ADVERTISEMENT

ಮಾಲೂರು | ತಾಲ್ಲೂಕು ಆಡಳಿತದಲ್ಲಿ ಭ್ರಷ್ಟಾಚಾರ: ಎಸ್.ಎಂ. ವೆಂಕಟೇಶ್ ಆರೋಪ

ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕ್ಕೆ ಡಿಎಸ್ಎಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:17 IST
Last Updated 19 ಜುಲೈ 2025, 4:17 IST
ಮಾಲೂರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಸ್.ಎಂ. ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಮಾಲೂರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಸ್.ಎಂ. ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಮಾಲೂರು: ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ತಾಲ್ಲೂಕು ಆಡಳಿತವು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್.ಎಂ. ವೆಂಕಟೇಶ್ ಆರೋಪಿಸಿದರು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಶುಕ್ರವಾರ ತಾಲ್ಲೂಕು ಆಡಳಿತದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಮಾತನಾಡಿದರು. 

ತಾಲ್ಲೂಕು ಆಡಳಿತವು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ತಾಲ್ಲೂಕಿನಲ್ಲಿ ದಲಿತರಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ಆಗುತ್ತಿಲ್ಲ. ರಾಜಕೀಯ ಏಜೆಂಟರ ಕೆಲಸ ಕಾರ್ಯಗಳು ಮಾತ್ರ ನಡೆಯುತ್ತಿದೆ ಎಂದು ದೂರಿದರು. 

ADVERTISEMENT

ಪಟ್ಟಣದ ಅಂಬೇಡ್ಕರ್ ಭವನಕ್ಕೆ ಮೂಲಸೌಕರ್ಯ ಒದಗಿಸಿಲ್ಲ. ಮಾಸ್ತಿ ಗ್ರಾಮದ ಹಾಸ್ಟೆಲ್ ಕಾಮಗಾರಿ 15 ವರ್ಷದಿಂದ ನಡೆಯುತ್ತಿದ್ದು, ಈವರೆಗೆ ಪೂರ್ಣಗೊಂಡಿಲ್ಲ. 7–8 ವರ್ಷದಿಂದ ದಲಿತ ದೌರ್ಜನ್ಯ ಸಭೆ ಮಾಡಲು ತಾಲ್ಲೂಕು ಆಡಳಿತ ಮನಸ್ಸು ಮಾಡಿಲ್ಲ  ಎಂದರು. 

ತಾಲ್ಲೂಕಿನ ಹಕ್ಕಿಪಿಕ್ಕಿ, ಚನ್ನಾದಾಸರ್, ಶಿಳ್ಲೆಕ್ಯಾತ ಜನಾಂಗದವರಿದ್ದು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ತಾಲ್ಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಲಿತರ ಸಮಸ್ಯೆಗಳು, ಕುಂದುಕೊರತೆ ಬಗ್ಗೆ ದೌರ್ಜನ್ಯ ಸಭೆ ನಡೆಸಬೇಕಾಗಿತ್ತು. ಆದರೆ, ಇದುವರೆಗೆ ಸಭೆ ನಡೆದಿಲ್ಲ ಎಂದರು. 

ಪ್ರತಿಭಟನಾ ಸ್ಥಳಕ್ಕೆ ಬಂದು ತಹಶೀಲ್ದಾರ್ ಎಂ.ವಿ. ರೂಪ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿ, ಪ್ರತಿಭಟನೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಜಿಲ್ಲಾ ಸಮಿತಿ ಸದಸ್ಯ ಗುಂಡ್ಲುಪಾಳ್ಯ ವೆಂಕಟ್ ರಾಮ್, ಡಿ.ಎನ್. ನಾರಾಯಣಸ್ವಾಮಿ, ಬಂಡಟ್ಟಿ ನಾರಾಯಣಸ್ವಾಮಿ, ತಿರುಮಲೇಶ್, ಅಂಗಶೆಟ್ಟಿಹಳ್ಳಿ ನಾರಾಯಣಸ್ವಾಮಿ, ಯಶವಂತಪುರ ಮುನಿರಾಜಪ್ಪ, ಶಾಮಣ್ಣ, ಮೆಲನೂರು ಚಲಪತಿ, ವೆಂಕಟೇಶ್, ಮಂಜುನಾಥ್ ನಾಯ್ಡು, ಉಳ್ಳೆರಹಳ್ಳಿ ಮುನಿರಾಜು, ಅಮರೇಶ್, ಊಸರಹಳ್ಳಿ ಗೋಪಿ, ಗುಡಿಸಲು ಕೃಷ್ಣಪ್ಪ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.