ADVERTISEMENT

ಕೋಲಾರ: ಶಿವರಾತ್ರಿ ಉಪವಾಸ, ಜಾಗರಣೆ ಇಂದು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 7:05 IST
Last Updated 15 ಫೆಬ್ರುವರಿ 2026, 7:05 IST
ಕೋಲಾರದ ಹಳೆ ಬಸ್‌ ನಿಲ್ದಾಣದಲ್ಲಿ ಶಿವರಾತ್ರಿ ಆಚರಣೆಗಾಗಿ ಹೂ ಖರೀದಿಸಿದ ಗ್ರಾಹಕರು
ಕೋಲಾರದ ಹಳೆ ಬಸ್‌ ನಿಲ್ದಾಣದಲ್ಲಿ ಶಿವರಾತ್ರಿ ಆಚರಣೆಗಾಗಿ ಹೂ ಖರೀದಿಸಿದ ಗ್ರಾಹಕರು   

ಕೋಲಾರ: ವರ್ಷದ ಎರಡನೇ ಹಬ್ಬ ಮಹಾಶಿವರಾತ್ರಿಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಿದ್ಧತೆಗಳು ನಡೆದಿವೆ. ಭಾನುವಾರ ಹಬ್ಬದ ಆಚರಣೆಗೆ ಶನಿವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಮನೆಗಳಲ್ಲಿ ವಿಶೇಷ ಪೂಜೆ, ಉಪವಾಸ ವೃತ, ಜಾಗರಣೆ ನಡೆಯಲಿದೆ. ಶಿವನ ದೇಗುಲಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಪೂಜೆಗೆ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕಿನ ಕೋರಗಂಡಹಳ್ಳಿಯ ಕಾಶಿವಿಶ್ವೇಶ್ವರ ಹಾಗೂ ಪುರಾಣ ಪ್ರಸಿದ್ಧ ಅಂತರಗಂಗೆಯ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಶಿವಲಿಂಗಕ್ಕೆ ಭಾನುವಾರ ಸೂರ್ಯ ಕಿರಣಗಳ ಸ್ಪರ್ಶವಾಗಲಿದೆ. ಬಳಿಕ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ADVERTISEMENT

ಅಂತರಗಂಗೆಯಲ್ಲಿ ‌ಶಿವನಿಗೆ ವಿಶೇಷ ಅಲಂಕಾರ ಮಾಡಿದ್ದು, ಇಡೀ ದಿನ ಪೂಜೆ, ಅಲಂಕಾರ ಮಾಡಿದ್ದು, ಮಂಜುನಾಥ ದೀಕ್ಷಿತ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಹಾ ರುದ್ರಾಭಿಷೇಕಕ್ಕೂ ವ್ಯವಸ್ಥೆ ಮಾಡಲಾಗಿದೆ.

ಹೂವು, ಹಣ್ಣು, ತರಕಾರಿ ಸೇರಿದಂತೆ ಉಪವಾಸ ವ್ರತಾಚರಣೆಗೆ ಬೇಕಾದ ಸಾಮಗ್ರಿಗಳನ್ನು ಜನರು ಖರೀದಿಸುತ್ತಿದ್ದದ್ದು ಕಂಡು ಬಂತು. ನಗರದ ಹಳೆ ಬಸ್ ನಿಲ್ದಾಣ, ರಂಗಮಂದಿರ, ದೊಡ್ಡಪೇಟೆ, ಎಂ.ಜಿ.ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ಸೇರಿದಂತೆ ವಿವಿಧೆಡೆ ಹುರಿಹಿಟ್ಟು, ಕಬ್ಬು, ಗೆಣಸು, ಬೆಲ್ಲದಕಾಯಿ, ಕಡಲೆ ಗಿಡ, ಕೊಬ್ಬರಿ, ಎಳನೀರು, ಬಿಲ್ವಪತ್ರೆ, ಕರವಸ್ತ್ರ, ಖರ್ಬುಜಾ, ಕಲ್ಲಂಗಡಿ ಹಣ್ಣು ಮಾರಾಟ ನಡೆಯಿತು.

ಸೋಮೇಶ್ವರಸ್ವಾಮಿ, ಕಾಳಿಕಾಂಭ ಕಮ್ಮಟೇಶ್ವರ, ನಂಜುಂಡೇಶ್ವರ, ಕುಂಬರೇಶ್ವರ, ಗಣೇಶ ಗುಡಿ ರಸ್ತೆಯ ಈಶ್ವರ, ವಕ್ಕಲೇರಿಯ ಮಾರ್ಕಂಡೇಶ್ವರ, ಕಾಡು ಮಲ್ಲೇಶ್ವರ ದೇವಾಲಯ ಸೇರಿದಂತೆ ಶಿವಾಲಯಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಇಡೀ ರಾತ್ರಿ ಜಾಗರಣೆಯೊಂದಿಗೆ ಪೂಜೆ ನಡೆಯಲಿದೆ.

ಫೆ.16 ರಂದು ಪಾರಣೆಯನ್ನು ಜನತೆ ಪ್ರಮುಖ ಹಬ್ಬವಾಗಿ ಆಚರಿಸುವುದು ವಾಡಿಕೆ. ಪಾರಣೆಯಂದು ಮನೆಯಲ್ಲಿ ಹಬ್ಬದೂಟ, ಒಣ ಅವರೆಕಾಳು ಮಸಾಲೆ ಸಾರು ಮಾಡಿ ದೇವರಿಗೆ ಎಡೆಯಾಗಿ ಪೂಜೆ ಸಲ್ಲಿಸುವ ಪದ್ಧತಿ ಇದೆ. ಸಾಮಾನ್ಯವಾಗಿ ಪಾರಣೆಯಂದು ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ಉಪವಾಸ ಇರುವ ಭಕ್ತರು ಬೆಳಿಗ್ಗೆ 8 ಗಂಟೆ ವೇಳೆಗೆ ಹಬ್ಬದೂಟ ಮಾಡುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.