ಕೋಲಾರ: ‘ಜಿಲ್ಲೆಯ ಗ್ರಾಹಕರನ್ನು ರಕ್ಷಣಾ ಇಲಾಖೆಯ ಮದ್ಯದ ಹೆಸರಲ್ಲಿ ವಂಚಿಸುತ್ತಿರುವ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಏರಿಕೆಯಾಗಿರುವ ಸನ್ನದು ಶುಲ್ಕಕ್ಕೆ ಪ್ರತಿಯಾಗಿ ಸನ್ನದ್ದುದಾರರಿಗೆ ಕಮಿಷನ್ ಹೆಚ್ಚಳ ಮಾಡಬೇಕು’ ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದವರು ಅಬಕಾರಿ ಇಲಾಖೆ ಆಯುಕ್ತ ಆರ್.ವೆಂಕಟೇಶ್ ಕುಮಾರ್ ಅವರನ್ನು ಗುರುವಾರ ಒತ್ತಾಯಿಸಿದರು.
ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಾಗಿ ನಗರದ ಪ್ರವಾಸ ಮಂದಿರಕ್ಕೆ ಬಂದಿದ್ದ ಅವರಿಗೆ ಸಂಘದ ಪ್ರತಿನಿಧಿಗಳು ಮನವಿ ಪತ್ರ ಸಲ್ಲಿಸಿದರು.
‘ಜಿಲ್ಲೆಯ ಹೆದ್ದಾರಿಯ ಢಾಬಾಗಳಲ್ಲಿ ಅಕ್ರಮವಾಗಿ ಮದ್ಯ ಸೇವಿಸಲು ಅವಕಾಶ ಕೊಟ್ಟಿರುವುದರಿಂದ ಸನ್ನದುಗಳಲ್ಲಿ ವ್ಯಾಪಾರ ಕುಸಿತವಾಗಿದೆ. ಈ ಅಕ್ರಮದ ವಿರುದ್ಧ ಕ್ರಮ ವಹಿಸದಿರುವ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಢಾಬಾಗಳಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲವೆಂದು ನಾಮಫಲಕ ಅಳವಡಿಸಬೇಕು’ ಎಂದು ಕೋರಿದರು.
‘ಪಕ್ಕದ ಆಂಧ್ರಪ್ರದೇಶ ಸರ್ಕಾರದ ಮದ್ಯದ ಹೊಸ ನೀತಿಯಿಂದ ನಮ್ಮ ರಾಜ್ಯದ ಗಡಿಭಾಗಗಳಲ್ಲಿ ಮದ್ಯ ಮಾರಾಟ ತೀವ್ರ ಕುಸಿತಗೊಂಡಿದೆ. ವ್ಯಾಪಾರ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಸನ್ನದುಗಳನ್ನು ಸ್ಥಳಾಂತರಗೊಳಿಸುವುದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.
ಆರ್.ವೆಂಕಟೇಶ್ ಕುಮಾರ್ ಮಾತನಾಡಿ, ‘ರಾಜ್ಯ ಸರ್ಕಾರಕ್ಕೆ ಆದಾಯ ತಂದುಕೊಡುವಲ್ಲಿ ಅಬಕಾರಿ ಇಲಾಖೆಯು ಪ್ರಮುಖ ಪಾತ್ರವಹಿಸಿದೆ. ಈ ಹಿನ್ನೆಲೆಯಲ್ಲಿ ನಿಯಮರೀತ್ಯಾ ಮದ್ಯದ ವಹಿವಾಟು ಮಾಡಬೇಕು. ಮಾರಾಟದ ಕಮಿಷನ್ ಹೆಚ್ಚಳ ಸೇರಿದಂತೆ ಸನ್ನದ್ದುದಾರರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೆಂಕಟಾಚಲಪತಿ, ಗರೀಶ್, ಚಲಪತಿ, ಗುಟ್ಲೂರು ರಮೇಶ್, ಟಮಕ ರಮೇಶ್, ಚಂದ್ರಪ್ಪ ಸೇರಿದಂತೆ ಸನ್ನದ್ದುದಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.