ಕೋಲಾರ: ಮೈಸೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆಯಾಗಿರುವುದು ಹಲವರಲ್ಲಿ ಆತಂಕ ತಂದೊಡ್ಡಿದ್ದು, ಕೋಲಾರ ಜಿಲ್ಲೆಯಲ್ಲೂ ಡ್ರಗ್ಸ್ ಸಾಗಣೆ, ಮಾರಾಟ ಹಾಗೂ ಬಳಕೆಯಾಗುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಜಿಲ್ಲಾ ಪೊಲೀಸರು ಹರಸಾಹಸಕ್ಕಿಳಿದಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ, ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಹಾಗೂ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರ ಜೊತೆಗೆ ಎರಡು ಕೈಗಾರಿಕಾ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು ಆಗಾಗ್ಗೆ ತಮ್ಮ ಕರಾಮತ್ತು ತೋರಿಸುತ್ತಲೇ ಇದ್ದಾರೆ.
ಡ್ರಗ್ಸ್ ಜಾಲದ ಮಾಫಿಯಾ ಮಟ್ಟ ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸರು ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಲ್ಲಿ ಅಲ್ಪ ಯಶ ಸಾಧಿಸಿದ್ದರೂ ಆಗಾಗ್ಗೆ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಈ ವರ್ಷ ಜುಲೈ ಅಂತ್ಯದವರೆಗೆ ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣಾ ಕಾಯ್ದೆ (ಎನ್‌ಡಿಪಿಎಸ್) ಅಡಿಯಲ್ಲಿ ಏಳು ತಿಂಗಳಲ್ಲಿ 51 ಪೆಡ್ಲರ್, ವ್ಯಸನಿಗಳ ಹೆಡೆಮುರಿ ಕಟ್ಟಿದ್ದಾರೆ. ಎಂಡಿಎಂಎ ಹಾಗೂ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬಹುತೇಕ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಮಾದಕ ವಸ್ತುಗಳ ದಂಧೆಗಳು ನಡೆಸಲಾಗುತ್ತದೆ. ಆಂಧ್ರ ಪ್ರದೇಶದ ಚಿತ್ತೂರು, ಗಡಿ ಭಾಗದ ವಿಕೋಟೆ, ತಮಿಳುನಾಡಿನ ಹೊಸೂರು ಭಾಗದಲ್ಲೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಹೆಚ್ಚಾಗಿ ಮುಳಬಾಗಿಲು ಮತ್ತು ಕೋಲಾರದಲ್ಲಿ ಡ್ರಗ್ಸ್ ಮಾರಾಟದ ದಂಧೆ ಪ್ರಕರಣಗಳು ದಾಖಲಾಗಿವೆ. ಪೊಲೀಸರ ಭಯದಿಂದ ಹೊಸೂರು ರಸ್ತೆ ಕಡೆಗೆ ಸ್ಥಳಾಂತರವಾಗಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಬೃಹತ್ ಮೊತ್ತದ ಅಂದರೆ ಸುಮಾರು ₹ 50 ಲಕ್ಷ ಬೆಲೆ ಬಾಳುವ 806 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ಕೋಲಾರ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್) ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದರು.
ಬಂಧಿತ ವ್ಯಕ್ತಿ ಮಾದಕ ವಸ್ತು ಮಾರಾಟದ ಪ್ರಮುಖ ಪೆಡ್ಲರ್ ಆಗಿದ್ದ. ಬೆಂಗಳೂರಿನಲ್ಲಿ ವಾಸವಿರುವ ನೈಜೀರಿಯಾ ಮತ್ತು ಇತರೆ ದೇಶಗಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಎಂಡಿಎಂಎ ಮಾದಕ ವಸ್ತು ಖರೀದಿಸಿ ಕೈಗಾರಿಕಾ ಪ್ರದೇಶದ ಕಾರ್ಮಿಕರು ಹಾಗೂ ಪ್ರಸಿದ್ಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ. ಡ್ರಗ್ಸ್ ಮಾರಾಟ ಮಾಡಲು ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದ.
‘ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಣೆ ಅಪರಾಧವಾಗಿದೆ. ಈಗಾಗಲೇ ಹಲವಾರು ಪ್ರಕರಣ ದಾಖಲಿಸಿದ್ದು, ನಿಯಂತ್ರಣಕ್ಕೆ ಬರುತ್ತಿದೆ. ಡ್ರಗ್ಸ್ ಪೆಡ್ಲರ್‌ಗಳಲ್ಲಿ ಭಯ ಬಂದಿದ್ದು, ಬೇರೆ ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಸಂಪೂರ್ಣ ನಿಯಂತ್ರಣಕ್ಕೆ ತರಲು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಾದಕ ವಸ್ತು ಸೇವನೆ ನಿಯಂತ್ರಣದ ಮೂಲಕ ಅಪರಾಧ ಮತ್ತು ಮೃತ್ಯು ಪ್ರಕರಣಗಳನ್ನು ಶೂನ್ಯಕ್ಕೆ ತಲುಪಿಸುವುದು ನಮ್ಮ ಗುರಿ. ಅದು ಸವಾಲು ಎನಿಸಿದರೂ ಎಲ್ಲರ ಸಹಕಾರದಿಂದ ಸಾಧ್ಯವಾಗಲಿದೆ’ ಎಂದರು.
ಅಂಚೆ ಇಲಾಖೆಯ ಪಾರ್ಸೆಲ್‍ಗಳಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆಯೂ ನಿಗಾ ಇಡಲಾಗಿದೆ. ಅದೇ ರೀತಿ ಖಾಸಗಿ ಪಾರ್ಸೆಲ್ ಸರ್ವೀಸ್‍ಗಳ ಕಚೇರಿಗಳನ್ನು ಹಾಗೂ ಆನ್‍ಲೈನ್ ಮಾರುಕಟ್ಟಯೆ ಗೋದಾಮುಗಳನ್ನು ಪರಿಶೀಲಿಸುತ್ತಿದ್ದಾರೆ. ರೈಲ್ವೆ ಇಲಾಖೆಯ ಸಿಬ್ಬಂದಿ ಸಹ ನಿಲ್ದಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆ ತನಿಖೆ ನಡೆಸುತ್ತಿದ್ದಾರೆ.
ನಿರ್ಬಂಧಿತ ಹಾಗೂ ಮತ್ತು ತರಿಸುವ ಔಷಧಿಗಳನ್ನು ಜನ ಸಾಮಾನ್ಯರಿಗೆ ಮಾರಾಟ ಮಾಡದಂತೆ ಜಿಲ್ಲೆಯಲ್ಲಿರುವ ಸುಮಾರು 842 ಮೆಡಿಕಲ್ ಶಾಪ್‌ಗಳ ಮೇಲೆ ನಿಗಾ ಇಡಲಾಗಿದೆ. ಜೊತೆಗೆ ಸಿ.ಸಿ.ಟಿ.ವಿ ಅಳವಡಿಸಿ ವೈದ್ಯರು ಶಿಫಾರಸು ಇಲ್ಲದೆ ಮಕ್ಕಳಿಗೆ ಔಷಧ ನೀಡದಂತೆ ಸೂಚಿಸಲಾಗಿದೆ.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿ ಆಗಿಂದಾಗ್ಗೆ ಕೃಷಿ ಜಮೀನುಗಳು, ತೋಟಗಳಿಗೆ ಭೇಟಿ ನೀಡಿ, ಗಾಂಜಾ ಬೆಳೆಗಳನ್ನು ಬೆಳೆಯುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ.
ಯುವ ಸಮುದಾಯ ಮಾದಕ ವಸ್ತುಗಳತ್ತ ಹೆಚ್ಚು ಆಕರ್ಷಿತವಾಗುತ್ತಿದ್ದು, ಇವುಗಳ ಬಳಕೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ದೂರವಿರುವಂತೆ ಮಾಡಲು ಜಾಗೃತಿ, ಅಭಿಯಾನ ಹಾಗೂ ಅರಿವು ಕಾರ್ಯಕ್ರಮ ಮೂಡಿಸಲಾಗುತ್ತಿದೆ.
ಕಾಲೇಜುಗಳಲ್ಲಿ, ಹಾಸ್ಟೆಲ್‌ಗಳಲ್ಲಿ ರಜೆಯ ದಿನಗಳಲ್ಲಿ ಮನೆಗಳಿಗೆ ಹೋಗಿ ನಂತರ ಹಾಸ್ಟೆಲ್‌ಗೆ ಮರಳಿ ಬರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಮಾದಕ ವಸ್ತು ತೆಗೆದುಕೊಂಡು ಬರುತ್ತಾರಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ವಿವಿಧ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ಕೂಡ ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಇವರಿಗೂ ಕೆಲಸ ಮಾಡುವ ಸ್ಥಳಗಳಲ್ಲೇ ಅರಿವು ಮೂಡಿಸುವ ಕೆಲಸವೂ ನಡೆಯುತ್ತಿದೆ. ನಾರ್ಕೊ ಕೊ-ಆರ್ಡಿನೇಷನ್ ಸೆಂಟರ್‌ನ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಕೂಡ ಹಲವಾರು ಸಲಹೆ ಸೂಚನೆ ನೀಡಿದ್ದಾರೆ.
ಡ್ರಗ್ಸ್ ಜಾಲ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ನಿರಂತರವಾಗಿ ನಿಗಾ ಇಟ್ಟು ಕ್ರಮ ವಹಿಸುತ್ತಿದ್ದೇವೆ. ನಶೆಮುಕ್ತ ಕೋಲಾರ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಾಗಣೆ ಹಾಗೂ ಸೇವನೆಗೆ ಸುಲಭವಾಗಲೆಂದು ಡ್ರಗ್ಸ್ ಜಾಲವು ಮಾತ್ರೆ ರೂಪದಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಪ್ರಕರಣವೂ ಪತ್ತೆಯಾಗಿವೆ. ಅದರಲ್ಲೂ ಎಂಡಿಎಂಎ ಮಾದಕ ವಸ್ತು ಗುಳಿಗೆ ರೂಪದಲ್ಲೂ ಇರುತ್ತದೆ. ಇನ್ನು ಕೆಲವು ಕಡೆ ಚಾಕೊಲೇಟ್ ರೀತಿಯೂ ಮಾಡಿ ಗಾಂಜಾ ಮಾರಾಟ ಮಾಡುವ ಚಾಲಾಕಿತನವನ್ನು ದಂಧೆಕೋರರು ತೋರುತ್ತಿದ್ದಾರೆ.
ತಲೆನೋವಿನ ಅಥವಾ ಶೀತದ ಮಾತ್ರೆ ಎಂದು ಮನೆಯಲ್ಲಿ ಪೋಷಕರನ್ನು ನಂಬಿಸಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇವಿಸುವ ಅಪಾಯವಿರುತ್ತದೆ. ಹೀಗಾಗಿ ಪೋಷಕರು ಶಿಕ್ಷಕರು ನಿಗಾ ಇಟ್ಟು ಮಾತ್ರೆ ಬಗ್ಗೆ ವಿಚಾರಿಸಬೇಕು. ಉತ್ತರ ಭಾರತದಿಂದ ಮಾದಕ ವಸ್ತು ತಂದು ಬೀಡಾ ಅಂಗಡಿಗಳಲ್ಲಿಟ್ಟು ಮಾರಾಟ ಮಾಡುವುದು ಚಾಕೊಲೇಟ್ ರೂಪದಲ್ಲಿ ಮಾರಾಟ ಮಾಡಿದ್ದ ಪ್ರಕರಣ ನರಸಾಪುರದಲ್ಲಿ ವರ್ಷಗಳ ಹಿಂದೆ ಪತ್ತೆಯಾಗಿತ್ತು. ಕೈಗಾರಿಕಾ ಪ್ರದೇಶದ ಕಾರ್ಮಿಕರು ಕಾಲೇಜುಗಳ ವಿದ್ಯಾರ್ಥಿಗಳೇ ಇವರ ಟಾರ್ಗೆಟ್. ಯುವಜನರು ಸ್ಥಳೀಯವಾಗಿ ಲಭ್ಯವಾಗುತ್ತಿದ್ದ ಗಾಂಜಾದಂತಹ ನೈಸರ್ಗಿಕ ಮಾದಕ ವಸ್ತುಗಳಿಗೆ ದಾಸರಾಗಿದ್ದವರು ‘ಸಿಂಥೆಟಿಕ್ ಡ್ರಗ್ಸ್’ಗಳತ್ತ ವಾಲುತ್ತಿದ್ದಾರೆ. ಬೆಂಗಳೂರು ಮುಂಬೈನಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ‘ಎಂಡಿಎಂಎ’ ರೀತಿಯ ದುಬಾರಿ ಬೆಲೆಯ ಮಾದಕ ವಸ್ತುಗಳು ಜಿಲ್ಲೆಯಲ್ಲಿ ಲಭ್ಯವಾಗುತ್ತಿವೆ. ದೂರವಾಣಿ ಮೊಬೈಲ್ ಫೋನ್ ಇ–ಮೇಲ್ ಹಾಗೂ ಆ‍್ಯಪ್ ಮೂಲಕ ನಡೆಯುತ್ತಿದ್ದ ಈ ದಂಧೆ ‘ಡಾರ್ಕ್‌ನೆಟ್’ನಲ್ಲಿ ಸಕ್ರಿಯವಾಗಿದೆ. ವಿದ್ಯಾರ್ಥಿಗಳು ಯುವ ಸಮೂಹವನ್ನು ಸಂಪರ್ಕಿಸುವ ಈ ಜಾಲವು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.