ADVERTISEMENT

ಕೋಲಾರ | ಕೋಲಾರದತ್ತ ಪ್ರಮುಖ ಕಂಪನಿಗಳ ಚಿತ್ತ

ನರಸಾಪುರ, ವೇಮಗಲ್‌, ಮಾಲೂರು ಕೈಗಾರಿಕಾ ಪ್ರದೇಶ; ಸ್ಥಳೀಯರಿಗೆ ಉದ್ಯೋಗಕ್ಕೆ ಒತ್ತು ನೀಡುವವರೇ?

ಕೆ.ಓಂಕಾರ ಮೂರ್ತಿ
Published 17 ಫೆಬ್ರುವರಿ 2026, 6:06 IST
Last Updated 17 ಫೆಬ್ರುವರಿ 2026, 6:06 IST
ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ದ್ವಾರ
ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ದ್ವಾರ   

ಕೋಲಾರ: ಕೃಷಿ, ಹೈನುಗಾರಿಕೆ ಮತ್ತು ರೇಷ್ಮೆ ಉದ್ಯಮವನ್ನು ಒಂದು ಕಾಲಕ್ಕೆ ಮುಖ್ಯ ಕಸುಬಾಗಿಸಿಕೊಂಡಿದ್ದ ಕೋಲಾರ ಜಿಲ್ಲೆಯತ್ತ ಈಗ ದೇಶ, ವಿದೇಶದ ಪ್ರಮುಖ ಕೈಗಾರಿಕೆ ಹಾಗೂ ಕಂಪನಿಗಳ ಚಿತ್ತ ಹರಿದಿದೆ.

ಇದಕ್ಕೆ ಈಗ ಹೊಸ ಸೇರ್ಪಡೆ ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ (ಟಿಎಎಸ್‌ಎಲ್‌) ನಿರ್ಮಿಸಿರುವ ಏರ್‌ಬಸ್‌ ಎಚ್‌ 125 ಲಘು ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕ. ಖಾಸಗಿ ವಲಯದಲ್ಲಿ ದೇಶದ ಮೊದಲ ಹೆಲಿಕಾಪ್ಟರ್‌ ತಯಾರಿಕಾ ಘಟಕ ಇದಾಗಿದೆ. ವಾರ್ಷಿಕ 10 ಲಘು ಹೆಲಿಕಾಪ್ಟರ್‌ ತಯಾರು ಮಾಡಲಾಗುತ್ತದೆ ಎಂಬುದು ಗೊತ್ತಾಗಿದೆ.

ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲೇ ಈಚೆಗೆ ಜರ್ಮನಿಯ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ₹315 ಕೋಟಿ ಹೂಡಿಕೆಯೊಂದಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಈ ಯೋಜನೆಯಿಂದ 550ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭಿಸಲಿವೆ ಎಂಬುದಾಗಿ ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದರು.

ADVERTISEMENT

ಹಿಂದೆ ಕೆಜಿಎಫ್‌ ಚಿನ್ನದ ಗಣಿ ಮೂಲಕ ವಿಶ್ವ ಭೂಪಟದಲ್ಲಿ ಕಾಣಿಸಿಕೊಂಡಿದ್ದ ಕೋಲಾರ ಈಗ ಕೈಗಾರಿಕೆಗಳ ಕಾರಣಕ್ಕೂ ಹೆಸರು ಮಾಡುತ್ತಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ 8 ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದ್ದು ನರಸಾಪುರ, ವೇಮಗಲ್‌ ಹಾಗೂ ಮಾಲೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಬೇಡಿಕೆ ಇದೆ. ಈ ಭಾಗದಲ್ಲಿ ಮೂರೂ ಸಾವಿರಕ್ಕೂ ಅಧಿಕ ಎಕರೆ ಭೂಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ 6 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪ್ರಕ್ರಿಯೆ ವಿವಿಧ ಹಂತದಲ್ಲಿದೆ.

ಕೇಂದ್ರ ಸ್ಥಾನದಲ್ಲಿರುವ ನರಸಾಪುರದಲ್ಲಿ ಕೆಐಎಡಿಬಿಯು ಮೂರು ಹಂತಗಳಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಡೆಸುತ್ತಿದೆ. ಇನ್ನು ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರದಲ್ಲಿ ಕೈಗಾರಿಕಾ ಪ್ರದೇಶದಲ್ಲೂ ಸ್ಥಾಪಿಸಲು ಉದ್ದೇಶಿಸಿದ್ದು, ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ. ಶ್ರೀನಿವಾಸಪುರದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಶಾಸಕರು ಪ್ರಯತ್ನ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಹೋಂಡಾ, ಟಾಟಾ ಎಲೆಕ್ಟ್ರಾನಿಕ್ಸ್‌, ಮಹೀಂದ್ರಾ ಏರೋಸ್ಟೇಸ್‌ ಸೇರಿದಂತೆ ಹಲವು ಕಂಪನಿಗಳು ಕಾರ್ಯಾರಂಭ ಮಾಡಿವೆ. ಆಟೊಮೊಬೈಲ್‌ಗೆ ಸಂಬಂಧಿಸಿದ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ಸ್ಥಾಪನೆಗೆ ಹೋಂಡಾ ಕಂಪನಿ ₹600 ಕೋಟಿ ಹೂಡಿಕೆ ಮಾಡಲಿದ್ದು, ಶೀಘ್ರವೇ ಚಾಲನೆ ಸಿಗಲಿದೆ ಎಂಬುದಾಗಿ ಸಚಿವ ಎಂ.ಬಿ.ಪಾಟೀಲ ಈಚೆಗೆ ಹೇಳಿದ್ದಾರೆ. ಅಲ್ಲದೇ, ಇನ್ನೂ ಹಲವಾರು ಕಂಪನಿಗಳು ತಮ್ಮ ಘಟಕ ಸ್ಥಾಪಿಸಲು ಮಾತುಕತೆ ನಡೆಸಿವೆ ಎಂದಿದ್ದಾರೆ.

ಕೆಜಿಎಫ್‌ನಲ್ಲಿ ಟೌನ್‌ಶಿಪ್‌: ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರದಿಂದ ಸಿದ್ಧತೆಗಳು ನಡೆಯುತ್ತಿವೆ. ಕೆಜಿಎಫ್‌ ಹಾಗೂ ಬಂಗಾರಪೇಟೆ ತಾಲ್ಲೂಕು ವ್ಯಾಪ್ತಿಯ ಬಂಗಾರದ ಗಣಿ ಗ್ರಾಮದ ಸರ್ವೆ ನಂ. 3ರಲ್ಲಿ 294 ಎಕರೆ ಜಾಗದಲ್ಲಿ ವಿವಿಧ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಟೌನ್‌ಶಿಪ್‌ ನಿರ್ಮಾಣ ಆಗಲಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.

ಮಾಲೂರಿನಲ್ಲಿ ಕೈಗಾರಿಕಾ ಪಾರ್ಕ್‌ ಅನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಆರ್‌) ಮಾಡಲು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಸ್ಥಳೀಯವಾಗಿ ಮತ್ತಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯನ್ನು ಈ ಭಾಗದ ಜನರು ಹೊಂದಿದ್ದಾರೆ. ಆದರೆ, ಈಗಾಗಲೇ ಆರಂಭವಾಗಿರುವ ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಜಾಗ ನೀಡಿದ ರೈತರು ಹಲವಾರು ಬಾರಿ ಸಿಡಿದೆದ್ದ ಉದಾಹರಣೆಗಳಿವೆ. ವಿವಿಧ ಸಂಘಟನೆಗಳು ಹೋರಾಟ ನಡೆಸಿವೆ. ಕೆಡಿಪಿ ಸಭೆಗಳಲ್ಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿದ್ದಿದೆ. ಹೀಗಾಗಿ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆಯ ಕೂಗು ಕೇಳಿಬರುತ್ತಿದೆ. ಜೊತೆಗೆ ಭೂಸ್ವಾಧೀನದ ಪರಿಹಾರ ರೈತರಿಗೆ ಸರಿಯಾಗಿ ಸೇರಬೇಕಿದೆ.

ಹೋಂಡಾ, ಟಾಟಾ ಎಲೆಕ್ಟ್ರಾನಿಕ್ಸ್‌, ಮಹೀಂದ್ರಾ ಏರೋಸ್ಟೇಸ್‌ ಸೇರಿದಂತೆ ಹಲವು ಕಂಪನಿ ಖಾಸಗಿ ವಲಯದ‌ಲ್ಲಿ ದೇಶದ ಮೊದಲ ಹೆಲಿಕಾಪ್ಟರ್‌ ತಯಾರಿಕಾ ಘಟಕ ಕೆಜಿಎಫ್‌, ಶ್ರೀನಿವಾಸಪುರ, ಮುಳಬಾಗಿಲಿನಲ್ಲೂ ಮುಂದೆ ಕೈಗಾರಿಕೆ ಸ್ಥಾಪನೆ

ಉದ್ಯೋಗ ಆರ್ಥಿಕ ವ್ಯವಸ್ಥೆಗೆ ಬಲ ಇಡೀ ದೇಶದಲ್ಲಿ ಖಾಸಗಿ ವಲಯದ ಮೊದಲ ಹೆಲಿಕಾಪ್ಟರ್‌ ತಯಾರಿಕಾ ಘಟಕ ಆರಂಭವಾಗುತ್ತಿರುವುದು ಕೋಲಾರ ಜಿಲ್ಲೆಯ ಪಾಲಿಗೆ ಸಂತೋಷದ ಸಂದರ್ಭ. ವೇಮಗಲ್‌ ಕೈಗಾರಿಕಾ ಪ್ರದೇಶದ 17 ಎಕರೆ ಪ್ರದೇಶದಲ್ಲಿ ಈ ಘಟಕ ತಲೆಎತ್ತುತ್ತಿದೆ. ರಾಜ್ಯ ಸರ್ಕಾರ ಜಮೀನು ನೀಡಿದೆ. ಸ್ಥಳೀಯವಾಗಿ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ಆರ್ಥಿಕ ವಹಿವಾಟು ಹೆಚ್ಚಲಿದ್ದು ಜಿಲ್ಲೆಯ ಬೆಳವಣಿಗೆಗೆ ಕಾರಣವಾಗಲಿದೆ. ಉಳಿದ ಕಂಪನಿಗಳೂ ಜಿಲ್ಲೆಯತ್ತ ಚಿತ್ತ ಹರಿಸಲಿವೆ. ಕೆಜಿಎಫ್‌ನ ಬಿಜಿಎಂಎಲ್‌ ಜಾಗದಲ್ಲಿ ರೈಲ್ವೆ ಬೋಗಿ ಸರ್ವಿಸ್‌ ಕೇಂದ್ರ ಸ್ಥಾಪಿಸಲು ಪ್ರಯತ್ನ ಹಾಕುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಂಪನಿಗಳು ಬರಲಿವೆ. ಜೊತೆಗೆ ಈಗಿರುವ ಕಂಪನಿಗಳು ಮತ್ತಷ್ಟು ವಿಸ್ತರಣೆ ಆಗಲಿವೆ ಎಂ.ಮಲ್ಲೇಶ್‌ ಬಾಬು ಸಂಸದ

ಜಿಲ್ಲೆಯಲ್ಲಿ ಸಂಪರ್ಕ ಕ್ರಾಂತಿ ಕೋಲಾರ ಜಿಲ್ಲೆಯು ಪ್ರಮುಖವಾಗಿ ರಾಜಧಾನಿ ಬೆಂಗಳೂರು ಸಮೀಪದಲ್ಲಿರುವುದು ಕೈಗಾರಿಕೆಗಳು ಹಾಗೂ ಕಂಪನಿಗಳ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ –75 ಹಾದು ಹೋಗಿದ್ದು ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದಲ್ಲದೇ ಹೊಸದಾಗಿ ನಿರ್ಮಾಣವಾಗಿರುವ ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ ಸಂಪರ್ಕ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟಿದೆ. ಸದ್ಯದಲ್ಲೇ ದೇವನಹಳ್ಳಿಯಿಂದ ವೇಮಗಲ್‌ ಮಾಲೂರು ಮಾರ್ಗವಾಗಿ ಹೊಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ಮಾಣವಾಗಲಿದೆ. ಜೊತೆಗೆ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೆಲವೇ ಕಿ.ಮೀಗಳ ಅಂತರದಲ್ಲಿದೆ. ಈಚೆಗೆ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು–ಚೆನ್ನೈ ಹೈಸ್ಪೀಡ್‌ ರೈಲು ಯೋಜನೆ ಘೋಷಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.