
ಬಂಗಾರಪೇಟೆ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಮೂಲ ಸೌಕರ್ಯಗಳಿಲ್ಲದೆ ಕತ್ತಲೆಯಲ್ಲೇ ಉಳಿದಿದೆ. ಕೋಟಿ ರೂಪಾಯಿ ವಹಿವಾಟು ನಡೆಸುವ ಈ ಮಾರುಕಟ್ಟೆ ಈಗ ರೈತರು ಮತ್ತು ವ್ಯಾಪಾರಿಗಳ ಪಾಲಿಗೆ ಸಂಕಷ್ಟದ ತಾಣವಾಗಿ ಮಾರ್ಪಟ್ಟಿದೆ.
ನಗರದ ಎಂ.ಪಿ.ಎಂ.ಸಿ ಮಾರುಕಟ್ಟೆ ತಾಲ್ಲೂಕಿನ ಆರ್ಥಿಕ ಜೀವನಾಡಿಯಂತೆ ಇತ್ತು. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಹಳೆ ವೈಭವ ಕಳೆದುಕೊಳ್ಳುತ್ತಿದೆ. ಪ್ರತಿದಿನ ಸಾವಿರಾರು ಗ್ರಾಹಕರು ಮತ್ತು ನೂರಾರು ವ್ಯಾಪಾರಿಗಳು ಸೇರುವ ಈ ಜಾಗದಲ್ಲಿ ಕನಿಷ್ಠ ಸೌಕರ್ಯ ಇಲ್ಲವಾಗಿದೆ.
ಮಾರುಕಟ್ಟೆ ಆವರಣದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ತರಕಾರಿ ಮಾರುಕಟ್ಟೆ ಕಸ ಹಾಗೂ ಅಂಗಡಿಗಳ ತ್ಯಾಜ್ಯವನ್ನು ಅಲ್ಲಲ್ಲಿಯೇ ಎಸೆಯಲಾಗುತ್ತಿದೆ. ಇದರಿಂದಾಗಿ ಈ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಮುಂಜಾನೆ 3-4ಗಂಟೆಗೆ ತರಕಾರಿ ಹೊತ್ತು ಬರುವ ರೈತರು, ಹಸಿವಾದಾಗ ಒಂದು ಕಪ್ ಚಹಾ ಅಥವಾ ತಿಂಡಿಗಾಗಿ ಮಾರುಕಟ್ಟೆಯಿಂದ ಹೊರಗೆ ಕಿಲೋಮೀಟರ್‌ಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಇದೆ. ಮಾರುಕಟ್ಟೆ ಆವರಣದಲ್ಲಿ ಕ್ಯಾಂಟೀನ್ ಇಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ಹೋಟೆಲ್‌ಗಳಿಗೆ ಹೋಗಿ ಹೆಚ್ಚಿನ ಹಣ ನೀಡಿ ತಿಂಡಿ ತಿನ್ನಬೇಕಾಗಿದೆ. ಲಾರಿ ಮತ್ತು ಟ್ರ್ಯಾಕ್ಟರ್ ಚಾಲಕರು ರಾತ್ರಿ ಇಡೀ ಪ್ರಯಾಣ ಮಾಡಿ ಬಂದಿರುತ್ತಾರೆ. ಅವರಿಗೆ ಸ್ನಾನ ಮತ್ತು ಉಪಾಹಾರಕ್ಕೆ ಜಾಗವಿಲ್ಲದೆ ವಾಹನಗಳಲ್ಲೇ ಕಾಲ ಕಳೆಯುವಂತಾಗಿದೆ. ಹೋಟೆಲ್ ಇಲ್ಲದಿದ್ದಾಗ ರೈತರು ಅನಿವಾರ್ಯವಾಗಿ ರಸ್ತೆ ಬದಿ ಅಶುಚಿಯಾದ ತಳ್ಳುಗಾಡಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪ್ಲಾಸ್ಟರ್‌ಗಳು ಬಿರುಕು ಬಿಟ್ಟಿವೆ. ಯಾವುದೇ ಕ್ಷಣದಲ್ಲಿ ಕುಸಿಯುವಂತಿದೆ. ಮಳೆಗಾಲದಲ್ಲಂತೂ ಇದು ಇನ್ನೂ ಅಪಾಯಕಾರಿ. ಮೇಲ್ಛಾವಣಿ ಸೋರುತ್ತಿರುವುದರಿಂದ ರೈತರು ತಂದ ಬೆಳೆ (ಧಾನ್ಯ,ತರಕಾರಿ) ನೆನೆದು ಹಾಳಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಕಟ್ಟಡಗಳು ಬೀಳುವ ಸ್ಥಿತಿಯಲ್ಲಿರುವುದರಿಂದ ವರ್ತಕರು ಮಳಿಗೆಗಳ ಒಳಗೆ ಕುಳಿತು ವ್ಯಾಪಾರ ಮಾಡಲು ಹಿಂಜರಿಯುತ್ತಿದ್ದಾರೆ. ಇದು ಮಾರುಕಟ್ಟೆ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸರಿಯಾದ ಬಾಗಿಲು ಅಥವಾ ಕಿಟಕಿಗಳಿಲ್ಲದ ಈ ಪಾಳುಬಿದ್ದ ಕಟ್ಟಡಗಳು ರಾತ್ರಿ ವೇಳೆ ಕಿಡಿಗೇಡಿಗಳ ಮತ್ತು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಬದಲಾಗುತ್ತಿದೆ.
ಕನಿಷ್ಠ ಸೌಲಭ್ಯವೂ ಇಲ್ಲ
ನಾವು ಪ್ರತಿ ತಿಂಗಳು ಬಾಡಿಗೆ ಮತ್ತು ತೆರಿಗೆಯನ್ನು ಸರಿಯಾಗಿ ಪಾವತಿಸುತ್ತೇವೆ. ಆದರೆ ಕನಿಷ್ಠ ಸೌಲಭ್ಯ ನೀಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಮಳೆಗಾಲದಲ್ಲಂತೂ ಇಲ್ಲಿ ನಿಲ್ಲಲು ಸಾಧ್ಯವಾಗದಷ್ಟು ಕೆಸರು ತುಂಬಿರುತ್ತದೆ ಎಂದು ಸ್ಥಳೀಯ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಸವರಾಜು ವರ್ತಕ ಐತಾಂಡಹಳ್ಳಿ ಸೌಲಭ್ಯ ನೀಡುವಲ್ಲಿ ವಿಫಲ ನಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತಂದರೆ ಇಲ್ಲಿ ಕನಿಷ್ಠ ಕುಳಿತುಕೊಳ್ಳಲು ನೆರಳಿಲ್ಲ. ಕುಡಿಯಲು ನೀರಿಲ್ಲ. ಸೆಸ್ ರೂಪದಲ್ಲಿ ಹಣ ಪಡೆಯುವ ಎಪಿಎಂಸಿ ಅಧಿಕಾರಿಗಳು ನಮಗೆ ಸೌಲಭ್ಯ ನೀಡುವಲ್ಲಿ ಮಾತ್ರ ಸಂಪೂರ್ಣ ವಿಫಲರಾಗಿದ್ದಾರೆ. ಶಂಕರೇಗೌಡ ತೊಪ್ಪನಹಳ್ಳಿ ಗ್ರಾಮದ ರೈತ ಕೆಸರು ಕಾಯಂ ಸಮಸ್ಯೆ ಮಳೆ ಬಂದಾಗ ಮಾರುಕಟ್ಟೆ ರಸ್ತೆಗಳು ಕೆರೆಯಂತಾಗುತ್ತವೆ.
ಚರಂಡಿಗಳು ಹೂಳು ತುಂಬಿ ಹೋಗಿರುವುದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಬೇಸಿಗೆಯಲ್ಲಿ ದೂಳು ಮಳೆಗಾಲದಲ್ಲಿ ಕೆಸರು ಇದು ಇಲ್ಲಿನ ಕಾಯಂ ಸಮಸ್ಯೆಯಾಗಿದೆ. ಕುಡಿಯುವ ನೀರು ಮತ್ತು ಶೌಚಾಲಯದ ಕೊರತೆ ದೂರದ ಹಳ್ಳಿಗಳಿಂದ ಬರುವ ರೈತರು ಮತ್ತು ಮಹಿಳಾ ಗ್ರಾಹಕರಿಗೆ ಇಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲ. ಇರುವ ಶೌಚಾಲಯಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಭದ್ರತೆ ಮತ್ತು ಬೀದಿ ದೀಪಗಳು ರಾತ್ರಿ ಸಮಯದಲ್ಲಿ ಮಾರುಕಟ್ಟೆ ಕತ್ತಲೆಯಲ್ಲಿ ಮುಳುಗುತ್ತದೆ. ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಿಗಳು ತಮಗಿರುವ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವಾಹನ ದಟ್ಟಣೆ ಕೂಡ ಇದೆ ಎಂದು ವರ್ತಕರು ಮತ್ತು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.