ADVERTISEMENT

ದ್ವಿತೀಯ ಪಿಯುಸಿ: ಕಳೆದ ಬಾರಿ ಕೋಲಾರ ಜಿಲ್ಲೆಗೆ 16ನೇ ಸ್ಥಾನ, ಈ ಸಲ?

ಈ ಸಲವಾದರೂ ‘ಟಾಪ್‌ 10’ ಒಳಗೆ ಕಾಣಿಸಿಕೊಳ್ಳುವುದೇ ಕೋಲಾರ ಜಿಲ್ಲೆ? ಫೆ.28ರಿಂದ ದ್ವಿತೀಯ ಪಿಯು ಪರೀಕ್ಷೆ

ಕೆ.ಓಂಕಾರ ಮೂರ್ತಿ
Published 23 ಫೆಬ್ರುವರಿ 2026, 3:17 IST
Last Updated 23 ಫೆಬ್ರುವರಿ 2026, 3:17 IST
ರಾಜಶೇಖರ್‌
ರಾಜಶೇಖರ್‌   

ಕೋಲಾರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಯು ಕಳೆದ ವರ್ಷ ಪ್ರಪಾತಕ್ಕೆ ಕುಸಿದಿದ್ದು, ಈ ಬಾರಿಯಾದರೂ ರ‍್ಯಾಂಕಿಂಗ್‌ ಸುಧಾರಿಸಬೇಕೆಂದು ಹತ್ತಾರು ಕಸರತ್ತುಗಳನ್ನು ನಡೆಸಲಾಗುತ್ತಿದೆ.

ರಾಜ್ಯದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಕನಿಷ್ಠ ಅಗ್ರ 10ರೊಳಗೆ ಸ್ಥಾನ ಕಾಣಿಸಿಕೊಳ್ಳಲು ಹೆಣಗಾಡುತಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ಮುಂದೆ ದೊಡ್ಡ ಸವಾಲು ಇದೆ.

2024–25ನೇ ಸಾಲಿನಲ್ಲಿ ಶೇ 72.45 ಫಲಿತಾಂಶದೊಂದಿಗೆ 16ನೇ ಸ್ಥಾನಕ್ಕೆ ಕುಸಿದಿದ್ದರಿಂದ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿತ್ತು. ಕಳಪೆ ಫಲಿತಾಂಶಕ್ಕೆ ಯಾರು ಕಾರಣ? ಯಾರು ಹೊಣೆ ಎಂಬ ಚರ್ಚೆಯೂ ಕೆಡಿಪಿ ಸಭೆಗಳಲ್ಲಿ ನಡೆದಿತ್ತು. ಇಲಾಖೆಯ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಎಚ್ಚರಿಕೆಯನ್ನೂ ನೀಡಿದ್ದರು.

ADVERTISEMENT

2023–24ನೇ ಸಾಲಿನಲ್ಲಿ ಶೇ 86.12 ಫಲಿತಾಂಶದೊಂದಿಗೆ 12ನೇ ಸ್ಥಾನ ಪಡೆದು ಚೇತರಿಸಿಕೊಂಡಿತ್ತು. ಇನ್ನೇನು ಸುಧಾರಣೆ ಕಾಣುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಕೆಳಗೆ ಬಿದ್ದಿತ್ತು.

ಪರೀಕ್ಷೆ ಬರೆಯುವುದನ್ನು ವೆಬ್‌ ಕಾಸ್ಟಿಂಗ್‌ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಫಲಿತಾಂಶದಲ್ಲಿ ಹಿನ್ನಡೆಗೆ ಕಾರಣ ಎಂಬ ಸಬೂಬನ್ನು ಅಧಿಕಾರಿಗಳು ಹಾಗೂ ಉಪನ್ಯಾಸಕರು ಹೇಳಿದ್ದರು. ಮೊದಲ ಸ್ಥಾನ ಪಡೆದ ಜಿಲ್ಲೆಯಲ್ಲಿ ವೆಬ್‌ ಕಾಸ್ಟಿಂಗ್‌ ಮಾಡಲಿಲ್ಲವೇ? ಅಲ್ಲಿನ ವಿದ್ಯಾರ್ಥಿಗಳಿಗೆ ಭಯವಾಗಲಿಲ್ಲವೇ ಎಂದು ಪ್ರಶ್ನಿಸಿದ್ದರು. ಆಗ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ.

ಈ ಸಲ ಫೆ.28ಕ್ಕೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗುತ್ತಿದೆ. ಕೇವಲ ಐದು ದಿನಗಳು ಬಾಕಿ ಇದ್ದು, ಈ ಬಾರಿಯಾದರೂ ಅಗ್ರ 10ರೊಳಗಿನ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಹಲವಾರು ಯೋಜನೆ ಹಾಕಿಕೊಂಡು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಂತೆ ಉಪನ್ಯಾಸಕರಿಗೂ ಅಗ್ನಿಪರೀಕ್ಷೆ ಎದುರಾಗಿದೆ.

ವಿಶೇಷ ತರಗತಿ, ಹೆಚ್ಚುವರಿ ತರಗತಿ, ಪರಿಹಾರ ಬೋಧನೆ, ಸೇತುಬಂಧ ಕೋರ್ಸ್‌, ಗುಂಪು ಅಧ್ಯಯನ ನಡೆಸಲಾಗಿದೆ. ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ಮಕ್ಕಳನ್ನು ಸಜ್ಜುಗೊಳಿಸಲಾಗಿದೆ.

‘ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಬಹಳಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ಹಗಲಿರುಳು ಶ್ರಮಿಸುತ್ತಿದ್ದೇವೆ. ತರಗತಿಗೆ ಹೆಚ್ಚು ಗೈರಾಗಿರುವ, ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ಹಾಗೂ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳ ಮನೆಗೆ ಪ್ರಾಚಾರ್ಯರು, ಉಪನ್ಯಾಸಕರು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.‌ ಈ ಬಾರಿ ಫಲಿತಾಂಶದಲ್ಲಿ ಖಂಡಿತ ಸುಧಾರಣೆ ಆಗಲಿದೆ’ ಎಂದು ಡಿಡಿಪಿಯು ರಾಜಶೇಖರ್‌ ಎನ್‌.ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದ್ಪಿತೀಯ ಪಿಯು ಪರೀಕ್ಷೆ ಮಕ್ಕಳ ಭವಿಷ್ಯ ನಿರ್ಧರಿಸುವ ಪ್ರಮುಖ ಘಟ್ಟ ಕೂಡ. ಹೀಗಾಗಿ, ವಿಷಯವಾರು ಕಾರ್ಯಾಗಾರ ನಡೆಸಲಾಗಿದೆ, ಸೆಮಿನಾರ್‌ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಉಪನ್ಯಾಸಕರು ಬಹಳಷ್ಟು ಶಮ್ರ ಹಾಕಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಜವಾಬ್ದಾರಿಯೂ ಇದೆ’ ಎಂದರು.

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 14,560 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ಹೊಸಬರು 13,163 ಮಂದಿ, ಖಾಸಗಿ ಅಭ್ಯರ್ಥಿಗಳು 267, ಫಲಿತಾಂಶ ಸುಧಾರಣೆಗೆ ಒಬ್ಬರು, ಪುನರಾವರ್ತಿತ 1,129 ವಿದ್ಯಾರ್ಥಿಗಳಿದ್ದಾರೆ. ಒಟ್ಟು 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಮಕ್ಕಳ ಮನೆಗೆ ಭೇಟಿ ಸಮಾಲೋಚನೆ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಎರಡು ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದು ಮಕ್ಕಳ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ. ರಾಜ್ಯದಲ್ಲಿ ಕೋಲಾರ ಜಿಲ್ಲೆಯು ಅಗ್ರ 10 ಸ್ಥಾನದೊಳಗೆ ಕಾಣಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಿದ್ದೇವೆ. ಈ ಬಾರಿಯೂ ವೆಬ್‌ ಕ್ಯಾಸ್ಟಿಂಗ್‌ ಇರಲಿದೆ. ಮಕ್ಕಳು ಯಾವುದೇ ಭಯ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆಯಬೇಕು ರಾಜಶೇಖರ್‌ ಎನ್‌.ಪಟ್ಟಣಶೆಟ್ಟಿ ಡಿಡಿಪಿಯು ಕೋಲಾರ

ಫೆ.28ಕ್ಕೆ ಪರೀಕ್ಷೆ ಆರಂಭ

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆ. 28ರಿಂದ ಮಾರ್ಚ್‌ 17ರವರೆಗೆ ನಡೆಯಲಿವೆ. ಬೆಳಿಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ 1 ಗಂಟೆವರೆಗೆ ಸಮಯಾವಕಾಶ ಇರಲಿದೆ. ಜಿಲ್ಲೆಯಲ್ಲಿ 33 ಸರ್ಕಾರಿ 3 ಆದರ್ಶ ಪಿಯು ಕಾಲೇಜು 1 ಎಂಡಿಆರ್‌ಎಸ್‌ 9 ಅನುದಾನಿತ ಹಾಗೂ 79 ಖಾಸಗಿ ಕಾಲೇಜುಗಳಿದ್ದು 14560 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಪ್ರವೇಶ ಪತ್ರ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.