ADVERTISEMENT

ಕೋಲಾರ: ಮೆಡಿಕಲ್‌ ಸ್ಟೋರ್‌ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 15:38 IST
Last Updated 7 ಡಿಸೆಂಬರ್ 2023, 15:38 IST
ಕೋಲಾರದ ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಸಹಾಯಕ ಔಷಧ‌ ನಿಯಂತ್ರಣಾಧಿಕಾರಿ  ಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಸಂದರ್ಭ
ಕೋಲಾರದ ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಸಹಾಯಕ ಔಷಧ‌ ನಿಯಂತ್ರಣಾಧಿಕಾರಿ  ಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಸಂದರ್ಭ   

ಕೋಲಾರ: ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕೋಲಾರ ನಗರದ ಬಸ್ ನಿಲ್ದಾಣದ ಸಮೀಪದ ಶ್ರೀಕರ್‌ ಮೆಡಿಕಲ್ ಸ್ಟೋರ್‌ನ ಪರವಾನಗಿಯನ್ನು ಸಹಾಯಕ ಔಷಧ‌ ನಿಯಂತ್ರಕರ ಕಚೇರಿ ರದ್ದುಪಡಿಸಿದೆ.

‘ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರ ಅಡಿ ರೂಪಿಸಿರುವ ನಿಯಮಾವಳಿ–1945ರ ನಿಯಮ 65 ಅನ್ನು ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿರುವ ಕಾರಣ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಚಿಲ್ಲರೆ ಔಷಧ ಮಾರಾಟ ಪರವಾನಗಿಯನ್ನು ನ.30ರಿಂದ ರದ್ದುಗೊಳಿಸಲಾಗಿದೆ’ ಎಂದು ಸಹಾಯಕ ಔಷಧ‌ ನಿಯಂತ್ರಣಾಧಿಕಾರಿ ಶ್ಯಾಮಲಾ ಆದೇಶ ಹೊರಡಿಸಿದ್ದಾರೆ.

‘ತಮ್ಮ ಔಷಧ ಮಾರಾಟ ಮಳಿಗೆಯಲ್ಲಿ ಲಭ್ಯವಿರುವ ಔಷಧದ ದಾಸ್ತಾನನ್ನು ಸಂಬಂಧಪಟ್ಟ ಸಗಟು ಔಷಧ ವ್ಯಾಪಾರಸ್ಥರಿಗೆ ಹಿಂದಿರುಗಿಸಿ ಸೂಕ್ತ ದಾಖಲೆಗಳೊಂದಿಗೆ ತಮಗೆ ಮಂಜೂರಾಗಿರುವ ಪರವಾನಗಿಗಳ ಮೂಲ ಪ್ರತಿಗಳ ಸಮೇತ ಕಚೇರಿಗೆ ಒದಗಿಸಬೇಕು’ ಎಂದು ಅವರು ಮಾಲೀಕರಿಗೆ ಸೂಚಿಸಿದ್ದಾರೆ.

ADVERTISEMENT

‘ಅ.6ರಂದು ನಡೆಸಿದ ಪರಿವೀಕ್ಷಣೆ ವೇಳೆ ನ್ಯೂನತೆಗಳು ಕಂಡುಬಂದಿವೆ. ವೈದ್ಯರ ಸಲಹಾ ಚೀಟಿ ಇಲ್ಲದೆ, ರಶೀದಿ ವಿತರಿಸದೆ ಮಾದಕ ವ್ಯಸನಿಗಳಿಗೆ ಶೆಡ್ಯೂಲ್‌ ಎಚ್‌1 ಔಷಧ ಮಾರಾಟ ಮಾಡಿರುವುದು ಕಂಡುಬಂದಿದೆ. ಮತ್ತೇರಿಸುವ ಟಾಬ್ಲೆಟ್‌ ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಕಾರಣ ಕೇಳಿ ನೋಟಿಸ್‌ ಕೂಡ ನೀಡಲಾಗಿದೆ. ಆದರೆ, ಸಮಂಜಸ ಉತ್ತರ ಸಿಗದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಆದೇಶದ ವಿರುದ್ಧ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮೂರು ತಿಂಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಾಗಿ ಹೇಳಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಅವರ ನಿರ್ದೇಶನದ ಮೇರೆಗೆ ನಗರದ ಸೈಬರ್ ಕ್ರೈಂ–ನಾರ್ಕೊಟಿಕ್‌ ಠಾಣೆ ಇನ್‌ಸ್ಟೆಕ್ಟರ್‌ ಎಸ್‌.ಆರ್‌.ಜಗದೀಶ್‌ ಹಾಗೂ ಸಹಾಯಕ ಔಷಧ‌ ನಿಯಂತ್ರಣಾಧಿಕಾರಿ ಶ್ಯಾಮಲಾ ಅ.6ರಂದು ಮೆಡಿಕಲ್‌ ಸ್ಟೋರ್‌ ಶೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.