last Updated 8 ಜನವರಿ 2025, 5:53 IST
ನಾರಾಯಣಸ್ವಾಮಿ
ನಾರಾಯಣಸ್ವಾಮಿ   

ಕೋಲಾರ: ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿದಾರರೆಂದು ಜಿಲ್ಲೆಯ ಸುಮಾರು 4,268 ಮಹಿಳೆಯರು ರಾಜ್ಯ ಸರ್ಕಾರದ ಪ್ರತಿಷ್ಠಿತ ಗ್ಯಾರಂಟಿ ಯೋಜನೆ ‘ಗೃಹಲಕ್ಷ್ಮಿ’ಯಿಂದ ವಂಚಿತರಾಗಿದ್ದಾರೆ.

ಇದರಿಂದ ಈ ಮಹಿಳೆಯರು ಪ್ರತಿ ತಿಂಗಳು ಸಿಗುವ ₹ 2 ಸಾವಿರ ಯೋಜನೆಗೆ ಅನರ್ಹರಾಗಿದ್ದಾರೆ. ಇವರಲ್ಲಿ ಕೆಲವರು ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರಾಗಿಲ್ಲ. ಆದಾಗ್ಯೂ ಯೋಜನೆಯಿಂದ ಹೊರಗೆ ಉಳಿಯುವಂತಾಗಿದೆ ಎಂಬ ದೂರುಗಳು ಕೇಳಿಬಂದಿವೆ.

‘ನೋಂದಣಿ ಮಾಡಿಕೊಂಡಿದ್ದರೂ ಹಣ ಸಿಕ್ಕಿರಲಿಲ್ಲ. ಈ ಬಗ್ಗೆ ಇಲಾಖೆಯ ಕಚೇರಿಯಲ್ಲಿ ಪರಿಶೀಲಿಸಿದಾಗ ಐಟಿ, ಜಿಎಸ್‌ಟಿ ಪಾವತಿದಾರರು ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿದೆ ಎಂಬ ದಾಖಲೆ ತೋರಿಸಿದರು’ ಎಂದು ಹಲವರು ದೂರಿದ್ದಾರೆ.

ADVERTISEMENT

ಐಟಿ, ಜಿಎಸ್‌ಟಿ ಪಾವತಿದಾರರಲ್ಲ ಎಂಬ ಬಗ್ಗೆ ಅಗತ್ಯ ದಾಖಲೆ ಒದಗಿಸಿದರೂ ಹಣ ಸಿಕ್ಕಿಲ್ಲ. ಇಲಾಖೆಯ ಜಿಲ್ಲಾ ಕೇಂದ್ರದಲ್ಲಿ ವಿಚಾರಿಸಿದರೆ ಕೇಂದ್ರ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಾರೆ ಎಂದರು.

‘ನಾವಾಗಿ ಯಾರನ್ನೂ ಯೋಜನೆಯಿಂದ ಕೈಬಿಡುವುದಿಲ್ಲ. ಬದಲಾಗಿ ಅವರು ಸಲ್ಲಿಸಿರುವ ಆಧಾರ್‌ ಸೀಡಿಂಗ್‌, ಎನ್‌ಪಿಸಿಯ (ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ) ಲಿಂಕ್‌ ಹಾಗೂ ಇತರೆ ದಾಖಲೆಗಳ ಮಾಹಿತಿ ಆಧಾರದ ಮೇಲೆ ಸಾಫ್ಟ್‌ವೇರ್‌ನಲ್ಲಿಯೇ ಯೋಜನೆಗೆ ದಾಖಲೆಗಳನ್ನು ಸ್ವೀಕರಿಸುವುದಿಲ್ಲ. ನೋಂದಣಿ ಸಮಯದಲ್ಲಿಯೇ ತಿರಸ್ಕೃತಗೊಳ್ಳುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 3,41,846 ಫಲಾನುಭವಿಗಳು ಇದ್ದಾರೆ. ಅವರಲ್ಲಿ 3,20,659 ಮಂದಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಆಧಾರ್‌ ಸೀಡಿಂಗ್‌ ಮಾಡದಿರುವುದು, ಬ್ಯಾಂಕ್‌ ಖಾತೆ ನಿಷ್ಕ್ರಿಯವಾಗಿರುವುದು, ಇಕೆವೈಸಿ ಮಾಡದಿರುವುದು, ಎನ್‌ಪಿಸಿಐ ಲಿಂಕ್‌ ಆಗದಿರುವ ಕಾರಣ 3,397 ಮಂದಿ ಹಣ ಸಿಗದೆ ಯೋಜನೆಯಿಂದ ವಂಚಿತರಾಗಿದ್ದಾರೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ ಒಟ್ಟು 830.74 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಫಲಾನುವಿಗಳ ಖಾತೆಗೆ ತಿಂಗಳಿಗೆ ₹ 2 ಸಾವಿರದಂತೆ ಪಾವತಿಯಾಗಿದೆ.

‘ಜಿಲ್ಲೆಯಲ್ಲಿ ಶೇ 93.80 ಫಲಾನುವಿಗಳಿಗೆ ಹಣ ಪಾವತಿಯಾಗುತ್ತಿದೆ. 13 ಮಂದಿ ತೃತೀಯ ಲಿಂಗಿಗಳಿಗೂ ಹಣ ನೀಡಲಾಗುತ್ತಿದೆ. ಪ್ರತಿ ತಿಂಗಳಿಗೆ ₹ 67 ಕೋಟಿ ಹಣ ವಿತರಿಸಲಾಗುತ್ತಿದೆ. ಉಳಿದ ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು, ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ’ ಎಂದರು.

ಐಟಿ ಜಿಎಸ್‌ಟಿ ಪಾವತಿ ಕಾರಣ 4268 ಮಂದಿಗೆ ಸಿಗುತ್ತಿಲ್ಲ. ಮತ್ತೊಮ್ಮೆ ಪರಿಶೀಲನೆ ನಡೆಸಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವಂತೆ ಕೋರಿ ಸುಮಾರು 305 ಮಂದಿ ಮನವಿ ಪತ್ರ ಸಲ್ಲಿಸಿದ್ದಾರೆ
ನಾರಾಯಣಸ್ವಾಮಿ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಇನ್ನೂ ನೋಂದಣಿ ಮಾಡಿಸದ 21,187 ಮಂದಿ

ಗೃಹಲಕ್ಷ್ಮಿ ಯೋಜನೆಯಡಿ ಕೋಲಾರ ಜಿಲ್ಲೆಯಲ್ಲಿ ಇನ್ನೂ 21187 ಮಹಿಳೆಯರು ನೋಂದಣಿ ಮಾಡಿಸಿಲ್ಲ. ಹೀಗಾಗಿ ಅವರು ತಿಂಗಳಿಗೆ ₹ 2 ಸಾವಿರ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಇವರು ನೋಂದಣಿಗೆ ಈವರೆಗೆ ಆಸಕ್ತಿ ತೋರಿಲ್ಲ. ಹಲವರಿಗೆ ಮಾಹಿತಿ ಗೊತ್ತಾಗದೆ ದೂರ ಉಳಿದಿರುವ ಸಾಧ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.