ADVERTISEMENT

ನಾನು ರೈತ ಪರ; ನಮಗೆ ಕೈಗಾರಿಕೆ ಬೇಕಿಲ್ಲ–ಶಾಸಕ ಕೊತ್ತೂರು ಮಂಜುನಾಥ್‌

ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳ ಆಹ್ವಾನಿಸದ್ದಕ್ಕೆ ಮತ್ತೆ ಗುಡುಗಿದ ಶಾಸಕ ಕೊತ್ತೂರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 20:33 IST
Last Updated 21 ಫೆಬ್ರುವರಿ 2026, 20:33 IST
ಕೊತ್ತೂರು ಮಂಜುನಾಥ್‌
ಕೊತ್ತೂರು ಮಂಜುನಾಥ್‌   

ಕೋಲಾರ: ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ಟಾಟಾ–ಏರ್‌ಬಸ್‌ ಎಚ್‌ 125 ಲಘು ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೌದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳಿದಂತೆ ನಾನು ಕೈಗಾರಿಕೆ, ಕೈಗಾರಿಕೋದ್ಯಮಿಗಳ ಪರ ಇಲ್ಲ. ಕೈಗಾರಿಕೆಗಳು, ಹೂಡಿಕೆದಾರರ ಅಗತ್ಯವೂ ನಮಗಿಲ್ಲ. ಆದರೆ, ನಾನು ಜಿಲ್ಲೆಯ ರೈತರು, ಗ್ರಾಮಸ್ಥರು, ವಿದ್ಯಾವಂತ ಯುವಕರು ಹಾಗೂ ಜನಪ್ರತಿನಿಧಿಗಳ ಪರವಿದ್ದೇನೆ. ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದರು.

ಜಿಲ್ಲೆಯಲ್ಲಿರುವ ಕೈಗಾರಿಕೆಗಳು ಸರೋಜಿನಿ ಮಹಿಷಿ ವರದಿ ಪ್ರಕಾರ ಸ್ಥಳೀಯರಿಗೆ ಕೆಲಸ ನೀಡಿಲ್ಲ. ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀ‌ಡದೆ ವಂಚಿಸಲಾಗುತ್ತಿದೆ. ಇಂಥ ಕಂಪನಿಗಳ ಪರ ನಾನು ಏಕೆ ಇರಬೇಕು? ಅವರು ಹೇಳಿದಂತೆ ನಾವು ಕೇಳಬೇಕೇ? ನಾವು ಅವರ ಗುಲಾಮರಾಗಬೇಕೇ’ ಎಂದು ಪ್ರಶ್ನಿಸಿದರು.

ADVERTISEMENT

‘ಕೈಗಾರಿಕೆಗಳಿಂದ ನನಗೆ ಏನೂ ಪ್ರಯೋಜನವಿಲ್ಲ. ಕೈಗಾರಿಕೆಗಳಿಗಾಗಿ ನಮ್ಮ‌ ರೈತರು ಜಮೀನು ಕಳೆದುಕೊಂಡು ಹಾಳಾಗಿದ್ದಾರೆ. ಆ ಕಂಪನಿಗಳಲ್ಲಿ ನಮ್ಮವರಿಗೆ ಶೌಚಾಲಯ ತೊಳೆಯುವ ಕೆಲಸ, ವಾಚ್‌ಮ್ಯಾನ್‌ ಕೆಲಸ ನೀಡುತ್ತಾರೆ. ನಮ್ಮ ರೈತರ ಮಕ್ಕಳು ಓದಿಲ್ಲವೇ? ಸ್ಥಳೀಯರನ್ನು ಕೆಲಸಕ್ಕೆ ತೆಗೆದುಕೊಂಡು 11 ತಿಂಗಳು ದುಡಿಸಿಕೊಳ್ಳುತ್ತಾರೆ. ಮತ್ತೆ ಹೊಸ ಗುತ್ತಿಗೆ ಕಂಪನಿಯಿಂದ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಮೂರು ಬಾರಿ ಇದೇ ರೀತಿ ಮಾಡಿ ಕೆಲಸದಿಂದ ತೆಗೆದು‌ಹಾಕುತ್ತಾರೆ’ ಎಂದು ಹರಿಹಾಯ್ದರು.

‘ಕಂಪನಿಗಳಿಗೆ ಜನಪ್ರತಿನಿಧಿಗಳು ಎಂದರೆ ಕೇವಲವಾಗಿದೆ. ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಪುರಹಳ್ಳಿ‌ ಪಟ್ಟಣ ಪಂಚಾಯಿತಿ ಸದಸ್ಯ ಪರಿಶಿಷ್ಟ ಜಾತಿಯವರು. ಅವರನ್ನೂ ಕರೆದಿಲ್ಲ. ಇವರ ಉದ್ದೇಶವೇನು? ನನಗೆ ಇ–ಮೇಲ್‌ ಮಾತ್ರ ಬಂದಿತ್ತು’ ಎಂದರು.

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಆದರೆ, ಅಧಿಕಾರಿಗಳಾದ ಕಾರಣ ಅವರೆಲ್ಲ ಹೋಗಿದ್ದಾರೆ ಎಂದು ಹೇಳಿದರು.

ಫೆ.17ರಂದು ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ಕಾರ್ಯಕ್ರಮ ಅಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಶಾಸಕ ಕೊತ್ತೂರು ಹೇಳಿಕೆಗೆ ಬಿಜೆಪಿ, ಜೆಡಿಎಸ್‌ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ

ಕಂಪನಿಗಳ ಬಳಿ ನಾನೇನು ರೋಲ್‌ ಕಾಲ್‌ ಮಾಡಲು ಹೋಗಿಲ್ಲ. ಅವರೇನು ನಮ್ಮ ಬಳಿ‌ ಬರುವ ಅವಶ್ಯವೂ ಇಲ್ಲ. ಅಂಥವರು ನಮಗೆ ಬೇಕಿಲ್ಲ.‌ ಕರೆಯದೇ‌ ಇದ್ದ ಕಡೆ ಹೋಗಲು ಸಾಧ್ಯವೇ ಇಲ್ಲ ಕೊತ್ತೂರು ಮಂಜುನಾಥ್‌ ಶಾಸಕ
ಮಂಜುನಾಥ್‌ ಶಾಸಕ

ಕಂಪನಿಗೆ ಧಮ್ಕಿ ಹಾಕಿಲ್ಲ: ಶಾಸಕ

‘ಯಾವುದೇ ಕಂಪನಿಗೆ ನಾನು ಎಲ್ಲೂ ಧಮ್ಕಿ ಹಾಕಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿಲ್ಲ. ಅವರಿಗೆ ತೊಂದರೆ ಕೊಡಬಹುದು ಎಂದುಕೊಂಡರೆ ನಾನಾ ಮಾರ್ಗಗಳಿವೆ ಎಂದಷ್ಟೇ ಹೇಳಿದ್ದೇನೆ’ ಎಂದು ಕೊತ್ತೂರು ಮಂಜುನಾಥ್‌ ತಿಳಿಸಿದರು. ಕಂಪನಿ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಕ್ಷಮೆಯಾಚನೆಗೆ ಆಗ್ರಹಿಸುತ್ತಿದ್ದಂತೆ ಅವರು ಈ ಸ್ಪಷ್ಟನೆ ನೀಡಿದರು. ವೇಮಗಲ್‌ನಲ್ಲಿ ಗುರುವಾರ ಮಾತನಾಡಿದ್ದ ಅವರು ‘ಕೈಗಾರಿಕಾ ಪ್ರದೇಶದವರು ನಮ್ಮ ವಿದ್ಯುತ್‌ ಬಳಕೆ ಮಾಡುತ್ತಿದ್ದಾರೆ. ಇದರಿಂದ ವೇಮಗಲ್‌ ಜನರಿಗೆ ತೊಂದರೆ ಆಗುತ್ತಿದೆ. ಫೀಡರ್‌ ಬದಲಾಯಿಸಲು ಸೂಚನೆ ನೀಡಿದ್ದೇನೆ. ಬದಲಾಯಿಸದಿದ್ದರೆ ಲೈನ್‌ ಕತ್ತರಿಸಿ ಹಾಕಲಾಗುವುದು. ಟ್ರ್ಯಾಕ್ಟರ್‌ನಲ್ಲಿ ರಿವರ್ಸ್ ಡಿಕ್ಕಿ ಹೊಡೆಸಲಾಗುವುದು. ಬೇಕಾದರೆ ಪ್ರತ್ಯೇಕವಾಗಿ ಫೀಡರ್‌ ಹಾಗೂ ಸ್ಟೇಷನ್‌ ಮಾಡಿಕೊಳ್ಳಲಿ’ ಎಂದಿದ್ದರು. ‘ಕೈಗಾರಿಕಾ ಪ್ರದೇಶದವರಿಗೆ ಖಾತೆ ಮಾಡಿ ಕೊಡಬೇಡಿ. ಏನಾಗುತ್ತದೆ ನೋಡೋಣ. ಅವರನ್ನು ಸುಮ್ಮನೇ ಬಿಡುವುದಿಲ್ಲ. ಜನಪ್ರತಿನಿಧಿಗಳ ಶಕ್ತಿ ಏನೆಂಬುದು ಅವರಿಗೆ ಗೊತ್ತಿಲ್ಲ’ ಎಂದು ಹೇಳಿದ್ದರು.

ಸ್ವಚ್ಛತೆಗೆ ಬೇಕು ಕಾರ್ಯಕ್ರಮಕ್ಕೇ ಬೇಡವೇ?

‘ಯಾರೋ ಒತ್ತಾಯಿಸುತ್ತಾರೆ ಎಂದು ನಾನು ಏಕೆ ಕ್ಷಮೆ ಕೋರಲಿ? ಕೈಗಾರಿಕೆಗಳು ಇರುವ ಭಾಗದ ಚರಂಡಿ ಕಸ ಸ್ವಚ್ಛ ಮಾಡಲು ಮೂಲಸೌಲಭ್ಯ ಕಲ್ಪಿಸಲು ಪಟ್ಟಣ ಪಂಚಾಯಿತಿ ಬೇಕು. ಖಾತೆ ಮಾಡಲು ನೀರು ಪೂರೈಸಲು ವಿದ್ಯುತ್‌ ಕೊಡಲು ನಾವು ಬೇಕು. ಕಾರ್ಯಕ್ರಮಕ್ಕೆ ಮಾತ್ರ ಬೇಡ. ಇದೆಂಥಾ ನ್ಯಾಯ?’ ಎಂದು ಕೊತ್ತೂರು ಮಂಜುನಾಥ್‌ ಗುಡುಗಿದರು. ಬೇರೆ ರಾಜ್ಯದವರಿಂದ ಬಂದವರಿಗೆ ಒಳ್ಳೆಯ ಕೆಲಸ ಕೊಟ್ಟು ನಮ್ಮವರಿಗೆ ನೆಲ ಶೌಚಾಲಯ ತೊಳೆಯುವ ಹಾಗೂ ವಾಚ್‌ಮ್ಯಾನ್‌ ಕೆಲಸ ನೀಡುತ್ತಾರೆ ಎಂದು ಟೀಕಿಸಿದರು. ರಕ್ಷಣಾ ಸಚಿವರು ಇರುವ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹೋದರೆ ತೊಂದರೆ ಆಗುತ್ತದೆ ಎನ್ನುವುದಾದರೆ ನಾವೇನು ಮಾಡಲು ಆಗುವುದಿಲ್ಲ. ಏನು ಮಾತನಾಡಬೇಕೋ ಅದನ್ನು ಸರಿಯಾಗಿ ಹೇಳಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.