
ಕೋಲಾರ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ, ನವೀಕೃತ ಪ್ರಯೋಗಾಲಯ ಹಾಗೂ ಕಾಲೇಜು ಸಭಾಂಗಣದ ಉದ್ಘಾಟನೆ ಶನಿವಾರ ನಡೆಯಿತು.
ದ್ವಿತೀಯ ಪಿಯುಸಿ ಪೂರ್ವಸಿದ್ಧಾತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಾವು ತಂತ್ರಜ್ಞಾನಕ್ಕೆ ಶರಣಾಗದೆ ಬದುಕಿನ ನೈತಿಕ ಪಾಠ ಕಲಿಯುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.
ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರ, ಬಡವ-ಶ್ರೀಮಂತ ಎಂಬ ಭೇದ ಭಾವ ಎಲ್ಲವೂ ಇದೆ. ಆದ್ದರಿಂದ ಬದುಕಿನಲ್ಲಿ ವೈಜ್ಞಾನಿಕತೆ, ಬಾಂಧವ್ಯ, ನೈತಿಕತೆ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ನನ್ನ ಬದುಕು ರೂಪಿಸಿದ, ಜೀವನದ ಪಾಠ ಕಲಿಸಿದ, ಅಕ್ಷರ ದೀಕ್ಷೆ ಕೊಟ್ಟ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು, ನಾನು ಓದಿದ ಶಾಲೆ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹಟಮಾಡಿ ಪಡೆದಿದ್ದೇನೆ ಎಂದು ಹೇಳಿದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ‘ಕೊಹಿನೂರ್ ಡೈಮಂಡ್ ಅನ್ನು ಬ್ರಿಟಿಷರು ಕದ್ದುಕೊಂಡು ಹೋಗಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, 130 ವರ್ಷ ಇತಿಹಾಸ ಹೊಂದಿರುವ ಈ ಕಾಲೇಜು ನಮ್ಮ ಕೊಹಿನೂರ್ ಡೈಮಂಡ್. ಇದನ್ನು ಪ್ರತಿಯೊಬ್ಬರೂ ಉಳಿಸಿ ಅಭಿವೃದ್ಧಿ ಪಡಿಸಲು ಮುಂದಾಗಬೇಕು’ ಎಂದು ತಿಳಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪರಶುರಾಂ ಎನ್.ಉಂಕಿ ಪ್ರಾಸ್ತವಿಕವಾಗಿ ಮಾತನಾಡಿ, ‘ಕಾಲೇಜು ಸಭಾಂಗಣ, ನೂತನ ಕಟ್ಟಡ ನಿರ್ಮಾಣ ಮತ್ತು ಹಳೆಯ ಕಟ್ಟಡ ದುರಸ್ತಿಗಾಗಿ ಸರ್ಕಾರದಿಂದ ₹ 1.65 ಕೋಟಿ ಅನುದಾನ ಮಂಜೂರಾಗಲು ಸಹಕಾರ ನೀಡಿದ ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಕೆ.ವಿ.ಪ್ರಭಾಕರ್, ಸಿಎಸ್‍ಆರ್ ನಿಧಿಯಿಂದ ನವೀಕೃತ ಪ್ರಯೋಗಾಲಯ ನಿರ್ಮಾಣಮಾಡಲು ಸಾಧ್ಯವಾಗಿದೆ’ ಎಂದರು.
ವಸತಿ ಸಚಿವ ಜಮೀರ್ ಅಹಮದ್ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್, ಗುತ್ತಿಗೆದಾರ ವಿ.ಮುನಿರಾಜು, ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ರಾಮಮೂರ್ತಿ, ಜಗದೀಶ ಆರ್.ಜಿ. ಮಚಿಂದ್ರ ಘೋರ್ಪಡೆ, ನಿತಿನ್ ಕಂಕ್, ಸನ್ನಿ, ಪಂಕಜ್, ಮನಷ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಎನ್.ಚಂದ್ರಶೇಖರ್, ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಬಿ.ಎಂ.ರಾಧಮ್ಮ, ಉಪನ್ಯಾಸಕರಾದ ಪಾರ್ವತಮ್ಮ.ಎನ್ ರುಕ್ಮಣಿ, ಪದ್ಮ, ಆನಂದ್ ಕುಮಾರ್, ಲತಾ, ಶ್ರೀನಾಥ್, ಗೋವಿಂದ, ಶಾಹೀರಾ ಭಾನು, ತಜಮುಲ್ ಅಹಮದ್, ಭಾರತಿ, ನೇತ್ರಾವತಿ, ಕೆಂಪೇಗೌಡ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.