ADVERTISEMENT

ಕೋಲಾರ: ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 16:11 IST
Last Updated 10 ಜೂನ್ 2020, 16:11 IST
ಜಿಲ್ಲಾ ಪಂಚಾಯಿತಿ, ಕೋಲಾರ
ಜಿಲ್ಲಾ ಪಂಚಾಯಿತಿ, ಕೋಲಾರ   

ಕೋಲಾರ: ಜಿಲ್ಲಾ ಪಂಚಾಯಿತಿಯ 3 ಸ್ಥಾಯಿ ಸಮಿತಿಗಳಿಗೆ ಬುಧವಾರ ನಿಗದಿಯಾಗಿದ್ದ ಚುನಾವಣೆಯನ್ನು ಸದಸ್ಯರ ಕೋರಂ ಕೊರತೆ ಕಾರಣಕ್ಕೆ ಜೂನ್‌ 15ಕ್ಕೆ ಮುಂದೂಡಲಾಯಿತು.

ಜಿ.ಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷಗಾದಿಗೆ ಬುಧವಾರ ಚುನಾವಣೆ ನಿಗದಿಪಡಿಸಲಾಗಿತ್ತು. ಆದರೆ, 3 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತಲಾ 4 ಸದಸ್ಯರು ಆಕಾಂಕ್ಷಿಗಳಿದ್ದರು.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಾಳಯದಿಂದ ತಲಾ ಮೂರ್ನಾಲ್ಕು ಮಂದಿ ಉಮೇದುವಾರಿಕೆ ಸಲ್ಲಿಸಿದರು. ಆಕಾಂಕ್ಷಿಗಳ ಪೈಕಿ ಯಾರೊಬ್ಬರೂ ನಾಮಪತ್ರ ಹಿಂಪಡೆಯಲಿಲ್ಲ. ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ ಸದಸ್ಯರ ಮನವೊಲಿಕೆಗೆ ನಡೆಸಿದ ರಾಜಿ ಸಭೆ ವಿಫಲವಾಯಿತು. ಸಂಸದ ಎಸ್.ಮುನಿಸ್ವಾಮಿ ಸಹ ಸಭೆಗೆ ಹಾಜರಾಗಿ ಮಾತುಕತೆ ನಡೆಸಿದರೂ ಆಕಾಂಕ್ಷಿಗಳಲ್ಲಿ ಒಮ್ಮತ ಮೂಡಲಿಲ್ಲ.

ADVERTISEMENT

ಜಿ.ಪಂನ 30 ಸದಸ್ಯರು, ಒಬ್ಬರು ಸಂಸದರು, ಒಬ್ಬರು ವಿಧಾನ ಪರಿಷತ್‌ ಸದಸ್ಯರು, 6 ಶಾಸಕರು ಹಾಗೂ 5 ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಒಟ್ಟಾರೆ 43 ಮಂದಿಗೆ ಮತ ಚಲಾವಣೆಯ ಅವಕಾಶವಿದೆ. ಈ ಪೈಕಿ ಚುನಾವಣೆ ನಡೆಸಲು 28 ಮಂದಿ ಹಾಜರಾಗಬೇಕಿತ್ತು. ಆದರೆ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹಾಗೂ ಸದಸ್ಯರು ನಾಮಪತ್ರ ಸಲ್ಲಿಕೆ ಬಳಿಕ ಚುನಾವಣಾ ಪ್ರಕ್ರಿಯೆಗೆ ಗೈರಾದರು. ಹೀಗಾಗಿ ಚುನಾವಣಾಧಿಕಾರಿಯು ಚುನಾವಣೆ ಮುಂದೂಡಿರುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.