ADVERTISEMENT

ಕೋಲಾರ ಎಪಿಎಂಸಿ ಮಾರುಕಟ್ಟೆ; ವಹಿವಾಟಿಗೆ ಜಾಗವಿಲ್ಲದೆ ರೈತರ ಪರದಾಟ

ಕೋಲಾರ ಎಪಿಎಂಸಿ ಮಾರುಕಟ್ಟೆ; ವಹಿವಾಟಿಗೆ ಜಾಗವಿಲ್ಲದೆ ರೈತರ ಪರದಾಟ, ಹುಸಿಯಾದ ಭರವಸೆ

ಕೆ.ಓಂಕಾರ ಮೂರ್ತಿ
Published 18 ಡಿಸೆಂಬರ್ 2025, 7:28 IST
Last Updated 18 ಡಿಸೆಂಬರ್ 2025, 7:28 IST
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟಿನ ನೋಟ
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟಿನ ನೋಟ   

ಕೋಲಾರ: ರೈತರು, ವ್ಯಾಪಾರಿಗಳು, ಹಮಾಲಿಗಳು ಸೇರಿದಂತೆ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿರುವ ಕೋಲಾರ ಎಪಿಎಂಸಿಗೆ ಜಾಗದ ಕೊರತೆ ಉಂಟಾಗಿ ವರ್ಷದಿಂದ ವರ್ಷಕ್ಕೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ.

ಮೊದಲೇ ಟೊಮೆಟೊ ಫಸಲು ಹಾಗೂ ಧಾರಣೆಯ ಏರುಪೇರಿನ ಹೊಡೆತಕ್ಕೆ ಸಿಲುಕಿ ಜರ್ಜಿತರಾಗಿರುವ ಜಿಲ್ಲೆಯ ರೈತರು ಇಲ್ಲಿನ ಮೂಲ ಸೌಕರ್ಯ‌ಗಳ ಕೊರತೆ ಹಾಗೂ ಇತರ ಸಮಸ್ಯೆಗಳಿಂದ ಮತ್ತಷ್ಟು ನಲುಗಿ ಹೋಗಿದ್ದಾರೆ.

ಹತ್ತಾರ ಜಿಲ್ಲಾಧಿಕಾರಿಗಳು, ಐದಾರು ಉಸ್ತುವಾರಿ ಮಂತ್ರಿಗಳು, ನಾಲ್ಕೈದು ಸರ್ಕಾರಗಳು ಬದಲಾದರೂ ಜಾಗದ ಸಮಸ್ಯೆ ಮಾತ್ರ ನೀಗಿಲ್ಲ. ಇಂದು, ನಾಳೆ ಎನ್ನುತ್ತಲೇ ವರ್ಷಗಳೇ ಕಳೆದಿದ್ದು, ಜಾಗ ನೀಡುವ ಭರವಸೆ ಹುಸಿಯಾಗಿಯೇ ಉಳಿದಿದೆ.

ADVERTISEMENT

ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಎಪಿಎಂಸಿಗೆ ಸುಮಾರು 100 ಎಕರೆ ಜಮೀನು ಬೇಕಿದೆ. ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ, 1980ರಲ್ಲಿ ಆರಂಭವಾದ ಈ ಮಾರುಕಟ್ಟೆ ಕಿರಿದಾಗಿದ್ದು, ಬೇರೆಡೆಗೆ ಸ್ಥಳಾಂತರಿಸಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಿದೆ.

ಈ ಹಿಂದೆ ತಾಲ್ಲೂಕಿನ ಕಪರಸಿದ್ದನಹಳ್ಳಿ ಹಾಗೂ ಮಡೇರಹಳ್ಳಿಯಲ್ಲಿ ಗುರುತಿಸಿದ್ದ 37 ಎಕರೆ ಜಾಗವನ್ನು ಕೇಂದ್ರ ಅರಣ್ಯ ಇಲಾಖೆ ತಿರಸ್ಕರಿಸಿತು. ಆ ಬಳಿಕ ರೈತರು ಪ್ರತಿಭಟನೆ ನಡೆಸಿ, ಒತ್ತಾಯಿಸಿದ್ದರಿಂದ 60 ಎಕರೆ ಜಾಗ ಗುರುತಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುತ್ತಿದ್ದರಾದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ.

‘ಎಪಿಎಂಸಿ ಜಾಗಕ್ಕೆ ಆಗ್ರಹಿಸಿ ಎಷ್ಟೇ ಹೋರಾಟ ನಡೆಸಿದರೂ ಸರ್ಕಾರ ಕಣ್ಣು ತೆರೆಯದಿದ್ದರೆ ಹೇಗೆ? ರೈತರ ಬಗ್ಗೆ ಕಾಳಜಿಯಂತೂ ಇಲ್ಲವೇ ಇಲ್ಲ. ಕೋಲಾರ ಎಂದರೆ ಏಕಿಷ್ಟು ನಿರ್ಲಕ್ಷ್ಯ’ ಎಂದು ರೈತರು ಹಾಗೂ ವರ್ತಕರು ಪ್ರಶ್ನಿಸಿದ್ದಾರೆ.

ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ 4 ಎಕರೆ ಹಾಗೂ ಟಿಎಪಿಸಿಎಂಎಸ್‌ಗೆ 34 ಗುಂಟೆ ಜಾಗ ಹೋಗಿದ್ದು, ಸದ್ಯ ಎಪಿಎಂಸಿಗೆ ಕೇವಲ 19 ಎಕರೆ ಜಾಗವಿದೆ. ಸುಗ್ಗಿ ಕಾಲದಲ್ಲಿ ನಿತ್ಯ ಸರಿಸುಮಾರು 3 ಲಕ್ಷ ಕ್ರೇಟ್‌ (ತಲಾ 15 ಕೆ.ಜಿಯ ಬಾಕ್ಸ್‌ಗಳು) ಟೊಮೆಟೊ ವಹಿವಾಟು ನಡೆಯುತ್ತದೆ. 1,500 ವಾಹನಗಳು ಬಂದು ಹೋಗುತ್ತವೆ. ರೈತರು, ವರ್ತಕರು, ಕೂಲಿಗಳು ಸೇರಿದಂತೆ 5 ಸಾವಿರ ಜನರ ಓಡಾಟವಿರುತ್ತದೆ. ಎಪಿಎಂಸಿ ಆವರಣದಲ್ಲಿ ಜಾಗವಿಲ್ಲದೆ ಕಿಷ್ಕಿಂಧೆಯಾಗಿದ್ದು, ರಸ್ತೆಗಳ ಮೇಲೆಯೇ ಟೊಮೆಟೊ ಬಾಕ್ಸ್‌ ಇಟ್ಟು ವ್ಯಾಪಾರ ಮಾಡಬೇಕಿದೆ.

ಮಳೆಗಾಲದಲ್ಲಿ ಲೋಡ್ ಮಾಡಲು ಕಷ್ಟ. ಬಿಸಿಲು ಇದ್ದರೆ ಟೊಮೆಟೊ ಕೊಳೆಯುವ ಭೀತಿ. ನಿತ್ಯ ನೂರಾರು ಲೋಡ್‌ ಟೊಮೆಟೊ ವಿವಿಧ ರಾಜ್ಯಗಳಿಗೆ ಲಾರಿ ಹಾಗೂ ಟೆಂಪೊ ಮೂಲಕ ಸರಬರಾಜಾಗುತ್ತಿದೆ. ಬೆಲೆ ಕಡಿಮೆ ಇರಲಿ, ಹೆಚ್ಚಿರಲಿ ಒಂದೇ ದಿನದಲ್ಲಿ ಸಾಗಾಟ ಮಾಡಬೇಕು. ಟ್ರಾಫಿಕ್‌ನಿಂದ ರೈತರು, ವರ್ತಕರು ಹೈರಾಣಾಗುತ್ತಿದ್ದಾರೆ. ಸುತ್ತಲಿನ ರಸ್ತೆಯಲ್ಲಿ ಹಾದು ಹೋಗುವ ಜನಸಾಮಾನ್ಯರಿಗೂ ಸಂಚಾರ ದಟ್ಟಣೆ ಬಿಸಿ ತಟ್ಟುತ್ತದೆ. ಇನ್ನು ಜೂನ್‌ನಿಂದ ಅಕ್ಟೋಬರ್‌ ಅವಧಿಯ (ಸುಗ್ಗಿ ಕಾಲ) ಪರಿಸ್ಥಿತಿ ಹೇಳತೀರದು.

ಟೊಮೆಟೊ ಬೆಳೆಯಲ್ಲಿ ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ರೈತರು ಈ ಸಮಸ್ಯೆಗಳಿಂದ ಹೈರಾಣಾಗಿದ್ದು, ಹಲವು ಬಾರಿ ನಷ್ಟ ಅನುಭವಿಸಿದ್ದಾರೆ. ಟೊಮೆಟೊ ಹಣ್ಣನ್ನು ಹೆಚ್ಚು ದಿನ ರಕ್ಷಿಸಿ ಇಡಲು ಆಗುವುದಿಲ್ಲ. ಜಿಲ್ಲೆಗೆ ಸಂಸ್ಕರಣಾ ಘಟಕ, ಶಿಥಲೀಕರಣ ಘಟಕ ಬೇಕೆಂಬ ಬೇಡಿಕೆ ಹಲವು ವರ್ಷಗಳದ್ದು. ಈ ಕೂಗು ಕೂಡ ಸರ್ಕಾರ ಕಿವಿಗೆ ಬೀಳುತ್ತಿಲ್ಲ.

100 ಎಕರೆ ಜಾಗ ಬೇಕಿದೆ

ಸದ್ಯ 60 ಎಕರೆ ಜಾಗ ಗುರುತಿಸಿರುವುದಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಹಲವಾರು ತಿಂಗಳಿನಿಂದ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಎಲ್ಲಿ ಜಾಗವಿದೆ ಯಾವಾಗ ಸಿಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 60 ಎಕರೆ ಜಾಗ ಸಾಲದು; ಮುಂದಿನ 35ರಿಂದ 40 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ಕನಿಷ್ಠ 100 ಎಕರೆ ಜಮೀವನ್ನಾದರೂ ಗುರುತಿಸಿ ಕೊಡಬೇಕು ಎಂದು ರೈತರು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.