
ಬಂಗಾರಪೇಟೆ: ನಿರಂತರ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿ ಅಪಾರ ನಷ್ಟ ಅನುಭವಿಸಿದ್ದಾರೆ.
ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಮಳೆಯಾಶ್ರಿತ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ. ಇನ್ನೂ ಕೆಲವೆಡೆ ಸೊಂಪಾಗಿ ಬೆಳೆದಿದ್ದ ರಾಗಿ ಬೆಳೆ ನಿರಂತರ ಮಳೆಯಿಂದ ನೆಲಕ್ಕೆ ಮಕಾಡೆ ಮಲಗಿದೆ. ಇದರಿಂದ ರೈತರು ಕಟ್ಟಪಟ್ಟು ಬೆಳೆದ ಬೆಳೆ ಮನೆಗೆ ಸೇರುತ್ತದೆಯೋ ಇಲ್ಲವೋ ಎಂದು ಕೈಕಟ್ಟಿ ಕುಳಿತಿದ್ದಾರೆ.
ತಾಲ್ಲೂಕಿನಲ್ಲಿ ರಾಗಿ, ಭತ್ತ, ಮೆಕ್ಕೆಜೋಳ, ತೊಗರಿ, ಅವರೆ ಮತ್ತು ತೋಟಗಾರಿಕಾ ಬೆಳೆಗಳಾದ ಟೊಮೆಟೊ, ಬೀನ್ಸ್, ಬದನೆ, ಆಲೂಗಡ್ಡೆ, ಕ್ಯಾರೆಟ್, ಮೂಲಂಗಿ ಹಾಗೂ ಇತರೆ ತರಕಾರಿ ಹೂವು ಬೆಳೆಯುತ್ತಿದ್ದು, ಅನೇಕ ಬೆಳೆಗಳು ತೇವಾಂಶ ಹೆಚ್ಚಾದ ಹಿನ್ನೆಲೆ ಅಂಗಮಾರಿ ರೋಗಕ್ಕೆ ತುತ್ತಾಗಿದೆ.
ಟೊಮೊಟೊ ಎಲೆ ಕಪ್ಪಾಗಿ ಉದುರುತ್ತಿದೆ. ಕಾಯಿ ಸಹ ಬೆಳವಣಿಗೆಯಾಗಿಲ್ಲ. ಕ್ಯಾರೆಟ್, ಬೀಟ್‌ರೋಟ್ ಬೆಳಗಳಲ್ಲಿ ತೇವಾಂಶ ಹೆಚ್ಚಾಗಿ ಗಡ್ಡೆಗಳು ಕೊಳೆಯುತ್ತಿವೆ. ಎಲೆಕೋಸಿನಲ್ಲಿ ರೋಗಬಾಧೆ ಹೆಚ್ಚಾಗಿದ್ದು, ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಕೀಟನಾಶಕ ಸಿಂಪಡಣೆ ಮಾಡಿದರೂ ಯಾವುದೇ ಪ್ರಯೋಜನವಾಗದೆ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆ ನಷ್ಟ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹಲವೆಡೆ ಜಮೀನು ಸಂಪೂರ್ಣವಾಗಿ ಜಲಾವೃತಗೊಂಡು ನಿಂತಿರುವ ಪೈರು ನೆಲಕ್ಕುರುಳಿವೆ. ಜೊತೆಗೆ ಕೊಳೆತು ಹೋಗಿವೆ. ಹಾಗಾಗಿ ಬೆಳೆ ನಷ್ಟ ಪರಿಹಾರ ನೀಡಬೇಕು.– ರಮೇಶ್ ಬಿ, ಬೂದಿಕೋಟೆ
ಬೀಜ ಗೊಬ್ಬರ ಮತ್ತು ಕೃಷಿ ಕಾರ್ಮಿಕರಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತರು ಈಗ ಬೆಳೆ ಇಲ್ಲದೆ ಮಾಡಿದ ಸಾಲ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.– ಮುನಿಸ್ವಾಮಿ, ಗುಲ್ಲಹಳ್ಳಿ ರೈತ
ಅಕಾಲಿಕ ಮತ್ತು ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆಯ ಮೇಲೆ ಅಪಾರ ಹೂಡಿಕೆ ಮಾಡಿದ್ದ ರೈತರು ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದ್ದಾರೆ.– ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.