
ಕೋಲಾರ: ಆರೋಗ್ಯ ಇಲಾಖೆಯಿಂದ ಕೋಲಾರ ಜಿಲ್ಲೆಗೆ ₹ 100 ಕೋಟಿಗೂ ಅಧಿಕ ಅನುದಾನದಲ್ಲಿ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲ್ಲೂಕಿನ ನರಸಾಪುರ ಬಳಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ, ಕೋಲಾರ ನಗರದ ಎಸ್‌ಎನ್ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ತುರ್ತು ನಿಗಾ ಬ್ಲಾಕ್ (ಕ್ರಿಟಿಕಲ್ ಕೇರ್ ಬ್ಲಾಕ್), ಡಯಾಲಿಸ್ ವಿಭಾಗವನ್ನು ಮಂಗಳವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಯುರೋಲಜಿ, ನೆಫ್ರೋಲಜಿ, ಕಾರ್ಡಿಯಾಲಜಿ ಸೇರಿದಂತೆ 9 ಹೊಸ ಸೂಪರ್ ಸ್ಪೆಷಾಲಿಟಿ ವೈದ್ಯರ ಹುದ್ದೆಗಳನ್ನು ಸೃಜಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲೇ ತಜ್ಞ ವೈದ್ಯರ ಸೇವೆ ಲಭ್ಯವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ ಕಾಲೇಜಿಗೆ ಹೋಗಬೇಕಿಲ್ಲ ಎಂದರು.
ತಾಲ್ಲೂಕು ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ಹೆರಿಗೆ ಮತ್ತು ತುರ್ತು ಚಿಕಿತ್ಸೆಗಾಗಿ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ತಜ್ಞ ವೈದ್ಯರ ಮರುಹೊಂದಾಣಿಕೆ ಮಾಡಿ 24 ಗಂಟೆಯೂ ಸೇವೆ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲಾಸ್ಪತ್ರೆಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಡೇ ಕೇರ್ ಕೆಮೋಥೆರಪಿ ಕೇಂದ್ರ ತೆರೆಯಲಾಗುತ್ತಿದೆ. ಬೆಂಗಳೂರಿನ ಕಿದ್ವಾಯಿಗೆ ಹೋಗುವ ಅವಶ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ, ‘ನಗರದ ಅಂತರಗಂಗೆಯಿಂದ ಕೋಲಾರಮ್ಮನ ಕೆರೆಯವರೆಗೆ ಮಳೆ ನೀರು ಸರಾಗವಾಗಿ ಹರಿಯಲು ₹ 100 ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ 15 ದಿನಗಳಲ್ಲಿ ಆರಂಭವಾಗಲಿದೆ’ ಎಂದರು.
ನಗರದ ರಿಂಗ್ ರೋಡ್ ಅಭಿವೃದ್ಧಿಗೆ ₹ 3 ಕೋಟಿ ವೆಚ್ಚದಲ್ಲಿ ಡಿಪಿಆರ್ ಮಾಡಲಾಗುತ್ತಿದೆ. ಎಪಿಎಂಸಿಗೆ ಶೀಘ್ರವೇ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಎತ್ತಿನಹೊಳೆ ಯೋಜನೆಯಡಿ ಶೀಘ್ರದಲ್ಲೇ ಜಿಲ್ಲೆಯ ಕೆರೆಗಳಿಗೆ ಕುಡಿಯುವ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ನರಸಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನನ್ನ ಶಾಸಕ ಸ್ಥಾನದ ಅವಧಿಯಲ್ಲೇ ಶಂಕುಸ್ಥಾಪನೆ ಆಗಿ ಉದ್ಘಾಟನೆ ಆಗುತ್ತಿರುವುದು ವಿಶೇಷ ಎಂದು ನುಡಿದರು.
ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿನ ಸೌಲಭ್ಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಹಳೆ ಕಟ್ಟಡವನ್ನು ನವೀಕರಣ ಮಾಡಲಾಗುವುದು ಎಂದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಕೆ.ವಿ.ಗೌತಮ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಕೆ.ವಸಂತ್ ಕುಮಾರ್, ಕಾರ್ಯಪಾಲಕ ಎಂಜಿನಿಯರ್ ಎಂ.ಬಿ.ನಾಗರಾಜ್, ಉಪವಿಭಾಗಾಧಿಕಾರಿ ಡಾ.ಮೈತ್ರಿ. ತಹಶೀಲ್ದಾರ್ ಡಾ.ನಯನಾ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್, ಎಸ್ಎನ್‌ಆರ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಜಿ.ಜಗದೀಶ್, ಟಿಎಚ್‌ಒ ಡಾ.ನಾರಾಯಣಸ್ವಾಮಿ, ಡಾ.ಚಾರಿಣಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ನಿರೂಪಿಸಿದರು.
ಕೆಜಿಎಫ್‌ಗೆ ಗೃಹ ಸಚಿವರ ಭೇಟಿ ಸೇರಿ ಜಿಲ್ಲೆಯಲ್ಲಿ ಒಂದೇದಿನ ಮೂವರು ಸಚಿವರು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ ಜಿಲ್ಲಾಸ್ಪತ್ರೆಗಳಲ್ಲೇ ಕ್ಯಾನ್ಸರ್ ರೋಗಿಗಳಿಗೆ ಡೇ ಕೇರ್ ಕೆಮೋಥೆರಪಿ
ಹಿಂದಿನ ಸರ್ಕಾರದ ಉಸ್ತುವಾರಿ ಸಚಿವರು ಮೂರು ತಿಂಗಳಿಗೆ ಒಮ್ಮೆ ಕೋಲಾರಕ್ಕೆ ಬರುತ್ತಿದ್ದರು. ನಾನು ತಿಂಗಳಿಗೆ ಮೂರು ಬಾರಿ ಬರುತ್ತೇನೆ. ದಿನೇಶ್ ಗುಂಡೂರಾವ್ ಏಳು ಬಾರಿ ಬಂದಿದ್ದಾರೆಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ
ಪರ್ಸೆಂಟೇಜ್ ತೆಗೆದುಕೊಂಡರೆ ಯಾವುದೇ ಕೆಲಸ ಸರಿಯಾಗಿ ನಡೆಯಲ್ಲ. ನಾನು ಪರ್ಸೆಂಟೇಜ್ ಮುಟ್ಟುವ ವ್ಯಕ್ತಿ ಅಲ್ಲ. ಅಭಿವೃದ್ಧಿಯಲ್ಲಿ ಸಂಸದ ಮಲ್ಲೇಶ್ ಬಾಬು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆಕೊತ್ತೂರು ಮಂಜುನಾಥ್ ಶಾಸಕ
ನಮ್ಮ ಜೋಡಿ ಕಂಡು ವಿರೋಧಿಗಳಿಗೆ ಉರಿ ಯಾವುದೇ ಕೆಲಸ ಮಾಡಲು ಎಂ.ಎಲ್.ಅನಿಲ್ ಕುಮಾರ್ ನನಗೆ ಮಾರ್ಗದರ್ಶನ ನೀಡುತ್ತಾರೆ. ಅವರು ನೀಡಿದ ಯೋಜನೆಗಳೆಲ್ಲಾ ಶೇ 100ರಷ್ಟು ಯಶಸ್ವಿಯಾಗುತ್ತಿವೆ. ನನ್ನದೇ ಕೆಲ ಯೋಜನೆಗಳು ಕೆಲವು ಸಲ ವಿಫಲವಾಗಿದ್ದುಂಟು ಎಂದು ಕೊತ್ತೂರು ಮಂಜುನಾಥ್ ಹೇಳಿದರು. ಯಾರು ಚಟುವಟಿಕೆಯಿಂದ ಕೂಡಿರುತ್ತಾರೋ ಅವರ ಮೇಲೆ ಜನ ಮುಗಿಬೀಳುತ್ತಾರೆ. ವಿರೋಧಿಗಳು ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಶಕ್ತಿ ಏನೆಂಬುದು ಗೊತ್ತಾಗಲ್ಲ. ನಾವಿಬ್ಬರು ಜೊತೆಯಲ್ಲಿರುವುದನ್ನು ಕಂಡು ಕೆಲವರಿಗೆ ಉರಿಯುತ್ತಿದೆ. ಇನ್ನೂ ಹೆಚ್ಚು ಉರಿಯಲಿ ಎಂದು ನಾವು ಹೆಚ್ಚು ಜೊತೆಗಿರುತ್ತೇವೆ ಎಂದರು. ಸಚಿವ ಬೈರತಿ ಸುರೇಶ್ ಮಾತನಾಡಿ ಕೊತ್ತೂರು ಹಾಗೂ ಅನಿಲ್ ಹಕ್ಕಬುಕ್ಕರಂತೆ ಕೆಲಸ ಮಾಡುತ್ತಿದ್ದಾರೆ. ಮಂಜು ಕಮಿಷನ್ ಹೊಡೆಯಲ್ಲ ಜಾತಿ ಬಲವೂ ಇಲ್ಲ ಎಂದು ತಿಳಿಸಿದರು.
ದಾಖಲೆ ಕೇಳಿದರೆ ಪೋಸ್ಟ್‌ನಲ್ಲಿ ಕಳಿಸಿವೆ ನನ್ನ ಅವಧಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಪ್ರತಿಯೊಂದು ಕೆಲಸದ ವರ್ಕ್ ಆರ್ಡರ್ ಮತ್ತು ಟೆಂಡರ್ ವಿವರಗಳನ್ನು ದಾಖಲೆಗಳ ರೂಪದಲ್ಲಿ ಇಡಲಾಗಿದೆ. ಎದುರಾಳಿಗಳು ಸಾರ್ವಜನಿಕರು ಅಥವಾ ಮಾಧ್ಯಮದವರು ಬಯಸಿದರೆ ಈ ಮಾಹಿತಿಯನ್ನು ಪಡೆದುಕೊಳ್ಳಬಹುದು. ಬೇಕಾದರೆ ರಿಜಿಸ್ಟರ್ ಪೋಸ್ಟ್‌ನಲ್ಲಿ ಕಳಿಸಿಕೊಡುವೆ ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು.
ಆರೋಗ್ಯ ಇಲಾಖೆ–ಏನೇನು ಸೌಲಭ್ಯ?
ನರಸಾಪುರ ಬಳಿ ಹೆದ್ದಾರಿ ಪಕ್ಕದಲ್ಲಿ ₹ 12.5 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಾಲನೆ
ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ₹ 16.5 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ತುರ್ತು ನಿಗಾ ಬ್ಲಾಕ್ (ಸಿಸಿಬಿ) ಲೋಕಾರ್ಪಣೆ (50 ಬೆಡ್)
₹1.25 ಕೋಟಿ ವೆಚ್ಚದಲ್ಲಿ 20 ಹಾಸಿಗೆಗಳ ಅತ್ಯಾಧುನಿಕ ಡಯಾಲಿಸಿಸ್ ಘಟಕಕ್ಕೆ ಚಾಲನೆ
ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯ ದುರಸ್ತಿಗಾಗಿ ಹೆಚ್ಚುವರಿಯಾಗಿ ₹ 10 ಕೋಟಿ ಅನುದಾನ
ಮಾಲೂರಿಗೆ ₹ 40 ಕೋಟಿ ವೆಚ್ಚದಲ್ಲಿ ನೂತನ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ. ಶೀಘ್ರವೇ ಟೆಂಡರ್
ಮುಳಬಾಗಿಲಿನಲ್ಲಿ ₹ 20 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್) ಕೆಲಸ ಪ್ರಗತಿ
ನಂಗಲಿಯಲ್ಲಿ ₹ 12.5 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿ ಪ್ರಗತಿ
ಕೆಜಿಎಫ್ ಆಸ್ಪತ್ರೆಯ ಮೇಲ್ದರ್ಜೆಗೆ ₹ 10 ಕೋಟಿ ಅನುದಾನ
ರಹಮತ್ ನಗರ ಹಾಗೂ ನೂಗಲಬಂಡೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುಮೋದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.