
ಕೋಲಾರ: ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಥ್ಲೆಟಿಕ್ಸ್‌ನ ವಿವಿಧ ವಿಭಾಗಗಳಲ್ಲಿ ಬಾಲಕ ಹಾಗೂ ಬಾಲಕಿಯರು ಮಿಂಚು ಹರಿಸಿದರು. ಸೂರ್ಯನ ಬಿಸಿ ತಾಪದ ನಡುವೆಯೂ ಎದೆಗುಂದದೆ ಓಡಿ ತಮ್ಮ ತಾಕತ್ತು ತೋರಿಸಿದರು. ಸಂಘಟಕರು, ತೀರ್ಪುಗಾರರು ಕೂಡ ಉತ್ಸಾಹದಿಂದ ಓಡಾಡುತ್ತಾ ಮಕ್ಕಳನ್ನು ಹುರಿದುಂಬಿಸಿದರು.
2025-26ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ 14 ಮತ್ತು 17 ವರ್ಷದೊಳಗಿನವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ಕಂಡುಬಂದ ದೃಶ್ಯಗಳಿವು.
17 ವರ್ಷದೊಳಗಿನವರ ಬಾಲಕಿಯರ 800 ಮೀಟರ್ ಓಟದಲ್ಲಿ ಮಾಲೂರು ತಾಲ್ಲೂಕಿನ ಎಂ.ಸಾಹಿತ್ಯ ಮೊದಲ ಸ್ಥಾನ ಪಡೆದರು. ಇದೇ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಾಲೂರಿನ ಜೆ.ಶಾಮ್ ಕುಮಾರ್ ಅಗ್ರಸ್ಥಾನ ಪಡೆದರು. 100 ಮೀಟರ್ ಓಟ, ಹೈಜಂಪ್, ಡಿಸ್ಕಸ್ ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಬಿರುಸಿನ ಪೈಪೋಟಿ ಕಂಡುಬಂತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಆಡಳಿತ) ಅಲ್ಮಾಸ್ ಪರ್ವೀನ್ ತಾಜ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಯಾವುದೇ ತಾರತಮ್ಯವಿಲ್ಲದೆ, ಭಯವಿಲ್ಲದೆ, ಮನಸ್ಫೂರ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ತೀರ್ಪುಗಾರರು ಕೂಡ ಯಾವುದೇ ಪೂರ್ವಗ್ರಹವಿಲ್ಲದೆ ತೀರ್ಪು ನೀಡಬೇಕು. ಎಲ್ಲರೂ ಕ್ರೀಡಾ ಸ್ಫೂರ್ತಿ ಮೆರೆದು ಕ್ರೀಡಾಕೂಟ ಯಶಸ್ಸುಗೊಳಿಸಿ’ ಎಂದರು.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಮಾತನಾಡಿ, ‘ಕ್ರೀಡಾಪಟುಗಳು ಗುರಿ ತಲುಪದಿದ್ದರೂ ಪರವಾಗಿಲ್ಲ ಆದರೆ ಪ್ರಯತ್ನ ನಿಲ್ಲಿಸಬಾರದು. ಮುಂದೆ ಉತ್ತಮ ಅವಕಾಶಗಳು ಖಂಡಿತ ಸಿಗುತ್ತವೆ. ನೂರರಷ್ಟು ಪರಿಶ್ರಮ ಹಾಕಿ’ ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ, ‘ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸ್ಪರ್ಧಾ ಮನೋಭಾವದಿಂದ ಎರಡನ್ನೂ ಸಮಾನವಾಗಿ ಸ್ವೀಕರಿಸಿ’ ಎಂದು ಶುಭಾಶಯ ಕೋರಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಹಾಗೂ ಕ್ರೀಡಾ ಸಮಿತಿ ಕಾರ್ಯದರ್ಶಿ ಕೆ.ಆರ್.ಚಂದ್ರಶೇಖರ್ ಗಣ್ಯರನ್ನು ಸ್ವಾಗತಿಸಿ ಕ್ರೀಡಾಕೂಟದ ಬಗ್ಗೆ ವಿವರಿಸಿದರು. ಎಂ.ನಾಗರಾಜು ನಿರೂಪಿಸಿದರು. ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಮುರಳಿ ಮೋಹನ್ ತೀರ್ಪುಗಾರರಿಗೆ ಮಾರ್ಗದರ್ಶನ ನೀಡಿದರು.
ಆರಂಭದಲ್ಲಿ ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ರಾಷ್ಟ್ರ ದ್ವಜಾರೋಹಣ ನೆರವೇರಿಸಿದರು. ಬಳಿಕ ಆರೂ ತಾಲ್ಲೂಕುಗಳ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು. ನಂತರ ಕೋಚ್ ವೆಂಕಟೇಶ್ ನೇತೃತ್ವದಲ್ಲಿ ತರಲಾದ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಬಳಿಕ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಲೂನ್ ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ತಬಲ ಕಲಾವಿದ ರಮಣ ನೇತೃತ್ವದಲ್ಲಿ ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳು ನಾಡಗೀತೆ ಹಾಡಿದರು.
ಡಿವೈಎಸ್ಇ (ಕಾರ್ಯಕ್ರಮ) ಟಿ.ಎನ್.ರಾಜೇಶ್ವರಿ, ಡಿವೈಎಸ್ಪಿ (ಗುಣಮಟ್ಟ) ಸೈಯಿದಾ ನಹಿದ್ ಫಾತಿಮಾ, ವಿವಿಧ ಸಂಘಗಳ ಪ್ರಮುಖರು, ದೈಹಿಕ ಶಿಕ್ಷಣ ಶಿಕ್ಷಕರು, ಚಂದ್ರಶೇಖರ್, ಎಚ್.ಶಿವಕುಮಾರ್, ಗಾಯತ್ರಿ, ಮಂಜುನಾಥ್, ಎನ್.ವಿ.ರಮೇಶ್, ಜಿ.ಶ್ರೀನಿವಾಸ್, ಆರ್.ಮಂಜುಳಾ, ಅರುಣ್ ಕುಮಾರ್, ಆಂಜಿನಪ್ಪ, ಮಂಜುನಾಥ್, ನಾರಾಯಣರೆಡ್ಡಿ, ಮುರಳಿಬಾಬು, ಆರ್.ನಾಗಾರಾಜ್, ಕೆ.ಮುನಿಸ್ವಾಮಿ, ಎಸ್.ಸತೀಶ್ ಕುಮಾರ್, ಸಂತೋಷ ಕುಮಾರ್, ಬಂಗಾರಪೇಟೆಯ ಮಂಜುನಾಥ್, ನವೀನ್, ವೆಂಕಟೇಶಪ್ಪ, ಅಬ್ದುಲ್, ದಾನೇಶ್, ವೆಂಕಟಸ್ವಾಮಿ, ಕೋಚ್ ವೆಂಕಟೇಶ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಫಲಿತಾಂಶ: 17 ವರ್ಷದೊಳಗಿನವರ ಬಾಲಕರು: 800 ಮೀ.: ಜೆ.ಶಾಮ್ ಕುಮಾರ್ (ಮಾಲೂರು–ಕೆಎಲ್‌ಇ ಶಾಲೆ)–1, ವಿಜೇಂದ್ರ (ಶ್ರೀನಿವಾಸಪುರ–ದಳಸನೂರು ಸರ್ಕಾರಿ ಶಾಲೆ)–2, ಎಂ.ವಿದ್ಯಾಸಾಗರ್ (ಕೋಲಾರ–ಅಮರಜ್ಯೋತಿ ಶಾಲೆ)–3.
17 ವರ್ಷದೊಳಗಿನವರ ಬಾಲಕಿಯರು: 800 ಮೀ.: ಎಂ.ಸಾಹಿತ್ಯ (ಮಾಲೂರು–ಎಸ್‌ಆರ್‌ವಿಪಿ ಶಾಲೆ)–1, ಚಿನ್ಮಯಿ ಖುಷಿ (ಮಾಲೂರು–ಕೆಎಲ್‌ಇ ಶಾಲೆ)–2, ದಕ್ಷಿತಾ ಜಿ. (ಬಂಗಾರಪೇಟೆ–ನರೇಂದ್ರನಾಥ ಶಾಲೆ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.