ADVERTISEMENT

ಕೋಲಾರ | 32 ಮಕ್ಕಳಿಂದ 64 ಕವಿತೆಗಳ ‘ಬಿತ್ತನೆ’!

ಶಾಲಾ ಮಕ್ಕಳೇ ರಚಿಸಿರುವ ಕವನ ಸಂಕಲನಗಳ ಕೃತಿ; ಹೊಸ ಪ್ರಯೋಗಕ್ಕೆ ಸಾಹಿತ್ಯಾಸಕ್ತರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 7:42 IST
Last Updated 15 ಡಿಸೆಂಬರ್ 2025, 7:42 IST
ಮಕ್ಕಳೇ ರಚಿಸಿರುವ ‘ಬಿತ್ತನೆ’ ಕವನ ಸಂಕಲನದ ಮುಖಪುಟ
ಮಕ್ಕಳೇ ರಚಿಸಿರುವ ‘ಬಿತ್ತನೆ’ ಕವನ ಸಂಕಲನದ ಮುಖಪುಟ   

ಕೋಲಾರ: ಅದೊಂದು ವಿಶೇಷ, ವಿನೂತನ ಪ್ರಯೋಗ. 32 ಮಕ್ಕಳು 64 ಕವಿತೆ ರಚಿಸಿದ್ದು, ಅದರ ಸೂತ್ರಧಾರಿ ಸ.ರಘುನಾಥ ಮೇಸ್ಟ್ರು. ಆ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎಲ್ಲರಿಂದ ಮೆಚ್ಚುಗೆಯ ಚಪ್ಪಾಳೆ.

7ರಿಂದ 10ನೇ ತರಗತಿಯ ಶಾಲಾ ಮಕ್ಕಳು ಅಪ್ಪ, ಅಮ್ಮ, ಅಕ್ಕ, ಪರಿಸರ, ದೇಶ, ಗುರು, ಸಾಮಾಜಿಕ ಪ್ರಜ್ಞೆ ಸೇರಿದಂತೆ ವಿವಿಧ ವಿಚಾರಗಳನ್ನು ಇಟ್ಟುಕೊಂಡು ಕವನ ರಚಿಸಿದ್ದಾರೆ. ಅವರೇ ವಿಷಯ ಆಯ್ಕೆ ಮಾಡಿಕೊಂಡು ರಚಿಸಿರುವುದು ವಿಶೇಷ.

ನಗರದ ವಿವಿಧೆಡೆ ಆರು ತಿಂಗಳು ನಡೆದ ಒಟ್ಟು ಆರು ಕಮ್ಮಟಗಳಲ್ಲಿ ಈ ಮಕ್ಕಳಿಗೆ ಕವಿತೆ ಅರಳುವ ಹಾಗೂ ಹುಟ್ಟಿಕೊಳ್ಳುವ ಬಗ್ಗೆ ಸಾಹಿತಿ ಸ.ರಘುನಾಥ ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿನ ಶಿಕ್ಷ ಅಕಾಡೆಮಿ ಶಾಲಾ ಮಕ್ಕಳು ರೇಖಾ ಚಿತ್ರ ಬಿಡಿಸಿಕೊಟ್ಟಿದ್ದಾರೆ. ಆ ಕವನ ಸಂಕಲನಗಳ ಕೃತಿಯ ಹೆಸರು ’ಬಿತ್ತನೆ’

ADVERTISEMENT

ಮೊರಸುನಾಡು ಪ್ರಕಾಶನ ಬಳಗದಿಂದ ‘ಬಿತ್ತನೆ’ ಕೃತಿಯ ಬಿಡುಗಡೆ ಸಮಾರಂಭ ಭಾನುವಾರ ನಗರದ ರೈಲು ನಿಲ್ದಾಣದ ಬಳಿಯ ಚಿನ್ಮಯ ವಿದ್ಯಾಲಯದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಪರಿಸರ ಲೇಖಕ ಎಚ್‌.ಎ.ಪುರುಷೋತ್ತಮ, ‘ಸ.ರಘುನಾಥ ಪ್ರಯೋಗಗಳಿಗೆ‌ ವೊಡ್ಡಿಕೊಳ್ಳುವ ವ್ಯಕ್ತಿ. ಮಕ್ಕಳ ಮೂಲಕ ‌ಸಮಾಜ ತಿದ್ದುವ ಆಶೋತ್ತರ‌ ಹೊಂದಿದ್ದಾರೆ. ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯ, ‌ಪರಿಸರ‌‌ ಪ್ರಜ್ಞೆ ತುಂಬಬೇಕಿದೆ. ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಕೃತಿಯ ಸಂಪಾದಕ ಸ‌‌‌‌‌.ರಘುನಾಥ ಮಾತನಾಡಿ, ‘ಸಂಬಂಧಕ್ಕಿಂತ ಪ್ರೀತಿ ದೊಡ್ಡದು. ಅಸಹಾಯಕನಾಗಿ‌, ರೋಗ ಬಂದು ಸಾಯದೆ ಕೆಲಸ ಮಾಡುತ್ತಲೇ ಸಾಯಬೇಕು ಎನ್ನುವುದು ನನ್ನ ಆಸೆ. ಇನ್ನಷ್ಟು ಮಕ್ಕಳು,‌ ಇನ್ನಷ್ಟು ರೈತರು ಜೊತೆ ಬೆರೆಯಬೇಕು. ಮಕ್ಕಳ ‌ಕಮ್ಮಟ ಭಾಗ–2 ಸದ್ಯದಲ್ಲೇ ಆರಂಭವಾಗುತ್ತಿದೆ‌ ಎಂದರು.

ಕೃತಿ ಬಿಡುಗಡೆ ಮಾಡಿದ ತಾರಾ ಡಾಕ್ಟರ್‌ ವೆಂಕಟಪ್ಪ, ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯ ಉತ್ತೇಜಿಸುವ ಕೆಲಸ ನಡೆಯಬೇಕು. ಮಕ್ಕಳೇ‌ ರಚಿಸಿರುವ ಕವಿತೆ ಹಾಗೂ ರೇಖಾ ಚಿತ್ರ ಸೊಗಸಾಗಿ ಮೂಡಿಬಂದಿವೆ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಎನ್.ಬಿ.ಗೋಪಾಲಗೌಡ‌ ಮಾತನಾಡಿ, ಮಕ್ಕಳ ದನಿಗೆ ಪುಸ್ತಕ ರೂಪ ಕೊಟ್ಟು ಸಾಹಿತ್ಯ ಲೋಕಕ್ಕೆ ಮಕ್ಕಳನ್ನು ಪದಾರ್ಪಣೆ ‌ಮಾಡಿಸಿದ್ದಾರೆ. ಕನಸು ಕಟ್ಟಿಕೊಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಶ್ರೀನಿವಾಸಪುರದ ವೈದ್ಯ ಡಾ.ವೆಂಕಟಾಚಲ ಮಾತನಾಡಿ, ಸಾಹಿತ್ಯಾಭಿರುಚಿ ಮೂಲಕ ಮಕ್ಕಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ, ಸ್ವಂತಿಕೆ ಬಂದಿದೆ. ಮಕ್ಕಳ ಮನಸ್ಸು ಭೂಮಿ ಇದ್ದಂತೆ. ಜ್ಞಾನ ಹಾಗೂ ಮೌಲ್ಯದ ಬಿತ್ತನೆ ಮಾಡಿದರೆ ಉತ್ತಮ ಬೆಳೆ‌ ಬರುತ್ತದೆ ಎಂದರು.

ಮೊಬೈಲ್ ಮಕ್ಕಳಿಗೆ ಶಾಪವಾಗಿ ಪರಿಣಮಿಸಿದೆ. ಅವರಲ್ಲಿ ಕಲ್ಪನಾಶಕ್ತಿಯ ದಾರಿದ್ರ್ಯ ಆವರಿಸಿದೆ. ಲಕ್ಷಾಂತರ ಮಕ್ಕಳು ಮಾನಸಿಕ ಹಾಗೂ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳ ವಿಕಸನ ಆಟದ ಮೈದಾನದಲ್ಲಿ ಹಾಗೂ ಗೆಳೆಯರ ಸಾಂಗತ್ಯದಲ್ಲಿ ಆಗಬೇಕಿತ್ತು. ಮತ್ತೆ ಮಕ್ಕಳ ಕೈಗೆ ಪುಸ್ತಕ ಕೊಡಬೇಕಿದೆ. ಅವರ ಬದುಕಿಗೆ ನೆಮ್ಮದಿ ಕಟ್ಟಿಕೊಡಬೇಕಿದೆ.‌ ಅದು ಪುಸ್ತಕ ಹಾಗೂ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಪತ್ರಕರ್ತ ರಘುನಾಥ ಚ.ಹ. ಅಭಿಪ್ರಾಯಪಟ್ಟರು.

ಜಾನಪದ ‌ಕಲಾವಿದ ಮುಳಬಾಗಲಪ್ಪ, ರಂಗಕರ್ಮಿ ಗಾಮನಹಳ್ಳಿ ಸ್ವಾಮಿ, ಚಿನ್ಮಯ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಚಂದ್ರಪ್ರಕಾಶ್‌ ಅವರನ್ನು ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಸನ್ಮಾನಿಸಿದರು.

ವಿಚಾರ ಸಂಕಿರಣ, ಕಾವ್ಯ ವಾಚನ, ಗಾಯನ ನಡೆಯಿತು. ಉರ್ದು ಶಾಲೆಯ ಹೆಣ್ಣು ಮಕ್ಕಳು ಕನ್ನಡದಲ್ಲಿ ತಪ್ಪಿಲ್ಲದೆ ಕವನ ವಾಚಿಸಿದರು. ಅವರಿಗೆ ಅವರ ಅಮ್ಮಂದಿರೇ ಬಹುಮಾನ ವಿತರಣೆ ಮಾಡಿದ್ದು ವಿಶೇಷ. 40 ಮಕ್ಕಳಿಗೆ ಕನ್ನಡದ ಸಂಕ್ಷಿಪ್ತ ನಿಘಂಟು ವಿತರಿಸಲಾಯಿತು.

ಚಾನ್‌ ಪಾಷಾ, ಸಾನ್ವಿ, ವಿಜಯಶ್ರೀ, ಧನಪಾಲ್‌ ನೆಲವಾಗಿಲು, ಅರಿನಾಗನಹಳ್ಳಿ ಅಮರನಾಥ, ಸ್ವಾಮಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಕೃತಿಯ ಬೆಲೆ ₹ 100.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.