ಮಾಲೂರು: ನಗರಸಭೆ ಸರ್ಕಾರಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವುದೇ ರೀತಿಯ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಆರೋಪಿಸಿದರು.
ನಗರದ ಮಾರಿಕಾಂಬ ವೃತ್ತದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲೂರಿನಲ್ಲಿ ನೂತನ ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದ್ದು, ತಾತ್ಕಾಲಿಕವಾಗಿ ನಗರದ ರೈಲ್ವೆ ಮೇಲ್ಸೇತುವೆ ಬಳಿ ನಿರ್ಮಾಣವಾಗಿರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಪ್ರಯಾಣಿಕರಿಗೆ ಕುಡಿಯುವ ನೀರಿನ ಒಂದು ಬಾಟಲ್‌ಗೆ ನಗರಸಭೆ ₹2 ರಂತೆ ಮಾರಾಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.
ನಗರಸಭೆಯೇ ಪ್ರಯಾಣಿಕರಿಗೆ ಉಚಿತ ನೀರಿನ ಸೌಲಭ್ಯ ಒದಗಿಸಬೇಕು. ಆದರೆ, ನೀರಿನ ಬಾಟೆಲ್‌ಗೆ ಹಣ ತೆಗೆದುಕೊಳ್ಳುತ್ತಿವೆ. ಹಾಗಾಗಿ ನಗರಸಭೆ ಅವಕಾಶ ಕಲ್ಪಿಸಿದರೆ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಉಚಿತವಾಗಿ ಟ್ಯಾಂಕರ್‌ನಿಂದ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿ ದಿನ ನೂರಾರು ಬಸ್‌ಗಳು ಸಂಚರಿಸುತ್ತವೆ. ಬಸ್ ನಿಲ್ದಾಣ ಧೂಳು ಮಯವಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಮುಖಂಡ ಹೂಡಿ ವಿಜಯಕುಮಾರ್ ಮಾತನಾಡಿ, ಮಾಲೂನ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲು ನಗರಸಭೆ ಸುಮಾರು ₹40 ಲಕ್ಷ ವೆಚ್ಚ ಮಾಡಿದೆ. ಆದರೆ, ಮೂಲ ಸೌಲಭ್ಯ ಒದಗಿಸಿಲ್ಲ. ಹಾಗಾಗಿ ನಗರಸಭೆ ಅವಕಾಶ ನೀಡಿದರೆ ಬಸ್ ನಿಲ್ದಾಣಕ್ಕೆ ವಯಕ್ತಿಕ ಹಣದಲ್ಲಿ ಕಾಂಕ್ರಿಟ್ ಹಾಕಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.