ADVERTISEMENT

ಶ್ರೀನಿವಾಸಪುರ: ಪ್ರಗತಿ ಪರಿಶೀಲನಾ ಸಭೆ

ಸಭೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 15:53 IST
Last Updated 5 ಜೂನ್ 2023, 15:53 IST
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ, ತಾಲ್ಲೂಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ, ತಾಲ್ಲೂಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು   

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ, ತಾಲ್ಲೂಕು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕು. ಅಗತ್ಯ ಇರುವ ಕಡೆ ಹೊಸ ಘಟಕ ಸ್ಥಾಪಿಸಬೇಕು ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಅಗತ್ಯವಿರುವ ಕುಟುಂಬಗಳ ಪಟ್ಟಿ ಸಿದ್ಧಪಡಿಸಬೇಕು. ನರೇಗಾ ಯೋಜನೆ ಕಾಮಗಾರಿ ಕೈಗೊಳ್ಳುವ ಮುನ್ನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಬೇಕು. ಕಾಮಗಾರಿ ಗುಣಮಟ್ಟದ ಬಗ್ಗೆ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.

ADVERTISEMENT

ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಕಾಲಕಾಲಕ್ಕೆ ಸರಿಯಾಗಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿತವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ವ್ಯವಸ್ಥಾಪಕ ರಾಮಪ್ಪ, ಜಿಲ್ಲಾ ಪಂಚಾಯಿತಿ ನೀರಾವರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಸ್ವಾಮಿ, ಎಂಜಿನಿಯರ್‌ಗಳಾದ ಕೃಷ್ಣಪ್ಪ, ಸಂತೋಷ್ ಹಾಗೂ ಪಿಡಿಒಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.