ADVERTISEMENT

ಕೋಲಾರ ಡಿಸಿಸಿ ಬ್ಯಾಂಕ್‌ ಚುನಾವಣೆ | ಕಣದಲ್ಲಿ 29 ಅಭ್ಯರ್ಥಿಗಳು; 436 ಮತದಾರರು!

18 ನಿರ್ದೇಶಕರ ಕ್ಷೇತ್ರಗಳಿಂದ ಒಟ್ಟು 495 ಅರ್ಹ ಮತದಾರರು, 625 ಮತ ಅನರ್ಹ

ಕೆ.ಓಂಕಾರ ಮೂರ್ತಿ
Published 27 ಮೇ 2025, 6:27 IST
Last Updated 27 ಮೇ 2025, 6:27 IST
<div class="paragraphs"><p>ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಚೇರಿ</p></div>

ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಚೇರಿ

   

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, 495 ಸಹಕಾರ ಸಂಘಗಳ ಡೆಲಿಗೇಟ್‌ಗಳು ಮತದಾನದ ಅರ್ಹತೆ ಪಡೆದಿದ್ದಾರೆ. ಇನ್ನುಳಿದ 625 ಸಂಘಗಳ ಮತಗಳು ಅನರ್ಹವಾಗಿವೆ.

ಎರಡು ಜಿಲ್ಲೆಗಳಿಂದ ಸೇರಿ ಒಟ್ಟು 1,129 ಸಹಕಾರ ಸಂಘಗಳು ಇವೆ. ಅದರಲ್ಲಿ ಸಾಲ ಮತ್ತು ಷೇರು ಸುಸ್ತಿದಾರ ಸಂಘಗಳು 9 ಇವೆ. ಅದರಲ್ಲಿ ಸಹಕಾರ ಕಾಯ್ದೆ ಪ್ರಕಾರ 495 ಸಹಕಾರ ಸಂಘಗಳು ಮಾತ್ರ ಮತದಾನಕ್ಕೆ ಅರ್ಹತೆ ಪಡೆದುಕೊಂಡಿವೆ.

ADVERTISEMENT

18 ನಿರ್ದೇಶಕರ ಕ್ಷೇತ್ರಗಳಲ್ಲಿ ಆರರಲ್ಲಿ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ 12 ಕ್ಷೇತ್ರಗಳಿಗೆ ಮೇ 28ರಂದು ಕೋಲಾರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ಅಂದು ಈ 12 ಕ್ಷೇತ್ರಗಳಿಗೆ 29 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 436 ಸಹಕಾರ ಸಂಘಗಳ ಡೆಲಿಗೇಟ್‌ಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಎರಡೂ ಜಿಲ್ಲೆಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ನಿರ್ದೇಶಕರ ಸ್ಥಾನ ನಿರ್ಧರಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಅತಿ ಹೆಚ್ಚು ಮತಗಳು (147) ಇವೆ. ಇದೇ ಕ್ಷೇತ್ರದಿಂದ ಮತ್ತೊಂದು ಸ್ಥಾನಕ್ಕೆ ಕೋಲಾರ ಜಿಲ್ಲೆಯಿಂದ 126 ಮತಗಳಿವೆ.

ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಬರುವ ಇನ್ನಿತರೆ ಸಹಕಾರ ಸಂಘಗಳ ನಿರ್ದೇಶಕರ ಸ್ಥಾನವನ್ನು 48 ಮತದಾರ ಸದಸ್ಯರು ನಿರ್ಧರಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹಾಗೂ ಶಾಸಕ ಕೆ.ವೈ.ನಂಜೇಗೌಡ ಬೆಂಬಲಿಗ ಮಾಲೂರಿನ ಬಿ.ಆರ್‌.ಶ್ರೀನಿವಾಸ್‌ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ. 25 ಮತ ಪಡೆಯುವವರು ಗೆಲ್ಲಲಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಕ್ಷೇತ್ರಕ್ಕೆ ಕೇವಲ ಐದು ಮತದಾರರು ಇದ್ದಾರೆ.

ಈಗಾಗಲೇ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆ ವಿತರಿಸಲಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಕಾಂಗ್ರೆಸ್‌ ಪಕ್ಷವೇ ಎದುರಾಳಿ ಆಗಿದ್ದು, ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ‘ಎ’ ತಂಡ ಹಾಗೂ ‘ಬಿ’ ತಂಡ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇನ್ನುಳಿದಂತೆ ಜೆಡಿಎಸ್‌–ಬಿಜೆಪಿ ಪ್ರಚಾರ ಬಹಿರಂಗವಾಗಿ ಕಾಣುತ್ತಿಲ್ಲ.

12 ಕ್ಷೇತ್ರಗಳಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಭಾರಿ ಕಸರತ್ತು ನಡೆಯುತ್ತಿದ್ದು, ಹಣದ ಹೊಳೆಯೇ ಹರಿಯುತ್ತಿರುವ ಆರೋಪ ಕೇಳಿಬಂದಿದೆ. ಜೊತೆಗೆ ವಿವಿಧ ಸ್ಥಾನಮಾನಗಳ ಆಮಿಷವೊಡ್ಡುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ಎರಡು ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಕೊನೆ ಕ್ಷಣದವರೆಗೆ ಯಾರು ಯಾವ ಅಭ್ಯರ್ಥಿಗೆ ಮತದಾನ ಮಾಡಲಿದ್ದಾರೆ ಎಂಬುದು ಭಾರಿ ನಿಗೂಢವಾಗಿದೆ. ಅದರಲ್ಲೂ ಕಡಿಮೆ ಮತಗಳು ಇರುವ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಾಡು ಹೇಳತೀರದು. ಹೀಗಾಗಿ, ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಬೆಂಬಲ ಕೂಡ ಪಡೆಯುತ್ತಿದ್ದಾರೆ. ಇನ್ನು ಅವಿರೋಧ ಆಯ್ಕೆಯಾಗಿರುವ ನಿರ್ದೇಶಕ ಕ್ಷೇತ್ರಗಳಲ್ಲಿ ಮತದಾರರು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳು ಮಾತ್ರ ಖುಷಿಯಾಗಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಎಂ.ರೂಪಕಲಾ ಶಶಿಧರ್ (ಕೆಜಿಎಫ್‌), ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ), ಕೊತ್ತೂರು ಮಂಜುನಾಥ್ (ಮುಳಬಾಗಿಲು ಟಿಎಪಿಸಿಎಂಎಸ್‌), ರಮೇಶ್‌ ಡಿ.ಎಸ್‌.(ಮಾಲೂರು), ಎ.ನಾಗರಾಜ (ಶಿಡ್ಲಘಟ್ಟ), ವಿ.ಹನುಮೇಗೌಡ (ಮಂಚೇನಹಳ್ಳಿ) ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀನಿವಾಸಪುರ: ಐವರು ಮತದಾರರು!

ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕ್ಷೇತ್ರ ಸ್ಥಾನದ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಇಲ್ಲೂ ಕಾಂಗ್ರೆಸ್‌ ಬಣಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಕೇವಲ ಐವರು ಮತದಾರರಿದ್ದು ಮೂರು ಮತ ಪಡೆಯುವವರಿಗೆ ವಿಜಯಮಾಲೆ ಬೀಳಲಿದೆ. ಈಗ ಆ ಮೂರು ಮತಗಳಿಗೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಬೆಂಬಲದಿಂದ ಸ್ಪರ್ಧಿಸಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎ.ಸಿ.ನಾಗರತ್ನ ವಿರುದ್ಧ ಬಿ.ಎಸ್‌.ಶಶಿಕುಮಾರ್‌ ಬಿ.ವಿ.ಸುರೇಶ್‌ ರೆಡ್ಡಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಇನ್ನು ಮಾಜಿ ನಿರ್ದೇಶಕ ವೆಂಕಟರೆಡ್ಡಿ ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ಸುಬ್ಬಾರೆಡ್ಡಿ ಅವರ ಮತಗಳು ಯಾರ ಪಾಲಾಗಲಿವೆ ಎಂಬ ಕುತೂಹಲವಿದೆ. ವಿಶೇಷವೆಂದರೆ ಎಲ್ಲಾ ಐದು ಮತಗಳು ಕಾಂಗ್ರೆಸ್‌ನದ್ದೇ. ರಮೇಶ್‌ ಕುಮಾರ್‌ ಬಣಕ್ಕೆ ಶಾಕ್ ನೀಡಲು ಇನ್ನೊಂದು ಬಣ ತೆರೆಮರೆಯಲ್ಲಿ ಭಾರಿ ಪ್ರಯತ್ನ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.