
ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರ ಸಂಬಂಧ ನಾನು ಮರು ಮತ ಎಣಿಕೆಗೆ ಕೋರಿದ್ದೆ. ಆದರೆ, ಈಗ ನೋಡಿದರೆ ಮರು ಚುನಾವಣೆಯೇ ನಡೆಯುವಂತಿದೆ ಎಂದು ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥ್ ಗೌಡ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳು ಮಾಲೂರು ತಾಲ್ಲೂಕಿನಲ್ಲೇ ಉಳಿದುಕೊಂಡಿವೆ. ಅಲ್ಲಿ ಇಡಬಾರದಿತ್ತು. ಕೋಲಾರದ ಭದ್ರತಾ ಕೊಠಡಿಯಲ್ಲೇ ಇರಬೇಕಿತ್ತು. ಹಲವು ನಿಯಮಗಳು ಉಲ್ಲಂಘನೆ ಆಗಿವೆ. ಮಾಲೂರಿಗೆ ತೆರಳಿ ಈ ಸಂಬಂಧ ಪ್ರಶ್ನೆ ಮಾಡುತ್ತೇನೆ. ಅದನ್ನು ಜಪ್ತಿ ಮಾಡಿ ವಾಪಸ್ ಜಿಲ್ಲಾಧಿಕಾರಿ ಸುಪರ್ದಿಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.
ಮರು ಮತ ಎಣಿಕೆಗೆ ದಿನಾಂಕ ನಿಗದಿ ಸಂಬಂಧ ಚರ್ಚೆ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಘೋಷಣೆ ಆಗಲಿದೆ ಎಂದರು.
ಸುಪ್ರೀಂ ಕೋರ್ಟ್ ಸೂಚನೆಯಂತೆ ಮರು ಮತ ಎಣಿಕೆಯನ್ನು ಅಚ್ಚುಕಟ್ಟಾಗಿ ಹಾಗೂ ನ್ಯಾಯಬದ್ಧವಾಗಿ ನಡೆಸುವಂತೆ ಕೋರಿದ್ದೇನೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ವಕೀಲರು ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.