ADVERTISEMENT

ಕೋಲಾರ: ಪ್ರವಾಸೋದ್ಯಮ ಉತ್ತೇಜಿಸಲು ಕೋಲಾರ ದರ್ಶನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:41 IST
Last Updated 29 ಸೆಪ್ಟೆಂಬರ್ 2025, 7:41 IST
ಕೋಲಾರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ಷದ ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ ಗೌರವಕ್ಕೆ ಪಾತ್ರರಾಗಿರುವ ರೆಡ್ಡೆಮ್ಮ ಅವರನ್ನು ಗಣ್ಯರು ಅಭಿನಂದಿಸಿದರು
ಕೋಲಾರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ಷದ ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ ಗೌರವಕ್ಕೆ ಪಾತ್ರರಾಗಿರುವ ರೆಡ್ಡೆಮ್ಮ ಅವರನ್ನು ಗಣ್ಯರು ಅಭಿನಂದಿಸಿದರು   

ಕೋಲಾರ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಪ್ರವಾಸಗಳ ಏರ್ಪಾಡು, ಪ್ರವಾಸಿ ಏಜೆಂಟರ ನೇಮಕ ಹಾಗೂ ವಾರಾಂತ್ಯದ ಕೋಲಾರ ದರ್ಶನ ಆರಂಭಿಸಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂ ಎನ್.ಪವಾರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಳಕ್ಕೆ ವಿಫುಲ ಅವಕಾಶಗಳು ಇದ್ದರೂ, ಇಚ್ಛಾಶಕ್ತಿಯ ಕೊರತೆ ಹಾಗೂ ಪ್ರವಾಸಿಗರ ಸುಲಿಗೆ ಮಾಡುತ್ತಿರುವ ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಳವಾಗಿಲ್ಲ ಎಂದರು.

ADVERTISEMENT

ಜಿಲ್ಲೆಗೆ 24 ಗಂಟೆಗಳೊಳಗಾಗಿ ಭೇಟಿ ನೀಡಿ ವಾಪಸಾಗುವ ವಿಹಾರಾರ್ಥಿಗಳು ಹಾಗೂ ಇಲ್ಲಿಯೇ ವಾಸ್ತವ್ಯ ಇರುವ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಒಂದು ವರ್ಷದಲ್ಲಿ ಕ್ರಮವಹಿಸಿ, ಮುಂದಿನ ಪ್ರವಾಸೋದ್ಯಮ ದಿನಾಚರಣೆಯನ್ನು ದೊಡ್ಡ ವೇದಿಕೆಯಲ್ಲಿ ಆಚರಿಸಲು ಪ್ರಯತ್ನಿಸುವುದಾಗಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್.ಮುನಿಶಾಮಪ್ಪ ಮಾತನಾಡಿ, ಜಿಲ್ಲೆಯ ಐತಿಹ್ಯಗಳ ಕುರುಹುಗಳನ್ನು ಜತನದಿಂದ ಕಾಪಾಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಇತಿಹಾಸ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿದೆ ಎಂದು ಸಲಹೆ ನೀಡಿದರು.

ಪತ್ರಕರ್ತರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ, ಭೌಗೋಳಿಕವಾಗಿ, ಧಾರ್ಮಿಕ, ಪೌರಾಣಿಕ, ಐತಿಹಾಸಿಕ, ಚಾರಣ ಪೂರಕ, ಸಾಂಸ್ಕೃತಿಕ ಮಹತ್ವ ಸಾರುವ ನೂರಾರು ಕೇಂದ್ರಗಳಿದ್ದು, ಅವುಗಳನ್ನು ಪ್ರವಾಸಿ ತಾಣಗಳಾಗಿ ಮಾರ್ಪಡಿಸಿ ಮೂಲ ಸೌಕರ್ಯ ಕಲ್ಪಿಸಿದರೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು ಎಂದರು.

ಇತಿಹಾಸ ಸಹ ಪ್ರಾಧ್ಯಾಪಕ ಅರಿವು ಶಿವಪ್ಪ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮವು ಪ್ರವಾಸಿ ಕೇಂದ್ರವಾಗುವ ಅರ್ಹತೆ ಪಡೆದುಕೊಂಡಿವೆ. ಅರಾಭಿಕೊತ್ತನೂರಿನಲ್ಲಿ ವೀರಗಲ್ಲುಗಳ ಪಾರ್ಕ್ ನಿರ್ಮಾಣ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರವಾಸೋದ್ಯಮ ಕೋರ್ಸಿನ ಮುಖ್ಯಸ್ಥ ಮಹೇಶ್ ಮಾತನಾಡಿದರು. ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ ಪ್ರಶಸ್ತಿಯನ್ನು ರೆಡ್ಡೆಮ್ಮ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಾದ ಎಂ.ಹರ್ಷಿತಾ, ಎಂ.ತೇಜಸ್ವಿನಿ, ಎಂ.ಚಂದನ, ಚಿತ್ರಕಲೆ ಸ್ಪರ್ಧೆಯಲ್ಲಿ ಗೆದ್ದ ಉಮೇರಾ, ಎಂ.ದಿನೇಶ್, ಎಂ.ಸುಪ್ರಜಾ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಟಿ.ಎಸ್.ರುದ್ರಕುಮಾರ್, ಎಂ.ಅಮೃತವರ್ಷಿಣಿ, ಟಿ.ಎಂ.ಸ್ಪಪ್ನ ಹಾಗೂ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ರುದ್ರಕುಮಾರ್, ಆರ್.ಸುಪ್ರೀತ್, ನಾಗಭೂಷಣ್ ಮತ್ತು ಬಿ.ನಿತಿನ್‍ಕುಮಾರ್‌ ಅವರಿಗೆ ಬಹುಮಾನ ವಿತರಿಸಲಾಯಿತು. ಪ್ರವಾಸಿ ಮಾರ್ಗದರ್ಶಿ ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿ, ಆನಂದಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.