
ಕೋಲಾರ: ‘ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಅನ್ನು ಬಲಗೈ ಸಮುದಾಯಕ್ಕೆ ನೀಡಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಅಧ್ಯಕ್ಷ ವೆಂಕಟಾಚಲಪತಿ, ‘ಯಾವುದೇ ಪಕ್ಷ ಬಲಗೈ ಸಮುದಾಯವನ್ನು ಕಡೆಗಣಿಸಿದರೆ ಪರಿಣಾಮ ಏನಾಗುತ್ತದೆ ಎನ್ನುವುದು ಕಳೆದ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿಯಾಗಿ ಕಣಕ್ಕಿಳಿಸುವ ಅಭ್ಯರ್ಥಿ ಪೈಕಿ ಬಿಜೆಪಿಗೆ ಅವಕಾಶ ನೀಡಿದರೆ ಅನುಕೂಲ. ಜೆಡಿಎಸ್‌ನವರಲ್ಲಿಯೂ, ಬಿಜೆಪಿ ವರಿಷ್ಠರಲ್ಲಿಯೂ ಮನವಿ ಮಾಡುತ್ತೇವೆ’ ಎಂದರು.
‘ದಲಿತ ಸಂಘಟನೆಗಳು ಬಿಜೆಪಿ ವಿರೋಧಿಯಾಗಿದ್ದು, ಇದೀಗ ಬೆಂಬಲ ನೀಡುತ್ತಿರುವ ಬಗ್ಗೆ ಕುತೂಹಲ ಸಹಜ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಯಾವ ರೀತಿ ನಡೆದುಕೊಂಡಿತು ಎಂಬುದು ಗೊತ್ತಿದ್ದು, ಮೃತಪಟ್ಟಾಗ ಜಾಗವನ್ನೂ ಕೊಡಲಿಲ್ಲ. ಕಾಂಗ್ರೆಸ್ ಉರಿಯುವ ಮನೆ ಯಾರೂ ಹೋಗದಂತೆ ಅಂಬೇಡ್ಕರ್ ತಿಳಿಸಿದ್ದರೂ ಅನೇಕರು ನಮ್ಮನ್ನು ದಾರಿ ತಪ್ಪಿಸಿದರು’ ಎಂದು ಹೇಳಿದರು.
‘ಸಂವಿಧಾನ ತಿರುಚುತ್ತೇವೆ ಎಂದವರನ್ನು ಹಿಂದೆಯೇ ಸಂಪುಟದಿಂದ ಕಿತ್ತು ಬಿಸಾಡಲಾಗಿತ್ತು. ಟೀ ಮಾರುವವರು ಪ್ರಧಾನಿಯಾಗಿದ್ದು, ಸಂವಿಧಾನದಿಂದಲೇ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಯಾವುದೇ ಒಂದು ಪಕ್ಷದ ಪರ ಇಲ್ಲ. ಇಲ್ಲಿ ಒಂದು ಸ್ಥಾನ ಬಂದರೆ ಮೋದಿ ಅಭಿವೃದ್ಧಿಗೆ ಬೆಂಬಲ’ ಎಂದು ಹೇಳಿದರು.
ಮುಖಂಡ ಮೇಡಿಹಾಳ ಮುನಿಆಂಜಿ, ‘ಬಲಗೈ ಸಮುದಾಯದ ಎಸ್.ಮುನಿಸ್ವಾಮಿ ಅವರಿಗೆ ಕಳೆದ ಬಾರಿ ಟಿಕೆಟ್ ನೀಡಲಾಗಿತ್ತು. ನಾವೆಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಿದ್ದೆವು. ಅವರು ಉತ್ತಮ ಕೆಲಸ ಮಾಡಿದ್ದಾರೆ. ಜನರಿಗೆ ಸಿಗುವ ಸಂಸದರಾಗಿದ್ದು, ಮೈತ್ರಿಯಲ್ಲೂ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠರಲ್ಲಿಯೂ ಮನವಿ ಮಾಡುತ್ತಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಾಂಧಿನಗರ ರಾಜ್ ಕುಮಾರ್, ಅಶೋಕ್, ಕುಮಾರ್, ಅಮ್ಮೇರಹಳ್ಳಿ ರವಿ, ಎ.ನಾಗರಾಜ್, ರಾಜಪ್ಪ, ನಾರಾಯಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.