ADVERTISEMENT

ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತ ನಿರ್ಲಕ್ಷ್ಯ: ಶಾಸಕಿ ಎಂ.ರೂಪಕಲಾ ಆರೋಪ

ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:12 IST
Last Updated 19 ಸೆಪ್ಟೆಂಬರ್ 2020, 3:12 IST
ಕೆಜಿಎಫ್ ರಾಬರ್ಟ್‌ಸನ್‌ ಪೇಟೆಯಲ್ಲಿ ನೆನೆಗುದಿಗೆ ಬಿದ್ದಿರುವ ಅಶೋಕನಗರ ರಸ್ತೆಯನ್ನು ಶಾಸಕಿ ಎಂ.ರೂಪಕಲಾ ಶುಕ್ರವಾರ ಪರಿಶೀಲಿಸಿದರು
ಕೆಜಿಎಫ್ ರಾಬರ್ಟ್‌ಸನ್‌ ಪೇಟೆಯಲ್ಲಿ ನೆನೆಗುದಿಗೆ ಬಿದ್ದಿರುವ ಅಶೋಕನಗರ ರಸ್ತೆಯನ್ನು ಶಾಸಕಿ ಎಂ.ರೂಪಕಲಾ ಶುಕ್ರವಾರ ಪರಿಶೀಲಿಸಿದರು   

ಕೆಜಿಎಫ್‌: ರಸ್ತೆ ವಿಸ್ತರಣೆಗೆ ನಿರ್ಲಕ್ಷ್ಯ ತೋರುತ್ತಿರುವ ಜಿಲ್ಲಾಡಳಿತದ ವಿರುದ್ಧ ಶನಿವಾರ ಕೋಲಾರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮೌನ ಧರಣಿ ನಡೆಸುವುದಾಗಿ ಶಾಸಕಿ ಎಂ.ರೂಪಕಲಾ ಹೇಳಿದ್ದಾರೆ.

ರಾಬರ್ಟ್‌ಸನ್‌ಪೇಟೆಯ ಅಶೋಕನಗರ ರಸ್ತೆಗೆ ಶುಕ್ರವಾರ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ‘ರಸ್ತೆ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸುತ್ತಿದೆ. ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಒಬ್ಬಳೇ ಧರಣಿ ಕುಳಿತುಕೊಳ್ಳುತ್ತೇನೆ. ರಸ್ತೆ ವಿಸ್ತರಣೆಗೆ ದಿನಾಂಕ ಪ್ರಕಟಿಸುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ. ವಿಧಾನಸಭೆಯ ಅಧಿವೇಶನದಲ್ಲಿ ಕೂಡ ಭಾಗವಹಿಸುವುದಿಲ್ಲ’ ಎಂದು ಹೇಳಿದರು.

ರಸ್ತೆ ವಿಸ್ತರಣೆಗೆ ನ್ಯಾಯಾಲಯ ಅಸ್ತು ಎಂದಿದೆ. ಜಿಲ್ಲಾಧಿಕಾರಿ ಕೂಡ ಆದೇಶ ಹೊರಡಿಸಿದ್ದಾರೆ. ಆದರೆ ಇಲಾಖೆ ವಿಸ್ತರಣೆಗೆ ಒಲವು ತೋರುತ್ತಿಲ್ಲ. ಆರು ವರ್ಷದ ಹಿಂದೆ 1.8 ಕಿ.ಮೀ ರಸ್ತೆಗೆ ಮಂಜೂರಾತಿ ದೊರೆತಿತ್ತು. ಇದು ರಾಜ್ಯ ಹೆದ್ದಾರಿ ಎಂದು ಗುರುತಿಸಲಾಗಿದೆ. ರಸ್ತೆ ಮಧ್ಯದಿಂದ 9 ಮೀಟರ್ ರಸ್ತೆ ವಿಸ್ತರಣೆ ಮಾಡಲು ಆದೇಶ ಇದೆ. ಆದರೆ ನೀವು ಮಾತ್ರ ಉದ್ದೇಶಪೂರ್ವಕವಾಗಿ ಕಾಲ ಹರಣ ಮಾಡುತ್ತಿದ್ದೀರಿ. ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ADVERTISEMENT

ಬಡವರು ತಮ್ಮ ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ ಕೆಲವು ಶ್ರೀಮಂತರು ತೊಂದರೆ ಕೊಡುತ್ತಿದ್ದಾರೆ. ಆದರೆ ಹೈಕೋರ್ಟ್‌ 2018 ಆ.20 ರಂದು ಆದೇಶ ನೀಡಿದೆ ಎಂದರು.ನಗರಸಭೆ ಆಯುಕ್ತ ಸಿ.ರಾಜು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿ, ಸಹಾಯಕ ಎಂಜಿನಿಯರ್‌ ರಾಜಗೋಪಾಲ್‌, ಮುಖಂಡರಾದ ಪದ್ಮನಾಭರೆಡ್ಡಿ, ಮೊದಲೈಮುತ್ತು, ನಗರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.