ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 4:08 IST
Last Updated 3 ಮೇ 2019, 4:08 IST

ಕೋಲಾರ: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಪುರಸಭೆಯ ಚುನಾವಣಾ ದಿನಾಂಕ ಘೋಷಿಸಿದ್ದು, ಗುರುವಾರದಿಂದಲೇ (ಮೇ 2) ಚುನಾವಣಾ ನೀತಿಸಂಹಿತೆ ಜಾರಿಯಾಗಿದೆ.

ಮಾಲೂರು ಹಾಗೂ ಬಂಗಾರಪೇಟೆ ಪುರಸಭೆಯ ತಲಾ 27 ವಾರ್ಡ್‌ಗಳು, ಶ್ರೀನಿವಾಸಪುರ ಪುರಸಭೆಯ 23 ವಾರ್ಡ್‌ಗಳಿಗೆ ಮೇ 29ರಂದು ಚುನಾವಣೆ ನಡೆಯಲಿದೆ. ಜಿಲ್ಲಾಧಿಕಾರಿಯು ಮೇ 9ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕಡೆಯ ದಿನವಾಗಿದ್ದು, ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ 20 ಕಡೆಯ ದಿನ. ಮೇ 29ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮೇ 31ರಂದು ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದೇ ದಿನ ಸಂಜೆ ಚುನಾವಣಾ ನೀತಿಸಂಹಿತೆ ಅಂತ್ಯಗೊಳ್ಳುತ್ತದೆ.

ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಾಗಲೇ ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಮಾಲೂರು ಪುರಸಭೆ ವ್ಯಾಪ್ತಿಯಲ್ಲಿ 32 ಮತಗಟ್ಟೆ, ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ 41 ಮತಗಟ್ಟೆ ಹಾಗೂ ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ 23 ಮತಗಟ್ಟೆಗಳಿವೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿ ₹ 1.50 ಲಕ್ಷ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.