ADVERTISEMENT

ಕೋಲಾರ|ಡಿಜಿಟಲ್ ಜನಗಣತಿಗೆ ಸಿದ್ಧತೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:38 IST
Last Updated 19 ಫೆಬ್ರುವರಿ 2026, 6:38 IST
ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಮುಂಬರುವ ಡಿಜಿಟಲ್‌ ಜನಗಣತಿ ಸಂಬಂಧ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು
ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಮುಂಬರುವ ಡಿಜಿಟಲ್‌ ಜನಗಣತಿ ಸಂಬಂಧ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು    

ಕೋಲಾರ: ಜಿಲ್ಲೆಯಲ್ಲಿ ಮುಂಬರುವ ಡಿಜಿಟಲ್ ಜನಗಣತಿಯನ್ನು ಅತ್ಯಂತ ನಿಖರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗ ಎಂ.ಆರ್.ರವಿ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಸಿದ್ಧತೆ ಪರಿಶೀಲಿಸಿ ಮಾತನಾಡಿದರು.

ಡಿಜಿಟಲ್ ಜನಗಣತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಜನಗಣತಿ ಕಾರ್ಯಕ್ಕೆ ಎನ್ಯೂಮರೇಟರ್‌ಗಳನ್ನು ಆಯ್ಕೆ ಮಾಡುವಾಗ ಅವರಿಗೆ ಮೊಬೈಲ್ ಅಪ್ಲಿಕೇಶನ್ ಬಳಸುವ ಕನಿಷ್ಠ ಜ್ಞಾನವಿರಬೇಕು. ಗರ್ಭಿಣಿಯರು, ಸಣ್ಣ ಮಕ್ಕಳಿರುವವರು ಅಥವಾ ಹಿರಿಯ ನಾಗರಿಕರನ್ನು ಈ ಕಾರ್ಯಕ್ಕೆ ನಿಯೋಜಿಸದಂತೆ ಎಚ್ಚರ ವಹಿಸಿ ಎಂದರು.

ಎನ್ಯೂಮರೇಟರ್‌ಗಳಿಂದ ಹಿಡಿದು ಚಾರ್ಜ್ ಅಧಿಕಾರಿಗಳವರೆಗೆ ಎಲ್ಲರಿಗೂ ವ್ಯವಸ್ಥಿತ ತರಬೇತಿ ನೀಡಲಾಗುವುದು. ಜನಗಣತಿ ಕಾರ್ಯಕ್ಕಾಗಿ ಕಚೇರಿಗಳಿಗೆ ಅಗತ್ಯವಿರುವ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ ಮತ್ತು ನೆಟ್ ಸೌಲಭ್ಯಗಳನ್ನು ಒದಗಿಸಲು ಅನುದಾನ ನೀಡಲಾಗುವುದು. ಇವುಗಳು ಕಚೇರಿಯ ಶಾಶ್ವತ ಆಸ್ತಿಯಾಗಿ ಉಳಿಯಲಿವೆ ಎಂದು ಹೇಳಿದರು.

2027ರ ಫೆಬ್ರುವರಿಯಿಂದ ಎನ್ಯೂಮರೇಷನ್ ಕಾರ್ಯ ಆರಂಭವಾಗಲಿದೆ. ಸದ್ಯಕ್ಕೆ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಬ್ಲಾಕ್‍ಗಳ ಗುರುತಿಸುವಿಕೆ ಪ್ರಕ್ರಿಯೆ ನಡೆಯಲಿದೆ ಎಂದರು.

ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿರಲಿದ್ದು, ಸಿಎಂಎಂಎಸ್‌ (Census Management and Monitoring System) ವೆಬ್ ಪೋರ್ಟಲ್ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕ್ಷೇತ್ರ ಮಟ್ಟದ ಎನ್ಯುಮರೇಟರ್‌ಗಳು ಎಚ್‌ಎಲ್‌ಬಿ (House Listing Block) ಕ್ರಿಯೇಟರ್ ಆ್ಯಪ್ ಬಳಸಿ ಪ್ರತಿ ಬ್ಲಾಕ್‍ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿಯನ್ನು ಜಿಯೋ ಟ್ಯಾಗಿಂಗ್ ಮೂಲಕ ಗುರುತಿಸಲಿದ್ದಾರೆ. ಸಾರ್ವಜನಿಕರಿಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಸೆಲ್ಫ್ ಎನ್ಯುಮರೇಶನ್ ಪೋರ್ಟಲ್ ಮತ್ತು ಮಾಹಿತಿ ಪಡೆಯಲು ಚಾಟ್‍ಬಾಟ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಈ ಅಪ್ಲಿಕೇಶನ್ ಅಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದ್ದು, 16 ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು.

ಜನಗಣತಿ ಕಾರ್ಯಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಎಡಿಸಿ ಅವರನ್ನು ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಹಾಗೂ ಸಿಪಿಒ ಅವರನ್ನು ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ನೇಮಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಚಾರ್ಜ್ ಆಫೀಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಡಿಜಿಟಲ್ ದತ್ತಾಂಶದ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮೂರು ಹಂತದ ಭದ್ರತಾ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಪ್ರತಿಯೊಂದು ಮೊಬೈಲ್‍ನ ಇಎಂಇಐ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಎಂ.ಮಂಗಳಾ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಜಿಲ್ಲಾ ಸಂಖ್ಯೆ ಸಂಗ್ರಹಣಾಧಿಕಾರಿ ಗುರು ಮಹಾದೇವಯ್ಯ, ಎಲ್ಲಾ ನಗರಸಭೆ, ಪುರಸಭೆ ಆಯುಕ್ತರು, ಸಂಬಂಧಿತ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಜನಗಣತಿಯು ರಾಷ್ಟ್ರೀಯ ಮಟ್ಟದ ಪ್ರಮುಖ ಕಾರ್ಯವಾಗಿದ್ದು ಚುನಾವಣಾ ಕೆಲಸದಷ್ಟೇ ಗಂಭೀರವಾದುದು. ಅಧಿಕಾರಿಗಳ ನಡುವೆ ಸಮರ್ಪಕ ಸಮನ್ವಯತೆ ಇರಬೇಕು.
ಎಂ.ಆರ್.ರವಿ ಜಿಲ್ಲಾಧಿಕಾರಿ
ಗೈರಾದ ಅಧಿಕಾರಿಗಳಿಗೆ ಡಿ.ಸಿ ತರಾಟೆ
ಡಿಜಿಟಲ್‌ ಜನಗಣತಿ ಸಿದ್ಧತೆ ಸಭೆಗೆ ಗೈರುಹಾಜರಾದ ಮತ್ತು ಜನಗಣತಿ ತರಬೇತಿಗಳಲ್ಲಿ ಭಾಗವಹಿಸದ ತಹಶೀಲ್ದಾರ್‌ಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರವಿ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದರು. ಪ್ರತಿ ಶುಕ್ರವಾರ ಜನಗಣತಿ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಪ್ರತಿ ಗುರುವಾರ ಸಂಜೆ ವೇಳೆಗೆ ಎಲ್ಲಾ ತಾಲ್ಲೂಕುಗಳಿಂದ ಗೂಗಲ್ ಮೀಟ್ ಮೂಲಕ ಮಾಹಿತಿ ಸಂಗ್ರಹಿಸಿ ಸಿದ್ಧರಿರಬೇಕು ಎಂದು ಸೂಚನೆ ನೀಡಿದರು.

2 ಸಾವಿರಕ್ಕೂ ಅಧಿಕ ಗಣತಿದಾರರು

ಡಿಜಿಟಲ್‌ ಜನಗಣತಿಗೆ ಶಿಕ್ಷಕರು ಮತ್ತು ಸಿಆರ್‌ಪಿಗಳನ್ನು ಎನ್ಯುಮರೇಟರ್‌ಗಳಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಸ್ಮಾರ್ಟ್‍ಫೋನ್‌ ಬಳಕೆ ಗೊತ್ತಿರುವ ಮತ್ತು ಲವಲವಿಕೆಯಿಂದ ಕೆಲಸ ಮಾಡುವವರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಲು ಎಂ.ಆರ್‌.ರವಿ ಸೂಚಿಸಿದರು. ಮಾಸ್ಟರ್ ಟ್ರೈನರ್ಸ್‍ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು ಇವರು ಫೀಲ್ಡ್ ಟ್ರೈನರ್ಸ್‍ಗಳಿಗೆ ತರಬೇತಿ ನೀಡಲಿದ್ದಾರೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಎನ್ಯೂಮರೇಟರ್‌ಗಳ ಅಗತ್ಯವಿರಬಹುದು ಎಂದು ಅಂದಾಜಿಸಲಾಗಿದೆ ಎಂದರು. ಜನಗಣತಿ ಸಿದ್ಧತೆಗಾಗಿ ಜಿಲ್ಲಾ ಮಟ್ಟದಲ್ಲಿ ಮೂಲಸೌಕರ್ಯ ಮತ್ತು ವಾಹನ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಅಗತ್ಯ ತಾಂತ್ರಿಕ ಸಹಾಯಕರು ಮತ್ತು ಎಂಟಿಎಸ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಶೀಘ್ರವೇ ನೇಮಿಸಿಕೊಳ್ಳಲು ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.