ಮಾಲೂರು: ಕಸ ವಿಲೇವಾರಿ ಘಟಕ ಆರಂಭವಾಗಿ ತಿಂಗಳು ಕಳೆದರೂ ಕಸದ ಸಮಸ್ಯೆ ನಿವಾರಣೆಯಾಗಿಲ್ಲ. ಇದರಿಂದ ನಗರದ ರಸ್ತೆಗಳು ಗಬ್ಬು ನಾರುತ್ತಿವೆ.
ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ನಗರದ ಹಲವು ರಸ್ತೆಗಳ ಬದಿ ಕಸದ ರಾಶಿ ರಾರಾಜಿಸುತ್ತಿದೆ. ನಾಗರಿಕರು ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ.
ಈ ಹಿಂದೆ ಹಾರೋಹಳ್ಳಿ ಬಳಿ ಎರಡು ಎಕರೆ ವಿಸ್ತೀರ್ಣದಲ್ಲಿ ಆರಂಭವಾಗಿದ್ದ ಕಸ ವಿಲೇವಾರಿ ಘಟಕ (ಯಾರ್ಡ್) ಗ್ರಾಮಸ್ಥರ ವಿರೋಧದಿಂದ ಸ್ಥಗಿತಗೊಂಡಿತ್ತು. ನಂತರ ನಗರದ ಸುತ್ತಮುತ್ತಲು ಇರುವ ಹಾಳು ಬಾವಿ ಹಾಗೂ ಕಲ್ಲುಕ್ವಾರಿಗಳಲ್ಲಿ ಕಸ ತುಂಬಿಸಲಾಗುತ್ತಿತ್ತು. 2024 ಆಗಸ್ಟ್‌ನಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಪುರಸಭೆ ಮಾಲೂರು ವತಿಯಿಂದ ತಾಲ್ಲೂಕಿನ ಚಿಕ್ಕ ಇಗ್ಗಲೂರು ಗ್ರಾಮದ ಬಳಿ 5 ಎಕರೆ ವಿಸ್ತೀರ್ಣದಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಘಟಕವನ್ನು ₹6 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದೆ.
ಇನ್ನೇನೂ ಕಸದ ಸಮಸ್ಯೆ ನಿವಾರಣೆ ಆಯಿತು ಎಂಬ ಭರವಸೆ ಹೊಂದಿದ್ದ ಸಾರ್ವಜನಿಕರಲ್ಲಿ ಮತ್ತೆ ನಿರಾಸೆ ಮೂಡಿದೆ. ಘಟಕ ಆರಂಭವಾಗಿ ಆರೇಳು ತಿಂಗಳಾದರೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದಲ್ಲಿ ಕಸದ ರಾಶಿ ತೆರವು ಮಾಡಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರಿಗೆ ಸಮೀಪ ಇರುವ ಮಾಲೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ, ಬೃಹತ್ ಕೈಗಾರಿಕೆಗಳು ತಲೆ ಎತ್ತಿವೆ. ಇದರಿಂದ ಇತರ ರಾಜ್ಯಗಳಿಂದ ಹತ್ತಾರು ಸಾವಿರ ಕಾರ್ಮಿಕರು ಇಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಸುಮಾರು 78 ಸಾವಿರ ಜನಸಂಖ್ಯೆ ಇರುವ ನಗರದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ನಿರ್ಲಕ್ಷ್ಯದಿಂದ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದೆ ನಾಗರಿಕರು ತೊಂದರೆಗೆ ಸಿಲುಕಿದ್ದಾರೆ.
ಪೌರ ಕಾರ್ಮಿಕರ ಕೊರತೆ: ನಗರದ 27 ವಾರ್ಡ್‌ಗಳಲ್ಲಿ ಕಸ ಸಂಗ್ರಹ ಮಾಡಲು ಸಮರ್ಪಕ ವಾಹನ ಸೌಲಭ್ಯ ಇಲ್ಲ. ಪ್ರತಿ ವಾರ್ಡ್‌ನಲ್ಲಿ ಸಂಗ್ರಹವಾಗುವ ಕಸವನ್ನು ಬಡಾವಣೆಗಳಲ್ಲೇ ಶೇಖರಿಸಲಾಗುತ್ತಿದೆ. ಐದಾರು ದಿನಗಳ ನಂತರ ಟ್ಯ್ರಾಕ್ಟರ್ ಮೂಲಕ ವಿಲೇವಾರಿ ಘಟಕಕ್ಕೆ ಕಳುಹಿಸಲಾಗುತ್ತಿದೆ. ಈಗ ದಿನಕ್ಕೆ 27 ವಾರ್ಡ್‌ಗಳಿಂದ 25 ರಿಂದ 30 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದೆ. ಈ ಪೈಕಿ 15 ರಿಂದ 16 ಟನ್‌ನಷ್ಟು ಹಸಿ ಕಸ ಇರುತ್ತದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ನಗರಸಭೆಯಲ್ಲಿ 15 ಆಟೊಗಳು ಮಾತ್ರ ಇವೆ. ಪ್ರತಿದಿನ ವಾರ್ಡ್‌ನ ಪ್ರತಿ ಮನೆ ಬಳಿ ಕಸ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಸ್ವಚ್ಛತೆ ಕಾರ್ಯಕ್ಕಾಗಿ 82 ಪೌರ ಕಾರ್ಮಿಕರು ಮತ್ತು ಚಾಲಕರು, ಸಹಾಯಕರು ಸೇರಿದಂತೆ 20 ಹೊರಗುತ್ತಿಗೆ ನೌಕರರಿದ್ದಾರೆ. 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರನ್ನು ನಿಯೋಜಿಸಬೇಕು. ನಗರದಲ್ಲಿ ಪೌರ ಕಾರ್ಮಿಕರ ಕೊರತೆಯೂ ಇದೆ. ಇದರಿಂದ ಕಸ ವಿಲೇವಾರಿ ಮಾಡಲು ತೊಂದರೆಯಾಗಿದೆ.
ಕಸ ವಿಲೇವಾರಿ ಘಟಕದಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ವಿಲೇವಾರಿ ಕೆಲಸ ಸುಗಮವಾಗಿ ನಡೆಯುತ್ತಿಲ್ಲ. ಕೇವಲ ಐದು ಮಂದಿ ಮಾತ್ರ ಕೆಲಸ ಮಾಡುತ್ತಿದ್ದು, ಕಸದ ರಾಶಿ ಕರಗುತ್ತಿಲ್ಲ. ಅಲ್ಲದೆ, ಕಸ ಸಂಗ್ರಹಕ್ಕೆ ಸ್ಥಳದ ಕೊರತೆ ಇದೆ. ಪ್ರತಿದಿನ 25ರಿಂದ 30 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಹಸಿಕಸ 15 ರಿಂದ 16 ಟನ್ ಇರುತ್ತದೆ. ಕಸ ವಿಲೇವಾರಿ ಯಂತ್ರಕ್ಕೆ ಹಸಿ ಕಸದಲ್ಲಿನ ತೇವಾಂಶ ತೆಗೆದು ಹಾಕಬೇಕಾಗಿರುವುದರಿಂದ ವಿಲೇವಾರಿ ಮಂದಗತಿಯಲ್ಲಿ ಸಾಗಿದೆ.
ತ್ಯಾಜ್ಯ ನಿರ್ವಹಣೆ ಸಂಸ್ಥೆಗಳು ಘನತ್ಯಾಜ್ಯ ಸರಿಯಾಗಿ ವಿಲೇವಾರಿ ಮಾಡದ ಕಾರಣ ಸಂಗ್ರಹಿಸಿದ ತ್ಯಾಜ್ಯ ಪರಿಸರ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಜೈವಿಕ ವಿಘಟನೀಯ ವಸ್ತುಗಳು ಅಸಹಜ, ಅನಿಯಂತ್ರಿತ ಮತ್ತು ನೈರ್ಮಲ್ಯವಿಲ್ಲದ ಪರಿಸ್ಥಿತಿಯಲ್ಲಿ ಕೊಳೆಯುತ್ತವೆ. ಕೆಲವು ದಿನಗಳ ಕೊಳೆಯುವಿಕೆ ನಂತರ ಇದು ವಿವಿಧ ರೀತಿಯ ರೋಗಕ್ಕೆ ಕಾರಣವಾಗುತ್ತಿದೆ.
ನಗರಸಭೆ ವಾಹನ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಲಸ ಕಾರ್ಯಗಳಿಗೆ ಜನರು ಹೊರಗೆ ಹೋಗಬೇಕು. ಮನೆಯಲ್ಲಿ ಕಸ ಶೇಖರಣೆ ಮಾಡಿ ನಾವೇ ಹಾಕಬೇಕಾಗಿದೆಸುಜಾತಮ್ಮ ರೈಲ್ವೆ ಫಿಡರ್ ಬಾಡವಣೆ ನಿವಾಸಿ
ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ರಸ್ತೆ ಬದಿ ವಾರಗಟ್ಟಲೇ ಕಸದ ರಾಶಿ ಬಿದ್ದಿರುತ್ತದೆ. ಸೊಳ್ಳೆ ಮತ್ತು ದುರ್ವಾಸನೆ ಸಹಿಸಲು ಅಸಾಧ್ಯಶ್ರೀನಿವಾಸ್ ಮಾರುತಿ ಬಡಾವಣೆ ನಿವಾಸಿ
9ನೇ ವಾರ್ಡ್‌ನಲ್ಲಿ ಕೂಲಿ ಮಾಡುವ ಕುಟುಂಬಗಳು ಹೆಚ್ಚಿವೆ. ಕಸದ ವಾಹನಗಳು ಬರುವ ಸಮಯದಲ್ಲಿ ಜನರು ಇರುವುದಿಲ್ಲ. ನಗರಸಭೆ ಅಧಿಕಾರಿಗಳು ಬೇರೆ ವ್ಯವಸ್ಥೆ ಮಾಡಬೇಕುಗೋಪಾಲ್, 9ನೇ ವಾರ್ಡ್‌ನ ನಿವಾಸಿ
ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಘಟಕದಲ್ಲಿ ಐದು ಮಂದಿ ಮಾತ್ರ ಕಾರ್ಮಿಕರು ಇದ್ದಾರೆ. ಕಸ ವಿಲೇವಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಶೀಘ್ರ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲರಾಮಚಂದ್ರ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಘಟಕದ ಕಾರ್ಮಿಕ
ನಗರಸಭೆಯಿಂದ ಪ್ರತಿ ವಾರ್ಡ್‌ಗೂ ಕಸದ ವಾಹನ ಕಳುಹಿಸಬೇಕಾಗುತ್ತದೆ. ಕಸ ಆಟೊಗೆ ಹಾಕುವುದಿಲ್ಲ. ರಸ್ತೆಬದಿ ಕಸ ತುಂಬಿದ ಚೀಲಗಳನ್ನು ಬಿಸಾಕಿ ಹೋಗುತ್ತಾರೆ. ಮಹಡಿಯಲ್ಲಿ ಇರುವ ಜನರು ಮೇಲಿಂದ ರಸ್ತೆ ಬದಿಗೆ ಕಸದ ಚೀಲ ಬಿಸಾಕುತ್ತಾರೆ. ಇದರಿಂದ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಮಾಲೂರು ಪುರಸಭೆ ನಗರ ಸಭೆಯಾಗಿ ಮೇರ್ಲ್ದಜೆಗೆ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಾರ್ಮಿಕರ ಸಂಖ್ಯೆ ಏರಿಕೆಯಾಗುತ್ತದೆ. ಕಸ ವಿಲೇವಾರಿ ಸರಿದೂಗಿಸಲು ಸಾಧ್ಯವಾಗಲಿದೆ.ರಾಜಣ್ಣ ನಗರಸಭೆ ಆರೋಗ್ಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.