ADVERTISEMENT

ಕೋಲಾರ: 19 ಸರ್ಕಾರಿ ನೌಕರರಿಗೆ ಪ್ರಾದೇಶಿಕ ಆಯುಕ್ತರಿಂದ ವಾಗ್ದಂಡನೆ ಆದೇಶ

ಮಾಲೂರು ತಾಲ್ಲೂಕು ಭೂ ಸಕ್ರಮೀಕರಣ ಸಮಿತಿ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 4:59 IST
Last Updated 16 ಡಿಸೆಂಬರ್ 2025, 4:59 IST
ಅಮ್ಲಾನ್ ಆದಿತ್ಯ ಬಿಸ್ವಾಸ್
ಅಮ್ಲಾನ್ ಆದಿತ್ಯ ಬಿಸ್ವಾಸ್   

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನನ್ನು ಶಾಸಕರ ನೇತೃತ್ವದ ಭೂ ಸಕ್ರಮೀಕರಣ ಸಮಿತಿಯಲ್ಲಿ ಅಕ್ರಮವಾಗಿ ನಡವಳಿ ಕೈಗೊಂಡ ಆರೋಪ ಪ್ರಕರಣದಲ್ಲಿ ಒಟ್ಟು 19 ನೌಕರರಿಗೆ ವಾಗ್ದಂಡನೆ ವಿಧಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಈಚೆಗೆ ಆದೇಶ ಹೊರಡಿಸಿದ್ದಾರೆ.

ವಾಗ್ದಂಡನೆಗೆ ಒಳಗಾಗಿ ಹಿಂದೆ ಮಾಲೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೆಂದರೆ ಬಂಗಾರಪೇಟೆ ತಾಲ್ಲೂಕು ಕಚೇರಿ ಪ್ರಥಮದರ್ಜೆ ಸಹಾಯಕ ಮಂಜುನಾಥ, ಕೆಜಿಎಫ್ ತಾಲ್ಲೂಕು ಆಹಾರ ನಿರೀಕ್ಷಕ ವಿ.ರಘು, ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸಾಸ್ವೇಹಳ್ಳಿಯ ಗ್ರಾಮ ಆಡಳಿತಾಧಿಕಾರಿ ಎಚ್.ಉಮೇಶ್, ಬೂದಿಕೋಟೆ ರಾಜಸ್ವ ನಿರೀಕ್ಷಕ ಎಚ್.ಜಿ.ಪವನ್ ಕುಮಾರ್, ರಾಜೇಂದ್ರಪ್ರಸಾದ್, ತಾಲ್ಲೂಕಿನ ವಕ್ಕಲೇರಿ ಮಂಗಸಂದ್ರ ಗ್ರಾಮ ಆಡಳಿತಾಧಿಕಾರಿ ವಿನಯ್ ಜೆ, ತಾಲ್ಲೂಕಿನ ಆಲಹಳ್ಳಿ ಗ್ರಾಮ ಆಡಳಿತಾಧಿಕಾರಿ ಶಿವವಾನಂದ ಪಡಸಲಗಿ, ಕೆಜಿಎಫ್ ತಾಲ್ಲೂಕು ಆಹಾರ ನಿರೀಕ್ಷಕ ಎನ್.ಬಿ.ಕೃಷ್ಣಮೂರ್ತಿ ಪ್ರಮುಖರಾಗಿದ್ದಾರೆ.

ಉಳಿದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕಚೇರಿ ಶಿರಸ್ತೇದಾರ್ ಎಸ್.ಎಂ.ನಾರಾಯಣಸ್ವಾಮಿ, ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಚ್.ಕೆ.ಅನಿತಾ, ಮಾಲೂರು ತಾಲ್ಲೂಕು ಲಕ್ಕೂರು ಹೋಬಳಿ ರಾಜಸ್ವ ನಿರೀಕ್ಷಕ ಎಂ.ಕೆ.ಶ್ರೀಪತಿ, ಹುರುಳುಗೆರೆ ಗ್ರಾಮ ಆಡಳಿತಾಧಿಕಾರಿ ಎಸ್.ವೆಂಕಟೇಶ್, ಮಡಿವಾಳ ಕಂದಾಯ ವೃತ್ತ ಆಡಳಿತಾಧಿಕಾರಿ ಆರ್.ಲೋಕೇಶ್, ಚಲಗನಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ರಾಹುಲ್, ಯಶವಂತಪುರ ಕಂದಾಯ ವೃತ್ತದ ಆಡಳಿತಾಧಿಕಾರಿ ಆರ್.ಶರತ್, ಗುಂಡ್ಲಪಾಳ್ಯ ಕಂದಾಯ ವೃತ್ತದ ಆಡಳಿತಾಧಿಕಾರಿ ಸಿ.ವಿ.ಮುನೇಶ್, ಮಾಸ್ತಿ ರಾಜಸ್ವ ನಿರೀಕ್ಷಕ ಕೆ.ನಾರಾಯಣಸ್ವಾಮಿ, ದೊಡ್ಡಕಲ್ಲಹಳ್ಳಿ ಕಂದಾಯ ವೃತ್ತದ ಗ್ರಾಮ ಅಡಳಿತಾಧಿಕಾರಿ ನುತನ್ ಎ., ಹುಳದೇನಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಂ.ಮಮತಾ ವಾಗ್ದಂಡನೆಗೆ ಒಳಗಾದ ನೌಕರರಾಗಿದ್ದಾರೆ.

ADVERTISEMENT

ಈ ಹಿಂದೆ ಮಾಲೂರು ತಾಲ್ಲೂಕಿನ ತಹಶೀಲ್ದಾರ್ ಆಗಿ ವಿ.ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 94 ರ ಅಡಿಯಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಕೋರಿಕೆ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲನೆ ಮಾಡದೇ ಅನರ್ಹ ವ್ಯಕ್ತಿಗಳಿಗೆ ಭೂ ಮಂಜೂರಾತಿ ಮಾಡಿರುವ ಪ್ರಕರಣ ಇದಾಗಿದೆ. ಆ ವೇಳೆ ವಿಚಾರಣಾಧಿಕಾರಿಯಾಗಿದ್ದ ಕೋಲಾರ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ಭೂ ಮಂಜೂರಾತಿ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿದ್ದ ನಾಗರಾಜ್ ಕರ್ತವ್ಯ ಲೋಪ ಎಸಗಿರುವುದನ್ನು ಪರಿಗಣಿಸಿ ಅದಕ್ಕನುಗುಣವಾಗಿ ಗರಿಷ್ಠ ದಂಡನೆ ವಿಧಿಸಬಹುದೆಂದು ಸರ್ಕಾರಕ್ಕೆ ಅಭಿಪ್ರಾಯ ಸಲ್ಲಿಸಲಾಗಿತ್ತು.

ಈ ವರದಿಯಲ್ಲಿ ಈ ಸಂಬಂಧ ಈಗ ವಾಗ್ದಂಡನೆಗೆ ಒಳಗಾಗಿರುವ ಅಧಿಕಾರಿ, ನೌಕರರು, ಕರ್ತವ್ಯ ಲೋಪದಲ್ಲಿ ಸಮಭಾಗಿಗಳಾಗಿರುವುದಾಗಿ ಅಭಿಪ್ರಾಯಪಟ್ಟು ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವುದು ಅಗತ್ಯವಾಗಿದೆ ಎಂದು ತಿಳಿಸಲಾಗಿತ್ತು. ಅದರಂತೆ ಈ ಕ್ರಮ ವಾಗಿದೆ.

ಪ್ರಕರಣದ ಹಿನ್ನೆಲೆ: ಮಾಲೂರು ತಾಲ್ಲೂಕಿನ ವ್ಯಾಪ್ತಿಯ ವಿವಿಧ ಗ್ರಾಮಗಳ 60 ಪ್ರಕರಣಗಳಲ್ಲಿ ಮಾಲೂರು ತಾಲ್ಲೂಕು ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾತಿಗಾಗಿ ನಮೂನೆ-57 ರಲ್ಲಿ ದಾಖಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಗೋಮಾಳ ಜಮೀನನ್ನು ಅನರ್ಹರಿಗೆ ಮಂಜೂರು ಮಾಡಲು ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಬಂದ ದೂರುಗಳ ಅನ್ವಯ ಕೋಲಾರ ಉಪವಿಭಾಗಾಧಿಕಾರಿಯು ಕರ್ನಾಟಕ ಭೂ ಕಂದಾಯ ನಿಯಮಗಳು 1966 ನಿಯಮ 108(ಕೆ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ನಿರ್ಣಯ ರದ್ದುಗೊಳಿಸಿ ಈ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆರೋಪಿಗಳ ಪೈಕಿ ಮಾಲೂರು ತಾಲ್ಲೂಕಿನ ರಾಜೇನಹಳ್ಳಿ ಗ್ರಾಮ ಆಡಳಿತಾಧಿಕಾರಿ ಬಸವರಾಜ ನರೇಗಲ್ ಮೃತಪಟ್ಟಿದ್ದು, ಹುಣಸಿಕೋಟೆ ಕಂದಾಯ ವೃತ್ತದ ಅಧಿಕಾರಿ ಜೆ.ಗುರುದತ್ ರಾಜೀನಾಮೆ ನೀಡಿದ್ದಾರೆ. ಇವರನ್ನು ಹೊರತುಪಡಿಸಿ 19 ಮಂದಿ ವಿರುದ್ಧ ವಾಗ್ದಂಡನೆ ವಿಧಿಸಲಾಗಿದೆ. ಆರೋಪಿತ ನೌಕರರು ಭೂಮಂಜೂರಿ ಕೋರಿದ ಅರ್ಜಿದಾರರು ಹೊಂದಿರಬೇಕಾದ ಅರ್ಹತೆ, ಮಾನದಂಡಗಳನ್ನು ಪರಿಶೀಲಿಸದಿರುವುದು, ನಿಯಮ ಅನುಸರಿಸದಿರುವುದು ವ್ಯಕ್ತವಾಗಿದೆ ಎಂದು ತಿಳಿಸಿ ಕ್ರಮ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.