ADVERTISEMENT

ಕೋಲಾರ | ಯಲ್ಲೇಶ್‌ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಅಕ್ರಮ ಸಂಬಂಧ ಪ್ರಕರಣ: ‘ನಾನೇ ಕೊಂದಿದ್ದು’ ಎಂದು ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 7:15 IST
Last Updated 2 ಫೆಬ್ರುವರಿ 2026, 7:15 IST
ಬಿಂದುಕುಮಾರ್
ಬಿಂದುಕುಮಾರ್   

ಕೋಲಾರ: ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ನರಸಾಪುರದ ಯಲ್ಲೇಶ್‌ ಎಂಬಾತನ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನರಸಾಪುರದವರೇ ಆದ ಬಿಂದುಕುಮಾರ್ (20) ಹಾಗೂ ಆತನ ಸ್ನೇಹಿತರಾದ ಕಿರಣ್‌ (19) ಹಾಗೂ ಅಕ್ಷಯ್‌ (20) ಬಂಧಿತ ಆರೋಪಿಗಳು.

ಯಲ್ಲೇಶ್‌ ನನ್ನು ತಾನೇ ಕೊಂದಿರುವುದಾಗಿ ಹೇಳಿಕೊಂಡು ಬಿಂದುಕುಮಾರ್‌ ಫೇಸ್‌ಬುಕ್‌ ವಿಡಿಯೊ ಮಾಡಿ ಹಾಕಿದ್ದ.

ADVERTISEMENT

ಅಕ್ರಮ ಸಂಬಂಧ ಕಾರಣ ಯಲ್ಲೇಶ್‌ನನ್ನು (45) ತಾಲ್ಲೂಕಿನ ಕೆಂದಟ್ಟಿ ಗ್ರಾಮದ ಬಳಿ ಜ.27ರ ರಾತ್ರಿ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಡೇರಿಗೆ ಹಾಲು ಹಾಕಿ ವಾಪಸ್ ಬರುವ ವೇಳೆ ಬೈಕ್ ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿ ಈ ಕೃತ್ಯ ಎಸಗಲಾಗಿತ್ತು.

ಯಲ್ಲೇಶ್‌ ತನ್ನ ಪತ್ನಿಯನ್ನು ಬಿಟ್ಟು ನರಸಾಪುರ ಗ್ರಾಮದ ಸಂತೋಷ್ ಎಂಬುವರ ಹೆಂಡತಿಯನ್ನು ಕೆರೆದುಕೊಂಡು ಬಂದು ಮನೆಯಲ್ಲಿ ಇರಿಸಿಕೊಂಡು ಆರೇಳು ವರ್ಷಗಳಿಂದ ‌ಸಂಸಾರ ನಡೆಸುತ್ತಿದ್ದ. ಮೊದಲಿನ ಪತ್ನಿಯ ಯಲ್ಲೇಶ್ ನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದರು. ಈ ಮಧ್ಯೆ, ಯಲ್ಲೇಶ್‌ ಮೇಲೆ ಸಂತೋಷ್‌ ಹಗೆ ಸಾಗಿಸುತ್ತಿದ್ದ. ಹೀಗಾಗಿ, ಈ ಹತ್ಯೆ ಮಾಡಿರುವುದು ಸಂತೋಷ್‌ ಎಂದು ಪೊಲೀಸರು ಶಂಕಿಸಿದ್ದರು.

ಆದರೆ, ಮಾರನೇ ದಿನವೇ ಸಂತೋಷ್‌ ವಿಡಿಯೊ ಮಾಡಿ, ‘ಕೊಲೆ ಮಾಡಿದ್ದು ನಾನಲ್ಲ. ಆಗ ನಾನು ಊರಿನಲ್ಲೇ ಇರಲಿಲ್ಲ.‌ ಮಾಡಿದ ಕರ್ಮಕ್ಕೆ ಯಲ್ಲೇಶ್‌ ಬಲಿಯಾಗಿದ್ದಾನೆ. ನನ್ನ ಪತ್ನಿಯೊಂದಿಗೆ ಬದುಕಲು ಆತ ಬಿಡಲಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಪ್ರಕರಣಕ್ಕೆ ತಿರುವು ನೀಡಿತ್ತು.

ಮರು ದಿನವೇ ಸಂತೋಷ್‌ ಪುತ್ರ ಬಿಂದುಕುಮಾರ್‌ ವಿಡಿಯೊ ಮಾಡಿ, ‘ನನ್ನ ಪ್ರಾಣಕ್ಕೆ ಕುತ್ತು ಬಂದಿತ್ತು. ಆತ್ಮರಕ್ಷಣೆಗೆ ಯಲ್ಲೇಶ್‌ನನ್ನು ನಾನೇ ಹೊಡೆದು ಹಾಕಿದೆ. ಕೊಲೆಗೆ ಬಳಸಿದ ಮಚ್ಚು ಸಹಿತ ನ್ಯಾಯಾಲಯಕ್ಕೆ ಶರಣಾಗುತ್ತೇವೆ’ ಎಂದಿದ್ದ.

‘ಯಲ್ಲೇಶ್ ನನ್ನ ತಂಗಿಯನ್ನು ನಿಂದಿಸುತ್ತಿದ್ದ. ನನ್ನ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನನ್ನ ಮೇಲೆಯೂ ಐದು ಬಾರಿ ಹಲ್ಲೆ ಮಾಡಿದ್ದ. ವೇಮಗಲ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ. ಇದೀಗ ಮತ್ತೆ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಮಾಹಿತಿ ದೊರೆತ ಕಾರಣ ಆತ್ಮರಕ್ಷಣೆಗಾಗಿ ನಾನು, ನನ್ನ ಸ್ನೇಹಿತ ಮತ್ತು ಆತನ ಅಣ್ಣ ಸೇರಿ ಕೊಲೆ ಮಾಡಿದ್ದೇವೆ’. ಈ ಕೊಲೆ ಪ್ರಕರಣಕ್ಕೂ ನನ್ನ ತಂದೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿರುವುದು ಆ ವಿಡಿಯೊದಲ್ಲಿತ್ತು.

ಕೊಲೆ ಮಾಡಿರುವುದಾಗಿ ಆರೋಪಿ ಪೋಸ್ಟ್‌ ಮಾಡಿದ ವಿಡಿಯೊವನ್ನು ಆಧಾರವಾಗಿಟ್ಟುಕೊಂಡು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್‌, ಎಎಸ್ಪಿಗಳಾದ ರವಿಶಂಕರ್‌, ಜಗದೀಶ್‌, ಡಿವೈಎಸ್ಪಿ ಎಂ.ಎಚ್‌.ನಾಗ್ತೆ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಂತರಾಜ್‌ ಹಾಗೂ ಇನ್ನಿತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸಂತೋಷ್‌ನನ್ನು ಕೂಡ ಹುಡುಕಾಟ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.