
ಮಾಲೂರು: ಹೋಂಡಾ ಮೋಟಾರ್ ಕಂಪನಿಯಿಂದ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದು ಅವಸಾನದ ಅಂಚಿಗೆ ತಲುಪಿದೆ.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ತಾಲ್ಲೂಕಿನ ಕರಿನಾಯಕನಹಳ್ಳಿ ಬಳಿ ಇರುವ ಹೋಂಡಾ ಮೋಟಾರ್ ಕಂಪನಿಯಿಂದ ಸುಮಾರು ₹4ಕೋಟಿ ವೆಚ್ಚದಲ್ಲಿ 2017ರಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ.
ಕ್ರೀಡಾಂಗಣ ಸುತ್ತಲು ಸುಸಜ್ಜಿತ ವಿದ್ಯುತ್ ದ್ವೀಪಗಳ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಕ್ರೀಡಾ ಸಾಮಾಗ್ರಿಗಳನ್ನು ಇರಿಸಲು 4 ಕೊಠಡಿ ನಿರ್ಮಾಣ, ಕ್ರೀಡೆ ವೀಕ್ಷಿಸಲು ಸುತ್ತಲು ಪ್ಲಾಟ್‌ಫಾರಂ, ವೇದಿಕೆ ಕಾರ್ಯಕ್ರಮ ನಡೆಸಲು ಕ್ರೀಡಾಂಗಣ ಮಧ್ಯ ಭಾಗದ ಅಂಚಿನಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಾಗ ಸುಮಾರು ಒಂದು ಲಕ್ಷ ಜನ ವಿಕ್ಷಿಸಲು ಅನುಕಲವಾಗುವಂತೆ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ.
ಕ್ರೀಡಾಂಗಣ ನಿರ್ವಹಣೆಗೆ ಕ್ರೀಡಾಂಗಣ ಮುಂಭಾಗದಲ್ಲಿ ಸುಮಾರು 16 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಸುಮಾರು 2ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಿರುವ ಕ್ರೀಡಾಂಗಣದಲ್ಲಿ ವಿವಿಧ ರೀತಿಯ ಕ್ರೀಡೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿಯಲ್ಲಿ ರಾಷ್ಟ್ರೀಯ ಹಬ್ಬ, ಶಾಲಾ ಕಾಲೇಜುಗಳಿಂದ ನಡೆಸುವ ವಾರ್ಷಿಕ ಕ್ರೀಡೆ ಸೇರಿದಂತೆ ಕ್ರಿಕೆಟ್ ಟೂರ್ನಿಮೆಂಟ್ ನಡೆಸಲು ಅನುಕೂಲ ಕಲ್ಪಿಸಲಾಗಿದೆ.
ಮಂಗಳವಾರ ಮತ್ತು ಶುಕ್ರವಾರ ಮಕ್ಕಳಿಗೆ ಕರಾಟೆ ತರಬೇತಿ ನಡೆಯುತ್ತದೆ. ಕ್ರೀಡಾಂಗಣದ ಜವಾಬ್ದಾರಿಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಜಿಲ್ಲಾಡಳಿತ ಉಸ್ತುವಾರಿಗೆ ನೀಡಲಾಗಿದೆ.
ನಿರ್ವಹಣೆ ಕೊರತೆ: ಸುಮಾರು ₹4ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕ್ರೀಡಾಂಗಣ ನಿರ್ವಹಣೆ ಇಲ್ಲದೇ ಕೊರಗಿದೆ. ಸ್ವಚ್ಛತೆ ಇಲ್ಲದೇ ಕ್ರೀಡಾಂಗಣದಲ್ಲಿ ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದೆ. ವೇದಿಕೆ ಚಾವಣಿ ಶೀಟ್ ಕಿತ್ತು ಹಾಕಲಾಗಿದೆ. ಸುತ್ತಲು ಕ್ರೀಡಾಂಗಣ ಗೋಡೆ ಎತ್ತರ ಇಲ್ಲದ ಕಾರಣ ಕಿಡಿಗೇಡಿಗಳು ಗೋಡೆ ಜಿಗಿದು ಒಳ ಬಂದು ಕ್ರೀಡಾಂಗಣಕ್ಕೆ ಬಳಸಿರುವ ವಿದ್ಯುತ್ ದೀಪ ಹಾಗೂ ಇನ್ನಿತರೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ಗಾರ್ಡ್‌ಗಳ ಕೊರತೆ: ಆರಂಭದ ದಿನಗಳಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದ್ದ ಗುತ್ತಿಗೆದಾರರೇ ಕ್ರೀಡಾಂಗಣ ನೋಡಿಕೊಳ್ಳಲು ಇಬ್ಬರು ಗಾರ್ಡ್‌ಗಳನ್ನು ನಿಯೋಜಿಸಿ ಅವರಿಗೆ ವೇತನ ನೀಡುತ್ತಿದ್ದರು. ನಂತರದ ದಿನಗಳಲ್ಲಿ ಸ್ಟೇಡಿಯಂ ಜವಾಬ್ದಾರಿಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನೀಡಲಾಯಿತು. ಸರಿಯಾದ ಸಮಯಕ್ಕೆ ಕ್ರೀಡಾಂಗಣ ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದ 16 ಅಂಗಡಿ ಮಳಿಗೆಗಳನ್ನು ಹರಾಜು ಮಾಡದೆ ವಿಳಂಬ ಮಾಡಿದ್ದರಿಂದ ನಿರ್ವಹಣೆಗೆ ಹಣದ ಕೊರತೆ ಎದುರಾಯಿತು. ಗಾರ್ಡ್‌ಗಳಿಗೆ ಸಂಬಳ ನೀಡದ ಕಾರಣ ನಿರ್ವಹಣೆ ಇಲ್ಲದೇ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
ಅಂಗಡಿ ಮಳಿಗೆ ಹರಾಜು ವಿಳಂಬ: 2019ರಲ್ಲಿ ಜಿಲ್ಲಾಡಳಿತ ಅಂಗಡಿಗಳನ್ನು ಹರಾಜು ಮಾಡಲು ಪುರಸಭೆಗೆ ಉಸ್ತುವಾರಿ ವಹಿಸಿದ ನಂತರ 4 ಅಂಗಡಿಗಳು ಮಾತ್ರ ಹರಾಜು ಮಾಡಲಾಗಿತ್ತು. ಉಳಿದ ಅಂಗಡಿಗಳು ತಾಂತ್ರಿಕ ದೋಷದಿಂದ ರದ್ದಾದ ಕಾರಣ ನಿಂತು ಹೊಯಿತು. 4 ಅಂಗಡಿಗಳಿಂದ ₹24 ಲಕ್ಷ ಬಿಡ್ ಹಣ ಜಿಲ್ಲಾಡಳಿತ ಖಾತೆಯಲ್ಲಿ ಜಮಾ ಮಾಡಲಾಗಿದೆ. ಈಚೆಗೆ ಉಳಿದ 7 ಅಂಗಡಿಗಳನ್ನು ಆನ್‌ಲೈನ್ ಮೂಲಕ ಬಿಡ್ ಮಾಡಲಾಗಿದೆ. ಇನ್ನು ಮುಂದಾದರು ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರ ಹಾಗೂ ಕ್ರೀಡಾಪಟುಗಳಿಗೆ ಅನುಕೂಲ ಸಿಗುವಂತಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ನಾಯಿಗಳ ಕಾಟ: ಕ್ರೀಡಾಂಗಣದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಹಿರಿಯ ನಾಗರಿಕರು, ಮಕ್ಕಳು ಕ್ರೀಡಾಂಗಣದತ್ತ ಸುಳಿಯಲು ಹಿಂಜರಿಯುವ ಸ್ಥಿತಿ ಇದೆ. ನಗರದಲ್ಲಿರುವ ಏಕೈಕ ಕ್ರೀಡಾಂಗಣವಾಗಿದ್ದು, ಪೋಷಕರು ಮಕ್ಕಳನ್ನು ಸ್ಟೇಡಿಯಂಗೆ ಕಳಹಿಸಲು ಹಿಂಜರಿಯುವ ಪರಿಸ್ಥಿತಿ ಇದೆ.
ಬಾಡಿಗೆ ನೀಡದೆ ತೊಂದರೆ
ಅಂಗಡಿ ಮಳಿಗೆ ಬಾಡಿಗೆಯಿಂದ ಕ್ರೀಡಾಂಗಣವನ್ನು ನಿರ್ವಹಣೆ ಮಾಡಬೇಕಾಗಿದೆ. 4 ಅಂಗಡಿಗಳನ್ನು ಪಡೆದಿರುವವರು ಸುಮಾರು 3 ವರ್ಷಗಳಿಂದ ಬಾಡಿಗೆ ನೀಡದೇ ಇರುವುದರಿಂದ ನಿರ್ವಹಣೆಗೆ ತೊಂದರೆಯಾಗಿದೆ. ನೋಟಿಸ್ ನೀಡಲಾಗಿದ್ದು, ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸಲಾಗುವು. ಶಾಸಕರನ್ನು ಭೇಟಿ ಮಾಡಿ ಗೋಡೆ ಎತ್ತರ ಹೆಚ್ಚಿಸಲು ಸಹಕಾರ ಪಡೆಯಲಾಗುವುದು.
– ಬಿ.ಪಿ ಚಂದ್ರಿಕಾ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ
ಕ್ರೀಡಾಂಗಣ ಅಭಿವೃದ್ಧಿಪಡಿಸಿ
ಹೋಂಡಾ ಮೋಟಾರ್ ಕಂಪನಿಯಿಂದ ಉತ್ತಮವಾದ ಹಾಗೂ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ಮಾಡಿ ನೀಡಲಾಗಿತ್ತು. ಜವಾಬ್ದಾರಿ ವಹಿಸಿಕೊಂಡ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಣೆ ಮಾಡದೇ ಇಂದು ಹಾಳಾಗಿದೆ. ರಾಜ್ಯ ಸರ್ಕಾರ ಕೂಡಲೇ ಜವಾಬ್ದಾರಿ ವಹಿಸಿಕೊಂಡು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಬೇಕು.
– ಆರ್.ಪ್ರಭಾಕರ್, ಎಸ್‌ಜೆಪಿ ತಾಲೂಕು ಘಟಕದ ಅಧ್ಯಕ್ಷ
ಅನೈತಿಕ ಚಟುವಟಿಕೆ ತಾಣ
ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಕ್ರೀಡೆ ಮುಖ್ಯ. ನಗರದಲ್ಲಿರುವ ಏಕೈಕ ಕ್ರೀಡಾಂಗಣ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ವಿದ್ಯುತ್ ದೀಪಗಳ ನಿರ್ವಹಣೆ ಇಲ್ಲದೆ ಸಂಜೆ ಆಗುತ್ತಿದ್ದಂತೆ ಕತ್ತಲು ಆವರಿಸುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಖಾರಿಗಳು ಅಭಿವೃದ್ಧಿಗೊಳಿಸಬೇಕು.
– ಎಂ.ಎಸ್.ಶ್ರೀನಿವಾಸ್, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಮುಚ್ಚಿ ಹೋದ ಚರಂಡಿ
ಕ್ರೀಡಾಂಗಣ ನಿರ್ವಹಣೆ ಇಲ್ಲದೇ ಹಾಳಾಗಿದೆ. ಮಳೆ ನೀರು ಹೊರಗೆ ಹೋಗಲು ಚರಂಡಿ ಮುಚ್ಚಿಹೊಗಿದ್ದು ಕರಾಟೆ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ದುರಸ್ತಿಗೊಳಿಸಬೇಕು.
– ಮಂಜು, ಕರಾಟೆ ತರಬೇತಿ ಮಾಸ್ಟರ್