ADVERTISEMENT

ಕೋಲಾರ | ₹17 ಕೋಟಿಯಲ್ಲಿ ಕ್ರೀಡಾಂಗಣಕ್ಕೆ ಟೆರೇಸ್‌; ಬೈರತಿ ಸುರೇಶ್

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 3:50 IST
Last Updated 16 ಆಗಸ್ಟ್ 2025, 3:50 IST
ಕೋಲಾರದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅವರು ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು
ಕೋಲಾರದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅವರು ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು    

ಕೋಲಾರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಜನರಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ₹ 17 ಕೋಟಿ ವೆಚ್ಚದಲ್ಲಿ ಸುತ್ತ ಟೆರೇಸ್‌ ಹಾಕಲು ಕ್ರಮ ವಹಿಸಲಾಗುವುದು. ಇದಕ್ಕೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿ (ಸಿಎಸ್‌ಆರ್‌) ನಿಧಿಯಡಿ ಹಣ ಒದಗಿಸಲಾಗುವುದು’ ಎಂದರು.

ADVERTISEMENT

‘ಕೋಲಾರ ನಗರಕ್ಕೆ ₹ 60 ಕೋಟಿ, ಕೆ.ಜಿ.ಎಫ್.ಗೆ ₹ 20 ಕೋಟಿಯನ್ನು ಒಳಚರಂಡಿ ಜಾಲ ಮತ್ತು ಸಂಸ್ಕರಣ ಘಟಕಗಳಿಗೆ ಅನುಮೋದಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲೆಯ ನಗರಗಳಿಗೆ ₹ 25.11 ಕೋಟಿ ಅನುದಾನ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅಮೃತ್ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ₹ 40 ಕೋಟಿ ಮಂಜೂರು ಮಾಡಲಾಗಿದೆ. ಯರಗೋಳ್ ಜಲಾಶಯದಿಂದ ನೀರು ಸರಬರಾಜು ಯೋಜನೆಗೆ ₹ 308.46 ಕೋಟಿ ವೆಚ್ಚ ಮಾಡಲಾಗಿದೆ. ಕೋಲಾರ ನಗರದ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಸುಮಾರು ₹ 25 ಕೋಟಿ ಅನುದಾನ ನೀಡಲಾಗಿದೆ. ಹಳೆ ಬಸ್ ನಿಲ್ದಾಣದ ನವೀಕರಣಕ್ಕಾಗಿ ₹ 5 ಕೋಟಿ ಒದಗಿಸಲಾಗಿದೆ ಎಂದರು.

‘ನಗರಾಭಿವೃದ್ಧಿ ಇಲಾಖೆಯಡಿ ಒಳಚರಂಡಿ ವ್ಯವಸ್ಥೆ ಸುಧಾರಣೆ ಸೇರಿದಂತೆ ಮೂಲಸೌಕರ್ಯಕ್ಕಾಗಿ ₹ 515 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.

‘ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 12.43 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ತಲಾ 10 ಕೆ.ಜಿ ಅಕ್ಕಿ ಪಡೆಯುತ್ತಿದ್ದಾರೆ. ಯುವನಿಧಿಯಡಿ 4,720 ಯುವಕ-ಯುವತಿಯರ ಲಾಭ ಪಡೆದಿದ್ದಾರೆ. ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದುವರೆಗೆ ಜಿಲ್ಲೆಯ 10 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದು, ಇದಕ್ಕಾಗಿ ಸರ್ಕಾರ ₹ 308 ಕೋಟಿ ವಿನಿಯೋಗಿಸಿದೆ. ಜಿಲ್ಲೆಯ 4.10 ಲಕ್ಷಕ್ಕೂ ಹೆಚ್ಚು ಬಳಕೆದಾರರು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3.26 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಪ್ರತಿ ತಿಂಗಳು ₹ 2 ಸಾವಿರ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.

ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಮತ್ತು ದೇಶದ ಘನತೆ ಸಾರ್ವಭೌಮತೆ ಹಾಗೂ ಅಖಂಡತೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ
ಬೈರತಿ ಸುರೇಶ್‌ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.