ADVERTISEMENT

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ!

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು; ಬಿಗಿ ಭದ್ರತೆಯಲ್ಲಿ ಎವಿಎಂ ರವಾನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 5:58 IST
Last Updated 11 ನವೆಂಬರ್ 2025, 5:58 IST
ಕೋಲಾರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಭದ್ರತಾ ಕೊಠಡಿಯಿಂದ ಮಂಗಳವಾರ ಇವಿಎಂ ಹಾಗೂ ಇತರ ಸಾಮಗ್ರಿಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಸಮೀಪದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಲಾಯಿತು
ಕೋಲಾರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಭದ್ರತಾ ಕೊಠಡಿಯಿಂದ ಮಂಗಳವಾರ ಇವಿಎಂ ಹಾಗೂ ಇತರ ಸಾಮಗ್ರಿಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಸಮೀಪದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಲಾಯಿತು    
ಕೋಲಾರ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಎಣಿಕೆ | 4 ಟೇಬಲ್‌ಗಳಲ್ಲಿ ಅಂಚೆ ಮತ, 14 ಟೇಬಲ್‌ಗಳಲ್ಲಿ ಇವಿಎಂ ಮತ ಎಣಿಕೆ | ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮರು ಮತ ಎಣಿಕೆ

ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಮಂಗಳವಾರ ಭಾರಿ ಬಿಗಿ ಬಂದೋಬಸ್ತಿನಲ್ಲಿ ನಡೆಯಲಿದ್ದು, ರಾಜಕೀಯ ವಲಯದ ಚಿತ್ತ ಕೋಲಾರದತ್ತ ನೆಟ್ಟಿದೆ.

ಮರು ಮತ ಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಬಿರುಸುಗೊಂಡಿವೆ. ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್‌.ಮಂಜುನಾಥಗೌಡ ನಡುವೆ ಮಾಧ್ಯಮಗಳ ಮೂಲಕ ಮಾತಿನ ವಾಗ್ವಾದ, ಆರೋಪ–ಪ್ರತ್ಯಾರೋಪವೇ ನಡೆಯುತ್ತಿದೆ.

ಹೀಗಾಗಿ, ರಾಜಕೀಯ ವಲಯ ಮಾತ್ರವಲ್ಲದೇ; ಸಾರ್ವಜನಿಕರು ಕೂಡ ಕುತೂಹಲದಿಂದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅಧಿಕೃವಾಗಿ ಫಲಿತಾಂಶವನ್ನು ಚುನಾವಣಾಧಿಕಾರಿಯೂ ಪ್ರಕಟಿಸುವಂತಿಲ್ಲ. ಆದರೆ, ಮತ ಎಣಿಕೆ ಕೇಂದ್ರದಲ್ಲಿರುವ ಅಭ್ಯರ್ಥಿಗಳ ಪರ ಏಜೆಂಟರ ಮೂಲಕ ಫಲಿತಾಂಶ ಸಾಧ್ಯತೆ ಏನಾಗಿರಲಿದೆ ಎಂದು ಗೊತ್ತಾಗುವ ಸಂಭವವಿದೆ.

ADVERTISEMENT

ಮತ ಎಣಿಕೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾಧಿಕಾರಿಯಾಗಿ (ಆರ್‌ಒ) ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್‌.ಮೈತ್ರಿ ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಯಾಗಿ ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು, ಕೋಲಾರ ತಹಶೀಲ್ದಾರ್‌ ವಿವಿಧ ಜವಾಬ್ದಾರಿ ನಿಭಾಯಿಸಲಿದ್ದಾರೆ. ಜೊತೆಗೆ ಸಿಬ್ಬಂದಿ, ಪೊಲೀಸರು ಇರಲಿದ್ದಾರೆ.

ಚುನಾವಣಾ ಆಯೋಗವು ಈ ಕ್ಷೇತ್ರದ ಮತ ಎಣಿಕೆ ವೀಕ್ಷಕರನ್ನಾಗಿ ಉತ್ತರ ಪ್ರದೇಶ ರಾಜ್ಯದ ಐಎಎಸ್‌ ಅಧಿಕಾರಿ ಪ್ರಭು ನಾರಾಯಣಸಿಂಗ್‌ ಅವರನ್ನು ನೇಮಿಸಿದೆ.

ನಗರ ಹೊರವಲಯದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಒಂದೇ ಕೊಠಡಿಯಲ್ಲಿ ಅಂಚೆ ಮತ ಹಾಗೂ ಇವಿಎ ಮತಗಳ ಎಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.

ಅಂಚೆ ಮತಗಳನ್ನು ನಾಲ್ಕು ಟೇಬಲ್‌ಗಳಲ್ಲಿ ವಿಂಗಡಿಸಿ ಎಣಿಕೆ ಮಾಡಲಾಗುತ್ತದೆ. ಪ್ರತಿ ಟೇಬಲ್‌ಗೆ ಒಬ್ಬ ತಹಶೀಲ್ದಾರ್‌ ನಿಯೋಜಿಸಲಾಗುತ್ತದೆ.

ವಿದ್ಯುನ್ಮಾನ ಮತ ಯಂತ್ರದಲ್ಲಿನ (ಇವಿಎಂ) ಮತಗಳನ್ನು 14 ಟೇಬಲ್‌ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಟೇಬಲ್‌ಗೆ ಒಬ್ಬ ಕೌಂಟಿಂಗ್‌ ಸೂಪರ್‌ವೈಸರ್‌ ಹಾಗೂ ಸಹಾಯಕ ಸಿಬ್ಬಂದಿ ಇರುತ್ತಾರೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಎಣಿಕೆ ಕಾರ್ಯ ನಡೆಯುತ್ತಿರುವ ಕಾರಣ ಭಾರಿ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಭದ್ರತಾ ಕೊಠಡಿ ಬಾಗಿಲನ್ನು ಸೋಮವಾರ ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ನೇತೃತ್ವದಲ್ಲಿ ಮಾಲೂರು ಕ್ಷೇತ್ರದಲ್ಲಿ ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆದು ಪರಿಶೀಲಿಸಲಾಯಿತು. ನಂತರ ಎರಡು ವಾಹನಗಳಲ್ಲಿ ಇವಿಎಂ ಹಾಗೂ ಇತರ ಸಾಮಗ್ರಿಗಳನ್ನು ಬಿಗಿಭದ್ರತೆಯಲ್ಲಿ ಎಣಿಕೆ ಕೇಂದ್ರಕ್ಕೆ ಸಾಗಿಸಲಾಯಿತು. ಹಿಂದೆ ಮುಂದೆ ಪೊಲೀಸ್‌ ವಾಹನಗಳು ಸಾಗಿದವು.

ಸುಪ್ರೀಂ ಕೋರ್ಟ್‌ ನಿರ್ದೇಶನ ಹಿನ್ನೆಲೆಯಲ್ಲಿ ಮರು ಮತ ಎಣಿಕೆಗೆ ದಿನ ನಿಗದಿ ಮಾಡಿ ರಾಜ್ಯದ ಮುಖ್ಯ ಚುನಾಣಾಧಿಕಾರಿ ಕಚೇರಿಯಿಂದ ಈಚೆಗೆ ಜಿಲ್ಲಾಧಿಕಾರಿಗೆ ಪತ್ರ ಬಂದಿತ್ತು. ಅ.14ರಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ನೀಡಿರುವ ನಿರ್ದೇಶನಗಳು ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಮರು ಮತ ಎಣಿಕೆ ಸಂದರ್ಭದಲ್ಲಿ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಮರು ಮತ ಎಣಿಕೆ ನಡೆಯಲಿರುವ ತೋಟಗಾರಿಕಾ ಮಹಾವಿದ್ಯಾಲಯದ ಕೊಠಡಿಯಲ್ಲಿನ ಸಿದ್ಧತೆಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಎಂ.ಆರ್‌.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌  

ಫಲಿತಾಂಶ ಪ್ರಕಟಿಸುವಂತಿಲ್ಲ...

ಮರು ಮತ ಎಣಿಕೆ‌ಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗುತ್ತದೆ. ಸಾರ್ವಜನಿಕವಾಗಿ ಫಲಿತಾಂಶ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ಹೀಗಾಗಿ ಚುನಾವಣಾಧಿಕಾರಿಯು ಫಲಿತಾಂಶ ಪ್ರಕಟಿಸುವುದಿಲ್ಲ.

ಮತ ಎಣಿಕೆ ವೇಳೆ ನಡೆದಿದ್ದೇನು?

ಕೋಲಾರ ನಗರದ ಬಾಲಕರ ಕಾಲೇಜಿನಲ್ಲಿ 2023ರ ಮೇ 13ರಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದಿತ್ತು. ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನ ನಂಜೇಗೌಡ ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ಅವರು 50955 ಮತ ಪಡೆದರೆ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ 50707 ಮತ ಗಳಿಸಿದ್ದರು. ಕೆಲವೇ ಮತಗಳ ಅಂತರದಿಂದ ಸೋಲಾಗಿದೆ ಎಂಬುದು ಗೊತ್ತಾಗುತ್ತಿದಂತೆ ಮತ ಎಣಿಕೆ ಕೇಂದ್ರದಲ್ಲಿ ಧಾವಿಸಿ ಬಂದ ಮಂಜುನಾಥಗೌಡ ಹಾಗೂ ಬೆಂಬಲಿಗರು ಮರು ಎಣಿಕೆಗೆ ಪಟ್ಟು ಹಿಡಿದಿದ್ದರು. ಇದಕ್ಕೆ ನಂಜೇಗೌಡ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಉಭಯ ಪಕ್ಷದವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಚುನಾವಣಾ ನಿಯಮದ ಪ್ರಕಾರ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಲಾಯಿತು. ಆಗಲೂ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ಹೀಗಾಗಿ ಚುನಾವಣಾಧಿಕಾರಿಯೂ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದರು.

ತಕರಾರು ಅರ್ಜಿ ಸಲ್ಲಿಸಿದ್ದ ಪ್ರತಿಸ್ಪರ್ಧಿ

‘ಮಾಲೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿಲ್ಲ. ಸಾಕಷ್ಟು ಅಕ್ರಮ ಎಸಗಲಾಗಿದೆ’ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಅಲ್ಲದೇ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಅ.14ರಂದು ತಡೆಯಾಜ್ಞೆ ನೀಡಿತ್ತು. ಅಲ್ಲದೇ ಹೈಕೋರ್ಟ್‌ ಆದೇಶದ ಪ್ರಕಾರ ಮತಗಳ ಮರು ಎಣಿಕೆ ನಡೆಸಿ ಫಲಿತಾಂಶದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್‌ನ ಅನುಮತಿಯಿಲ್ಲದೆ ಮರು ಎಣಿಕೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದೂ ತಾಕೀತು ಮಾಡಿತ್ತು. ವಿಚಾರಣೆಯನ್ನು ನ.24ಕ್ಕೆ ಮುಂದೂಡಿತ್ತು.

ಸುತ್ತ ನಿಷೇಧಾಜ್ಞೆ, ಮದ್ಯದಂಗಡಿ ಬಂದ್‌

ಮಂಗಳವಾರ (ನ.11) ಬೆಳಿಗ್ಗೆ 5 ಗಂಟೆಯಿಂದ ಬುಧವಾರ (ನ.12) ಬೆಳಿಗ್ಗೆ 5 ಗಂಟೆವರೆಗೆ ಮತ ಎಣಿಕೆ ಕೇಂದ್ರವಾದ ತೋಟಗಾರಿಕೆ ಮಹಾವಿದ್ಯಾಲಯದ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದಲ್ಲದೇ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ತೋಟಗಾರಿಕೆ ಮಹಾವಿದ್ಯಾಲಯದ 5 ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಮಾಲೂರು ತಾಲ್ಲೂಕಿನಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.