
ಕೋಲಾರ: ಮೂಲ ಸ್ವರೂಪ ಕಳೆದುಕೊಂಡು ಕೆಲವರ ಹೆಸರಿಗೆ ಪಹಣಿಗಳು ನಮೂದಾಗಿ, ಸಂಪೂರ್ಣವಾಗಿ ಒತ್ತುವರಿಯಾಗಿದ್ದ ಅಬ್ಬಣಿ ಗ್ರಾಮದ ದೊಡ್ಡಕೆರೆಯನ್ನು ಸತತ ಹೋರಾಟದ ಮೂಲಕ ರಕ್ಷಣೆ ಮಾಡಲಾಗಿದೆ.
ತಾಲ್ಲೂಕಿನ ಹುತ್ತೂರು ಹೋಬಳಿಯ ಅಬ್ಬಣಿ ಗ್ರಾಮದ ಸರ್ವೆ ನಂಬರ್ 79 ರಲ್ಲಿನ 91 ಎಕರೆ 6 ಗುಂಟೆ ಕೆರೆ ಜಮೀನು ಸಂಪೂರ್ಣ ಒತ್ತುವರಿಯಾಗಿತ್ತು. ಹಲವರ ಹೆಸರಿಗೆ ಪಹಣಿಗಳು ಸಹ ನಮೂದಾಗಿರುತ್ತವೆ. ಇದನ್ನು ಅರಿತ ರೈತ ಸಂಘದ ನಳಿನಿಗೌಡ ಹಿಂದಿನ ತಹಶೀಲ್ದಾರ್‌ಗೆ ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸುವಂತೆ ಮನವಿ ಮಾಡಿದ್ದರು. ಪ್ರತಿಫಲ ದೊರೆಯದಿದ್ದಾಗ ಕೋಲಾರ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಕಂದಾಯ ಸಚಿವರು, ಜಿಲ್ಲೆಯ ಕೆರೆ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟವರಿಗೆ ನಿರಂತರವಾಗಿ 2019 ರಿಂದ ದೂರು ನೀಡುತ್ತಾ ಬಂದಿದ್ದರು.
ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿತ್ತು. ಕೆರೆ ಜಮೀನಿನಲ್ಲಿ ಯಾರಿಗೂ ಹಕ್ಕುದಾರಿಕೆ ಮಂಜೂರು ಮಾಡಲು ಭೂ ಕಂದಾಯ ಕಾಯ್ದೆ ಅಥವಾ ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಅನಧಿಕೃತವಾಗಿ ದಾಖಲಾಗಿದ್ದ ಪಹಣಿಯನ್ನು ರದ್ದುಪಡಿಸಿ ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಲಾದ ಜಮೀನನ್ನು ಉಳಿಸಲು ಆದೇಶ ಮಾಡಿ ಕೆರೆ ಒತ್ತವರಿಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.