
ಕೋಲಾರ: ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸಲು ಪಣ ತೊಟ್ಟಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಭಾನುವಾರ ದಿನವಿಡೀ ಬೃಹತ್ ಸ್ವಚ್ಛತಾ ಆಂದೋಲನ ನಡೆಯಿತು. 50ಕ್ಕೂ ಅಧಿಕ ಸ್ವಚ್ಛತಾ ವಾಹನಗಳು, ನೂರಾರು ಸಿಬ್ಬಂದಿ, ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಸರ್ವಜ್ಞ ಉದ್ಯಾನದ ಬಳಿ ಆಂದೋಲನಕ್ಕೆ ಎಂ.ಆರ್.ರವಿ ಚಾಲನೆ ನೀಡಿದರು. ಸಂಜೆ 5 ಗಂಟೆ ವರೆಗೆ ನಗರಸಭೆಯ ಸಹಕಾರದಲ್ಲಿ ನಗರದಾದ್ಯಂತ ಸ್ವಚ್ಛತಾ ಕಾರ್ಯ ನಡೆಯಿತು.
ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭ ಮಾಡಿದ್ದು, ಈ ವಾಹನ ಕೂಡ ನಗರದೆಲ್ಲೆಡೆ ಸುತ್ತಾಡುತ್ತಾ ನಿಗಾ ಇಟ್ಟಿತ್ತು. ಸ್ವಚ್ಛತೆ ಜೊತೆಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯಿತು.
ನಮ್ಮ ನಗರ, ಪರಿಸರ ಸ್ವಚ್ಛತೆಯಿಂದ ನಮ್ಮ ಕುಟುಂಬ, ನಮ್ಮ ನಗರದ ಜನತೆಯ ಆರೋಗ್ಯ ಸುಧಾರಣೆ ಹಾಗೂ ರಕ್ಷಣೆ ಸಾಧ್ಯ. ಈ ಜಾಗೃತಿ ಪ್ರತಿಯೊಬ್ಬರಲ್ಲೂ ಬರುವಂತಾಗಬೇಕು ಎಂದು ಎಂ.ಆರ್.ರವಿ ಹೇಳಿದರು.
ನಗರದ ಸ್ವಚ್ಛತೆ ಕಾಪಾಡಲು ಮತ್ತು ಸುಂದರ ನಗರವನ್ನಾಗಿಸಲು ಪ್ರತಿಯೊಬ್ಬರೂ ಪಣತೊಡಬೇಕು ಎಂದರು.
ಸ್ವಚ್ಛತೆ ಎಂಬುದು ಒಂದು ದಿನದ ಕಾರ್ಯಕ್ರಮವಲ್ಲ; ತಮ್ಮ ಮನೆಯನ್ನು ಯಾವ ರೀತಿ ಸ್ವಚ್ಛತೆಯಿಂದ ಇಟ್ಟುಕೊಳ್ಳುತ್ತಿರೋ ಅದೇ ರೀತಿ ನಮ್ಮ ಪರಿಸರವನ್ನೂ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ನಗರದೊಳಗೆ ಖಾಲಿ ನಿವೇಶನ ಹೊಂದಿರುವಂಥ ಮಾಲೀಕರು ಆ ನಿವೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿವೇಶನಗಳಲ್ಲಿ ತ್ಯಾಜ್ಯವನ್ನು ಸುರಿಯದಂತೆ ಫೆನ್ಸಿಂಗ್ ಹಾಕಬೇಕು. ಇದರಿಂದ ತಮ್ಮ ಆಸ್ತಿಗೂ ಭದ್ರತೆ ಇರುತ್ತದೆ ಎಂದು ಕಿವಿಮಾತು ಹೇಳಿದರು.
ರಸ್ತೆ ಬದಿಗಳಲ್ಲಿ ಖಾಲಿ ನಿವೇಶನಗಳಲ್ಲಿ ಸುರಿದಿರುವ ಕಟ್ಟಡದ ತ್ಯಾಜ್ಯವನ್ನು ವಿಲೇ ಮಾಡಲು ಈಗಾಗಲೇ ಕೆಂದಟ್ಟಿ ಕೆರೆಯ ಪಕ್ಕದಲ್ಲಿ ಸ್ಥಳ ಗುರುತಿಸಲಾಗಿದೆ. ಸಾರ್ವಜನಿಕರು ಅದನ್ನು ಬಳಕೆ ಮಾಡಿಕೊಳ್ಳಬೇಕು. ನಗರದ ವಿವಿಧ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಡಂಪ್ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಇದನ್ನು ತಪ್ಪಿಸುವ ಸಲುವಾಗಿ ಅದಕ್ಕೆಂದೇ ಸ್ಥಳವನ್ನು ನಿಗದಿ ಮಾಡಲಾಗಿದೆ. ಹಸಿ ಕಸವನ್ನು ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೇಖರಿಸಿ ಸಾವಯವ ಗೊಬ್ಬರ ಮಾಡಿ ರೈತರಿಗೆ ಒದಗಿಸುವ ಉದ್ದೇಶದಿಂದ ಈ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ‘ಸ್ವಚ್ಛತಾ ಕಾರ್ಯಕ್ರಮ ನಗರಕ್ಕೆ ಮಾತ್ರ ಮೀಸಲಾಗಿರದೆ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತೆಗೆ ಪ್ರತಿ ಪಂಚಾಯತ್ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು
ನಗರಸಭೆ ಆಯುಕ್ತ ನವೀನ್‍ಚಂದ್ರ ಮಾತನಾಡಿ, ‘ಈಗಾಗಲೇ ನಗರದಲ್ಲಿ ನಿತ್ಯ ಸ್ವಚ್ಛತಾ ಕಾರ್ಯ ಸಂಬಂಧ ಸಮುದಾಯ ಸಂಘಟಕರು ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಬೃಹತ್ ಸ್ವಚ್ಛತಾ ಕಾರ್ಯದಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳು, ಉದ್ಯಾನಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ನಗರದ ಸಾರ್ವಜನಿಕರು ಸಹ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳು ಸಹಕಾರ ನೀಡಿದ್ದವು, ವಾಹನ ವ್ಯವಸ್ಥೆ ಮಾಡಿದ್ದವು. ಐದು ತಂಡಗಳು ಕಾರ್ಯಾಚರಣೆ ನಡೆಸಿದವು. 28 ಜೆಸಿಬಿ, 46 ಟಿಪ್ಪರ್‌ಗಳು ಇದ್ದವು.
ನಗರ ಯೋಜನೆ ನಿರ್ದೇಶಕಿ ಅಂಬಿಕಾ, ನಗರಸಭೆಯ ಅಧಿಕಾರಿಗಳಾದ ಶ್ರೀನಿವಾಸ್, ಗೋವಿಂದಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಾಮಮೂರ್ತಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ಖಾನ್, ರವಿ ಇದ್ದರು.
ಸರ್ವಜ್ಞ ಉದ್ಯಾನದ ಬಳಿ ಆಂದೋಲನಕ್ಕೆ ಜಿಲ್ಲಾಧಿಕಾರಿ ಚಾಲನೆ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ, ಸರ್ಕಲ್, ಉದ್ಯಾನಗಳಲ್ಲಿ ಸ್ವಚ್ಛತಾ ಕಾರ್ಯ 25ಕ್ಕೂ ಅಧಿಕ ಸ್ವಚ್ಛತಾ ವಾಹನ, ನೂರಾರು ಸಿಬ್ಬಂದಿ, ಪೌರಕಾರ್ಮಿಕರು ಭಾಗಿ
ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದು ನಗರಸಭೆ ಜಿಲ್ಲಾಡಳಿತದ ಕೆಲಸ ಎಂಬ ತಾತ್ಸರ ನಿರ್ಲಕ್ಷ್ಯ ಮನೋಭಾವ ಬೇಡಎಂ.ಆರ್.ರವಿ ಜಿಲ್ಲಾಧಿಕಾರಿ
ಕಟ್ಟಡ ತ್ಯಾಜ್ಯ ಹೊರಗೆ ಸಾಗಣೆ ನಗರ ಪ್ರವೇಶಿಸುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಇದರಿಂದಾಗಿ ಹೊರಗಡೆಯಿಂದ ಬರುವವರಿಗೆ ನಗರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತಿಲ್ಲ. ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗಿದೆ. ಬಹಳ ತಿಂಗಳಿನಿಂದ ಈ ಸಮಸ್ಯೆ ಇದ್ದು ಯಾರೂ ಗಮನಿಸಿಲ್ಲ. ಹೀಗಾಗಿ ಕಟ್ಟಡ ತ್ಯಾಜ್ಯ ತೆರವಿಗೆ ಯೋಜನೆ ರೂಪಿಸಿ ನಗರದಿಂದ ಹೊರಗೆ ಸಾಗಿಸಲಾಗುತ್ತಿದೆ. ಅದಕ್ಕಾಗಿ ಸ್ಥಳ ಕೂಡ ಗುರುತಿಸಲಾಗಿದೆ. ಆ ಸ್ಥಳಕ್ಕೆ ಸುರಿಯಲಾಗುತ್ತಿದೆ. ನಗರಸಭೆ ತ್ಯಾಜ್ಯವನ್ನೂ ಸಾಗಿಸಲಾಗುತ್ತಿದೆ ಎಂದು ಎಂ.ಆರ್.ರವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.