ADVERTISEMENT

ರಾಹುಲ್‌ಗೆ ಮುನಿಯಪ್ಪ ನೀಡಿದ ದೂರೇನು?

ಕೆ.ಓಂಕಾರ ಮೂರ್ತಿ
Published 19 ಏಪ್ರಿಲ್ 2024, 5:05 IST
Last Updated 19 ಏಪ್ರಿಲ್ 2024, 5:05 IST
ಮಾಲೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಜೊತೆ ಕೆ.ಎಚ್‌.ಮುನಿಯಪ್ಪ ಹಾಗೂ ಶಾಸಕಿ ರೂಪಕಲಾ ಶಶಿಧರ್‌ ಮಾತನಾಡಿದ ಸಂದರ್ಭ
ಮಾಲೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಜೊತೆ ಕೆ.ಎಚ್‌.ಮುನಿಯಪ್ಪ ಹಾಗೂ ಶಾಸಕಿ ರೂಪಕಲಾ ಶಶಿಧರ್‌ ಮಾತನಾಡಿದ ಸಂದರ್ಭ    

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಭೇಟಿ ನೀಡಿ ಪ್ರಚಾರ ಕಹಳೆ ಮೊಳಗಿಸಿದರೂ ಜಿಲ್ಲೆಯಲ್ಲಿ ಬಣಗಳ ಅಸಮಾಧಾನ ತಣ್ಣಗಾದಂತೆ ಕಾಣುತ್ತಿಲ್ಲ. ಎರಡೂ ಬಣಗಳ ಮುಖಂಡರು ಸಮಾವೇಶದಲ್ಲಿ ಜೊತೆಯಲ್ಲಿ ಕಾಣಿಸಿಕೊಂಡಿದ್ದರೂ ಒಳಬೇಗುದಿಗೆ ತೆರೆ ಬಿದ್ದಿಲ್ಲ.

ವೇದಿಕೆಯಲ್ಲಿ ಎರಡೂ ಬಣದವರು ಪರಸ್ಪರ ಮುಖ ನೋಡಲಿಲ್ಲ, ಮಾತನಾಡಲಿಲ್ಲ. ಮತದಾನಕ್ಕೆ ಎಂಟು ದಿನಗಳಿದ್ದು, ಕಾರ್ಯಕರ್ತರಲ್ಲಿ ಗೊಂದಲ ಮುಂದುವರಿದಿದೆ.

ಮಾಲೂರು– ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗೇಟ್‌ ಬಳಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಕೆ.ಎಚ್‌.ಮುನಿಯಪ್ಪ ಪದೇಪದೇ ರಾಹುಲ್‌ ಗಾಂಧಿ ಬಳಿ ತೆರಳಿ ಮಾತನಾಡಿದ್ದು ಏನಿರಬಹುದೆಂದು ಕಾಂಗ್ರೆಸ್‌ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಮೊದಲಿಗೆ ತಮ್ಮ ಪುತ್ರಿ, ಶಾಸಕಿ ರೂಪಕಲಾ ಶಶಿಧರ್‌ ಅವರನ್ನು ರಾಹುಲ್‌ ಅವರಿಗೆ ಪರಿಚಯಿಸಿದರು. ಬಳಿಕ ರಾಷ್ಟ್ರೀಯ ನಾಯಕನ ಬಳಿ ಮತ್ತಷ್ಟು ಹತ್ತಿರ ಸರಿದು ಮಾತನಾಡ ತೊಡಗಿದರು. ರಾಹುಲ್‌ ಕೂಡ ಮುನಿಯಪ್ಪ ಕೈಹಿಡಿದು ಮಾತಿಗೆ ಕಿವಿಯಾದರು.

ಮುನಿಯಪ್ಪ ಆಪ್ತರು ಹೇಳುವಂತೆ ಕೋಲಾರ ಕ್ಷೇತ್ರದ ವಿದ್ಯಮಾನ‌ಗಳ ಬಗ್ಗೆ ರಾಹುಲ್‌ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ, ಕ್ಷೇತ್ರದಲ್ಲಿ ಏಳು ಬಾರಿ ಸಂಸದರಾಗಿದ್ದ ತಮ್ಮನ್ನು ಕೆಲ ಮುಖಂಡರು ಬೇಕೆಂತಲೇ ನಿರ್ಲಕ್ಷಿಸುತ್ತಿರುವ ಬಗ್ಗೆಯೂ, ಅಳಿಯನಿಗೆ ಟಿಕೆಟ್‌ ತಪ್ಪಿಸಿದ್ದರ ಬಗ್ಗೆಯೂ ದೂರಿದ್ದಾರೆ.

ಈ ಎಲ್ಲಾ ಮಾತು ಕೇಳಿಸಿಕೊಂಡ ರಾಹುಲ್‌, ‘ಅಭ್ಯರ್ಥಿ ಗೆಲ್ಲಿಸಲು ಮೊದಲು ಗಮನ ಕೊಡಿ. ಚುನಾವಣೆ ಬಳಿಕ ದೆಹಲಿಗೆ ಬಂದು ನನ್ನನ್ನು ಭೇಟಿಯಾಗಿ’ ಎಂದು ಮುನಿಯಪ್ಪ ಅವರಿಗೆ ಹೇಳಿರುವುದು ಗೊತ್ತಾಗಿದೆ.

ಇದೇ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜೊತೆಯೂ ಮುನಿಯಪ್ಪ ಆಪ್ತವಾಗಿ ಚರ್ಚಿಸುತ್ತಿದ್ದದ್ದು ಕಂಡುಬಂತು.

ತಮ್ಮನ್ನೇ ನಂಬಿಕೊಂಡಿರುವ ಬೆಂಬಲಿಗರ ಭವಿಷ್ಯವೇನು ಎಂಬ ಆತಂಕ ಮುನಿಯಪ್ಪ ಅವರನ್ನು ದಿನೇದಿನೇ ಕಾಡುತ್ತಿದೆ. ಏಕೆಂದರೆ ಅವರ ಬೆಂಬಲಿಗರನ್ನು ಅಭ್ಯರ್ಥಿ ಕೆ.ವಿ.ಗೌತಮ್‌ ಸೇರಿದಂತೆ ಘಟಬಂಧನ್‌ ಪ್ರಮುಖರು ನಿರ್ಲಕ್ಷಿಸುತ್ತಿದ್ದಾರೆ ಎಂಬ ದೂರುಗಳಿವೆ. ಪ್ರಚಾರಕ್ಕೆ ಕರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಟಿಕೆಟ್ ವಿಚಾರದಲ್ಲಿ ಸೋತು ಗೆದ್ದಂತಿರುವ ಘಟಬಂಧನ್‌ (ರಮೇಶ್‌ ಕುಮಾರ್‌ ಬಣ) ನಾಯಕರು ಮಾತ್ರ ಅಭ್ಯರ್ಥಿ ಗೌತಮ್‌ ಅವರನ್ನು ಮಡಿಲಿಗೆ ಕಟ್ಟಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹೇಳುವಂತೆ ಮುನಿಯಪ್ಪ ಬಹುತೇಕರನ್ನು ಹೆಸರಿಡಿದು ಮಾತನಾಡಿಸುತ್ತಾರೆ. ಕ್ಷೇತ್ರದಲ್ಲಿ ಅಷ್ಟೊಂದು ಪರಿಚಿತ ವ್ಯಕ್ತಿ. ಆದರೆ, ಪ್ರಚಾರಕ್ಕೆ ಅಪರೂಪವಾಗಿದ್ದಾರೆ. ಇದರಿಂದ ‘ವಿವಾಹ ಮಹೋತ್ಸವದಲ್ಲಿ ವರನೇ ಇಲ್ಲದಂತೆ ಭಾಸವಾಗುತ್ತಿದೆ’ ಎನ್ನುತ್ತಿದ್ದಾರೆ. ತಮ್ಮ ಅಳಿಯನಿಗೆ ಟಿಕೆಟ್‌ ಸಿಕ್ಕಿದ್ದರೆ ಈ ರೀತಿ ಮಾಡುತ್ತಿದ್ದರೇ ಎಂಬ ಪ್ರಶ್ನೆಯನ್ನೂ ಹಾಕುತ್ತಿದ್ದಾರೆ.

‘ಕೋಲಾರ ಕಾಂಗ್ರೆಸ್‌ನ ಭದ್ರಕೋಟೆ ಆಗಲು ಮುನಿಯಪ್ಪ ಕಾರಣ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲು ಕೂಡ ಅವರೇ ಕಾರಣ. ಲೋಕಸಭೆ ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವುದು ಕಷ್ಟ’ ಎಂದು ಮುನಿಯಪ್ಪ ಬೆಂಬಲಿಗ, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

- ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಬೇಕೆಂದರೆ ಮುನಿಯಪ್ಪ ಸಕ್ರಿಯವಾಗಿ ಪಾಲ್ಗೊಳ್ಳಬೇಕು ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತರನ್ನು ಅಭ್ಯರ್ಥಿ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು
ಕೆ.ಜಯದೇವ ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ
ಈ ಚುನಾವಣೆಯಲ್ಲಿ ನಮ್ಮನ್ನು ನಿರ್ಲಕ್ಷಿಸುವ ಮೂಲಕ ಸಭೆಯಲ್ಲಿ ಹೊಡೆಯುವ ಮೂಲಕ ಕ್ಷೇತ್ರದಲ್ಲಿನ ಕಾಂಗ್ರೆಸ್‌ ಶಕ್ತಿಯನ್ನೇ ಕುಗ್ಗಿಸಿದ್ದಾರೆ. ನಾವೀಗ ಮಾನಸಿಕ ರೋಗಿಗಳಂತಾಗಿದ್ದೇವೆ
- ಊರುಬಾಗಿಲು ಶ್ರೀನಿವಾಸ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ

‘ಪಕ್ಷಕ್ಕೆ ನನ್ನ ಅವಶ್ಯ ಇರಲಿಲ್ಲವೇ?’

‘ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್‌ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನನ್ನ ಅಳಿಯ ಚಿಕ್ಕಪೆದ್ದಣ್ಣ ಅವರ ಹೆಸರನ್ನು ಅಂತಿಮಗೊಳಿಸಿದ್ದರು. ಪಟ್ಟಿಗೆ ಸಹಿಯೂ ಹಾಕಿದ್ದರು. ಆದರೆ ಕೆಲವರು ಹಿಂದೆ ನಿಂತು ಸಚಿವರು ಶಾಸಕರು ವಿಧಾನ ಪರಿಷತ್‌ ಸದಸ್ಯರ ರಾಜೀನಾಮೆ ಪ್ರಹಸನ ಮಾಡಿಸಿದರು’ ಎಂದು ಸಚಿವ ಕೆ.ಎಚ್‌.ಮುನಿಯಪ್ಪ ಸಮಾವೇಶದ ವೇದಿಕೆಯಲ್ಲಿ ರಾಹುಲ್‌ ಅವರಿಗೆ ದೂರಿರುವುದು ಗೊತ್ತಾಗಿದೆ.

‘ಈ ಬಗ್ಗೆ ನಿಮಗೆ (ರಾಹುಲ್‌) ಸಮಗ್ರವಾಗಿ ವಿವರಿಸಬೇಕಿದೆ. ನಿಮ್ಮನ್ನು ಭೇಟಿಯಾಗಲು ಸಮಯಾವಕಾಶ ಕೊಡಿ. ನಾನು ರಾಷ್ಟ್ರೀಯಮಟ್ಟದ ನಾಯಕ. ಪಕ್ಷಕ್ಕೆ ನನ್ನ ಅವಶ್ಯ ಇರಲಿಲ್ಲವೇ? ಶಾಸಕರು ರಾಜೀನಾಮೆ ಕೊಡುವುದು ಪಕ್ಷಕ್ಕೆ ಪರಿಣಾಮ ಬೀರುತ್ತದೆ ಎಂದಾದರೆ ನನಗೆ ಆಗಿರುವ ಅವಮಾನ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲವೇ? ದಲಿತ ಸಮುದಾಯದ ಮೇಲೆ ಅಭಿಮಾನಿಗಳ ಮೇಲೆ ಬೆಂಬಲಿಗರಿಗೆ ಮಾನಸಿಕ ಹಿಂಸೆ ಆಗುವುದಿಲ್ಲ’ ಎಂದು ಅವರು ಪ್ರಶ್ನಿಸಿರುವುದು ತಿಳಿದುಬಂದಿದೆ.

ಅಭ್ಯರ್ಥಿ ಒಪ್ಪಿಕೊಂಡಿರುವ ಮುನಿಯಪ್ಪ

ಕೆ.ಎಚ್‌.ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ಕೇಳಿದ್ದು ನಿಜ ಕೆ.ವಿ.ಗೌತಮ್ ಅಭ್ಯರ್ಥಿಯಾದ ಬಳಿಕ ಸಮಾಧಾನದಿಂದ ಒಪ್ಪಿಕೊಂಡಿದ್ದಾರೆ. ಅಲ್ಲದೆ ಎಲ್ಲರಿಗಿಂತ ಮೊದಲೇ ಕಾಂಗ್ರೆಸ್‌ ಸಮಾವೇಶದಲ್ಲಿ ಇದ್ದರು. ಅವರ ಪುತ್ರಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಬಸ್‍ ಮಾಡಿಕೊಂಡು ಹೆಚ್ಚಿನ ಜನರನ್ನು ಕ್ಷೇತ್ರದಿಂದ ಕರೆತಂದಿದ್ದರು. ಯಾವುದೇ ಅಸಮಾಧಾನ ಇಲ್ಲ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.