
ಕೋಲಾರ: ಪಾಚಿ ಬಣ್ಣಕ್ಕೆ ತಿರುಗಿರುವ ನೀರು, ಕೆಲವೆಡೆ ಮಣ್ಣು ಮಿಶ್ರಿತ ನೀರು, ಒಂಥರಾ ಪಾಚಿ ವಾಸನೆ. ಅದರಲ್ಲಿ ಸಣ್ಣ ಹುಳುಗಳು ಓಡಾಟ...
ಮನೆಗಳ ಮುಂದೆ ಡ್ರಮ್‌ಗಳು, ಬಿಂದಿಗೆ, ಸಂಪುಗಳಲ್ಲಿ ಶೇಖರಿಸಿಟ್ಟುಕೊಂಡಿರುವ ನೀರಿನ ಪರಿಸ್ಥಿತಿ ಇದು. ಸ್ನಾನಕ್ಕೂ ಅದೇ ನೀರು. ಬಟ್ಟೆ, ಪಾತ್ರೆ ತೊಳೆಯಲು ಅದೇ ನೀರು. ಅಡುಗೆಗೆ, ಕುಡಿಯಲೂ ಇದೇ ನೀರಿನ ಬಳಕೆ! ಇದೇ ನೀರು ಕುಡಿಯುವ ಶಿಶುಗಳು, ಗರ್ಭಿಣಿಯರ ಪಾಡು ಹೇಳ ತೀರದು!
ತಾಲ್ಲೂಕಿನ ತೇರಹಳ್ಳಿ ಬೆಟ್ಟದಲ್ಲಿರುವ ಕೊಂಡರಾಜನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಆರೇಳು ಹಳ್ಳಿಗಳ ಮನೆ ಮುಂದೆ ಕಾಣ ಸಿಗುವ ದೃಶ್ಯಗಳಿವು. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು, ಸುಮಾರು ಎರಡು ಸಾವಿರ ನಿವಾಸಿಗಳ ಪರದಾಟ ಹೇಳತೀರದು.
ಈ ಸಮಯದಲ್ಲೇ ಇಷ್ಟು ಸಮಸ್ಯೆ ಇದೆ. ಇನ್ನು ಬೇಸಿಗೆ ಬಂತೆಂದರೆ ನೀರಿನ ಹಾಹಾಕಾರ ಮತ್ತಷ್ಟು ಜೋರಾಗುತ್ತದೆ. ಈ ಸಂದರ್ಭದಲ್ಲಿ ಟ್ಯಾಂಕರ್‌ಗಳಲ್ಲಿ ನೀರು ತಂದು ಬೆಟ್ಟದ ನಿವಾಸಿಗಳಿಗೆ ಸರಬರಾಜು ಮಾಡಬೇಕಾಗುತ್ತದೆ. ಇನ್ನು ಕೆಲವರು ದೂರದ ಬಾವಿಗಳ ಬಳಿಗೆ ಹೋಗಿ ಬಿಂದಿಗೆಯಲ್ಲಿ ನೀರು ಹೊತ್ತು ತರಬೇಕಿದೆ. ಪ್ರತಿಯೊಬ್ಬರೂ ನೀರಿನ ಸಮಸ್ಯೆ ಹೇಳಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬೆಟ್ಟದಲ್ಲಿ ತೇರಹಳ್ಳಿ, ಕುಪ್ಪಳ್ಳಿ, ಆದಿಮ(ಶಿವಗಂಗೆ), ಪಾಪರಾಜನಹಳ್ಳಿ, ಕೆಂಚಗೌಡನಹಳ್ಳಿ, ಬೆಟ್ಟಹೊಸಳ್ಳಿ ಎಂಬ ಗ್ರಾಮಗಳಿದ್ದು, ಸುಮಾರು 500 ಮನೆಗಳಿವೆ. ಹಲವಾರು ಮೂಲ ಸೌಕರ್ಯಗಳ ಕೊರತೆ ಕಾಡುತ್ತಿವೆ. ಬೆಟ್ಟದಲ್ಲಿ ಕೊಳವೆ ಬಾವಿ ಕೊರೆಯುವಂತಿಲ್ಲ, ಶುದ್ಧ ನೀರಿನ ಘಟಕವೂ ಇಲ್ಲ. ಹೀಗಾಗಿ, ದೂರದಲ್ಲಿರುವ ಕೆರೆ, ಬಾವಿಗಳ ನೀರನ್ನೇ ನೆಚ್ಚಿಕೊಳ್ಳಬೇಕಿದೆ. ಕುಪ್ಪಳ್ಳಿಯಲ್ಲಿ ಮಾತ್ರ ಕೆರೆ ಇದ್ದು, ಇನ್ನುಳಿದ ಐದಾರು ಕಡೆ ಬಾವಿಗಳಿವೆ. ಕೆರೆ, ಬಾವಿಯಿಂದ ನೀರನ್ನು ಈ ಗ್ರಾಮಗಳಲ್ಲಿ ನಿರ್ಮಿಸಿರುವ ಟ್ಯಾಂಕ್‌ಗಳಿಗೆ ಹರಿಸಲಾಗುತ್ತದೆ. ಅಷ್ಟರಲ್ಲಿ ನೀರು ವಾಸನೆಗೆ ತಿರುಗಿರುತ್ತದೆ. ಕೆಲವರು ಮಾತ್ರ ಸ್ವಂತ ಬಾವಿಗಳನ್ನು ಹೊಂದಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿ ಈಗಾಗಲೇ ಕೊಳವೆಬಾವಿ ಕೊರೆದಿದ್ದು, ನೀರು ಪೂರೈಸಲು ಪೈಪ್ ಲೈನ್ ಅಳವಡಿಸುವ ಕೆಲಸ ನಡೆಯುತ್ತಿದೆ. ತಪ್ಪಲಿನಲ್ಲಿ ಸುಮಾರು ಎರಡು ಲಕ್ಷ ಲೀಟರ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ, ಅನುದಾನ ಕೊರತೆಯಿಂದ ಕಾಮಗಾರಿ ನಿಂತು ಹೋಗಿದೆ. ಹೀಗಾಗಿ, ನೀರಿನ ಸಮಸ್ಯೆ ಮುಂದುವರಿದಿದೆ.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇನ್ನುಳಿದ ಕಾಮಗಾರಿಗಳಿಗೆ ಅನುದಾನ ಲಭಿಸಿದರೆ ಬೇಗನೇ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬಹುದು. ಬೆಟ್ಟದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ ಬೇಸಿಗೆಯಲ್ಲೂ ನೀರಿಗೆ ತೊಂದರೆ ಇರುವುದಿಲ್ಲ ಎಂದು ಕೊಂಡರಾಜನಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯನಗರ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ನೀರಷ್ಟೇ ಅಲ್ಲ; ಬೆಟ್ಟದ ಗ್ರಾಮಗಳಲ್ಲಿ ಸರಿಯಾದ ಮೋರಿಗಳಿಲ್ಲ, ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಆದಿಮ (ಶಿವಗಂಗೆ) ಹಾಗೂ ಕುಪ್ಪಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದವರೇ ಹೆಚ್ಚಿದ್ದಾರೆ. ಆದಿಮ ಗ್ರಾಮದಲ್ಲಿ ಟ್ಯಾಂಕ್ ಬಿರುಕು ಬಿಟ್ಟಿದ್ದು, ನೀರು ಸೋರುತ್ತಿದೆ. ಇಲ್ಲಿರುವ ಮನೆಗಳಿಗೆ ಹಕ್ಕುಪತ್ರ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೂ ಕೋಲಾರ ನಗರಕ್ಕೆ ಹೋಗಬೇಕಿದೆ. ಇನ್ನು ಕೋಲಾರದಿಂದ ಬೆಟ್ಟಕ್ಕೆ ಬರುವ ರಸ್ತೆಯಲ್ಲಿ ದೀಪದ ಕಂಬಗಲೂ ಇಲ್ಲ, ದೀಪವೂ ಇಲ್ಲ. ಚಿರತೆಗಳ ಕಾಟವಿದ್ದು, ಜನ ಭಯಭೀತರಾಗಿದ್ದಾರೆ. ರಸ್ತೆ ಪಕ್ಕದಲ್ಲಿ ಪೈಪ್‌ಲೈನ್‌ಗೆ ಅಗೆದಿರುವ ಕಾರಣ ವಾಹನಗಳ ಸಂಚಾರಕ್ಕೂ ತೊಂದರೆ ಆಗಿದೆ.
ಬೆಟ್ಟದಲ್ಲಿ ನೀರಿಗೆ ತೊಂದರೆ; ಅನುದಾನವಿಲ್ಲದೆ ಕಾಮಗಾರಿ ಸ್ಥಗಿತ ತಪ್ಪಲಿನಲ್ಲಿ ಕೊಳವೆಬಾವಿ ಕೊರೆದಿದ್ದು, ಬೆಟ್ಟಕ್ಕೆ ನೀರು ಸಾಗಿಸುವ ಕಾಮಗಾರಿ ಆರೇಳು ಗ್ರಾಮಗಳಲ್ಲಿ ಸುಮಾರು ಎರಡು ಸಾವಿರ ನಿವಾಸಿಗಳು
ಅನುದಾನ ಸಿಕ್ಕರೆ ಬೇಗನೇ ಕಾಮಗಾರಿ ಬಹಳ ವರ್ಷಗಳಿಂದಲೂ ತೇರಹಳ್ಳಿ ಬೆಟ್ಟದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ನೀರಿನ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ. ಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಕೊಳವೆಬಾವಿ ಕೊರೆಯಿಸಿದ್ದು ಶೇ 70ರಷ್ಟು ಕೆಲಸ ಆಗಿದೆ. ಅನುದಾನ ಕೊರತೆಯಿಂದ ಕಾಮಗಾರಿ ನಿಂತಿದೆ. ಅನುದಾನ ಸಿಕ್ಕಿದರೆ ಬೇಸಿಗೆಯೊಳಗೆ ನೀರು ಪೂರೈಸಲು ವ್ಯವಸ್ಥೆ ಮಾಡಬಹುದು. ತಪ್ಪಲಿನಲ್ಲಿ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಪೈಪ್‌ಲೈನ್ ಮೂಲಕ ತೇರಹಳ್ಳಿಯಲ್ಲಿರುವ ಕಲ್ಯಾಣಿಗೆ ನೀರು ತುಂಬಿಸಬಹುದು. ನಂತರ ಕಲ್ಯಾಣಿಯಿಂದ ಯಂತ್ರದ ಮೂಲಕ ಕೆಂಚಗೌಡನಹಳ್ಳಿಯಲ್ಲಿ ನಿರ್ಮಿಸಲಿರುವ ಟ್ಯಾಂಕ್‌ಗೆ ನೀರು ಸಾಗಿಸಬಹುದು. ಕಲ್ಯಾಣಿ ಅಭಿವೃದ್ಧಿಪಡಿಸಿ ಗ್ರಿಲ್ ಅಳವಡಿಸಲು ₹ 10 ಲಕ್ಷ ಆಗಬಹುದು. ಕೆರೆ ಬಾವಿಯ ಹೂಳು ತೆಗೆಸಿ ದುರಸ್ತಿ ಮಾಡಿಸಬೇಕಿದೆ. ನೀರು ಹರಿಯುವೆಡೆ ಚೆಕ್ ಡ್ಯಾಂ ಮಾಡಿದರೆ ಬೇಸಿಗೆಯಲ್ಲಿ ನೀರು ಸಂಗ್ರಹ ಆಗುತ್ತದೆ –ವಿಜಯನಗರ ಮಂಜುನಾಥ್ ಕೊಂಡರಾಜನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.