ADVERTISEMENT

ಅಧಿವೇಶನ ಕರೆಯಲಿ: ಎಚ್‌ಡಿಕೆ ಆಗ್ರಹ

ಕೋವಿಡ್‌ ಹೆಸರಿನಲ್ಲಿ ಬಿಜೆಪಿ ಸರ್ಕಾರದ ಲೂಟಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:26 IST
Last Updated 18 ಜೂನ್ 2021, 16:26 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ: ‘ರಾಜ್ಯ ಬಿಜೆಪಿ ಸರ್ಕಾರ ಲೂಟಿಕೋರರ ಸರ್ಕಾರ. ಕೋವಿಡ್‌ ಹೆಸರಿನಲ್ಲಿ ಲೂಟಿಗೆ ಇಳಿದಿದ್ದು, ಜನರ ಹಿತದೃಷ್ಟಿಯಿಂದ ತುರ್ತಾಗಿ ವಿಧಾನಮಂಡಲ ಅಧಿವೇಶನ ಕರೆಯಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಜಿಲ್ಲೆಯ ಮಾಲೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘-ಬಿಜೆಪಿ ತನ್ನ ಆಂತರಿಕ ವಿಚಾರಗಳನ್ನು ಬದಿಗಿಟ್ಟು ಕೋವಿಡ್ ಸಂಕಷ್ಟದ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಬೇಕು. ಅಧಿವೇಶನ ಕರೆಯದಿದ್ದರೆ ಪಕ್ಷದಿಂದ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಗುಡುಗಿದರು.

‘ರಾಜ್ಯದ ಜನ ಕಷ್ಟದಲ್ಲಿದ್ದಾರೆ. ಬಿಜೆಪಿಯವರು ದಂಗೆ ನಡೆಸುವ ಕಾಲವಲ್ಲ. ಸರ್ಕಾರ ತನ್ನ ಅಸ್ಥಿರತೆ ತೋರಿಸುತ್ತಾ ಕೂತರೆ ಜನರ ಬದುಕು ಏನಾಗಬೇಕು? ಲಾಕ್‌ಡೌನ್‌ನಿಂದ ನೊಂದ ಜನರಿಗೆ ಪರಿಹಾರ ಕೊಡಬೇಕು. ರಾಜ್ಯದ ಬೊಕ್ಕಸಕ್ಕೆ ಬರಬೇಕಾದ ತೆರಿಗೆ ಸಕಾಲಕ್ಕೆ ಬಂದಿದೆ. ಈ ತೆರಿಗೆ ಹಣದಿಂದ ನೊಂದವರಿಗೆ ನೆರವಾಗುವ ಬಗ್ಗೆ ಕಲಾಪದಲ್ಲಿ ಸಲಹೆ ಕೊಡುತ್ತೇವೆ’ ಎಂದರು.

ADVERTISEMENT

‘ಬಿಜೆಪಿ ಶಾಸಕರಲ್ಲೇ ಹೊಂದಾಣಿಕೆ ಇಲ್ಲ. ನಾಯಕತ್ವ ಗೊಂದಲ ದುರದೃಷ್ಟಕರ. ಬಿಜೆಪಿಯಲ್ಲಿ ಸಿ.ಎಂ ಆಗಲು ಕೆಲವರು ಸೂಟು ಹೊಲೆಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲೂ ಹಲವರು ಸೂಟ್‌ ಸಿದ್ಧ ಮಾಡಿಕೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಏನಾಗುತ್ತೆ ಅಂತ ಗೊತ್ತಾಗುತ್ತೆ’ ಎಂದು ವ್ಯಂಗ್ಯವಾಡಿದರು.

‘ನಮ್ಮದು ರಾಕ್ಷಸಿ ಸರ್ಕಾರ ಅಂತ ಹೇಳಿ ಹೋದ ಒಬ್ಬ ಶಾಸಕ ಈಗ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಾರಂತೆ. ಈ ಸರ್ಕಾರದಲ್ಲಿ ನೀರಾವರಿ ಇಲಾಖೆ ಮಾತ್ರವಲ್ಲ, ಎಲ್ಲಾ ಇಲಾಖೆಯಲ್ಲೂ ಲೂಟಿ ನಡೆಯುತ್ತಿದೆ. ಬಿಜೆಪಿಯ ದುರಾಡಳಿತದಲ್ಲಿ ಕಾಂಗ್ರೆಸ್‌ನ ಸಮ ಪಾಲಿದೆ. ಸ್ವಾಮೀಜಿಗಳು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ವಹಿಸಬೇಕು. ನಾಡಿನ ಜನರ ಪರವಾಗಿ ಸ್ವಾಮೀಜಿಗಳು ಇರಬೇಕು’ ಎಂದು ಹೇಳಿದರು.

‘ಯಾರು ಯಾವಾಗ ಯಾರ ಹೃದಯದಲ್ಲಿ ಇರುತ್ತಾರೆ ಅಂತ ಗೊತ್ತಿದೆ. ಬೇಕಾದಾಗ ಹೃದಯದಲ್ಲಿ ಇಡ್ಕೋತಾರೆ, ಬೇಡ ಅಂದಾಗ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡುತ್ತಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಫೋನ್‌ ಕದ್ದಾಲಿಕೆ: ‘ಜಿಂದಾಲ್ ವಿಚಾರದಲ್ಲಿ ನಾನ್ಯಾಕೆ ಕಿಕ್‌ಬ್ಯಾಕ್‌ ಪಡೆಯಲಿ. ಕಿಕ್‌ಬ್ಯಾಕ್‌ ಪಡೆದಿದ್ದರೆ ಸಂಪುಟ ಉಪ ಸಮಿತಿ ಏಕೆ ರಚನೆ ಮಾಡುತ್ತಿದ್ದೆ. ರಾಜ್ಯದ ಆಸ್ತಿ ಅಡವಿಟ್ಟು ರಾಜಕೀಯ ಮಾಡು ಅಂತ ನನ್ನಪ್ಪ ಹೇಳಿಕೊಟ್ಟಿಲ್ಲ. ಎಲ್ಲಾ ಸರ್ಕಾರದಲ್ಲೂ ಫೋನ್‌ ಕದ್ದಾಲಿಕೆ ಇದೆ. ನನ್ನ ವಿರುದ್ಧವೂ ಫೋನ್‌ ಕದ್ದಾಲಿಕೆ ಆರೋಪ ಕೇಳಿಬಂದಿತ್ತು. ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯವರು ಉಳ್ಳವರ ಫೋನ್‌ ಕದ್ದಾಲಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.