ADVERTISEMENT

ಕೃಷಿ ಮಾಹಿತಿಗೆ ಮೇಘದೂತ್‌ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 9:27 IST
Last Updated 16 ಮಾರ್ಚ್ 2020, 9:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ರೈತರಿಗೆ ಹವಾಮಾನ ಮತ್ತು ಹವಾಮಾನ ಆಧಾರಿತ ಮಾಹಿತಿ ನೀಡಲು ಭೂ ವಿಜ್ಞಾನ, ಕೃಷಿ ಸಚಿವಾಲಯ, ಭಾರತೀಯ ಹವಾಮಾನ ಇಲಾಖೆ ಸಹಯೋಗದಲ್ಲಿ ಮೇಘದೂತ್ ಆ್ಯಪ್ ರೂಪಿಸಲಾಗಿದೆ.

ರೈತರು ತಮ್ಮ ಸ್ಮಾರ್ಟ್‌ ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್‌ನಲ್ಲಿ ಮೇಘದೂತ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೊದಲ ಹಂತದಲ್ಲಿ ದೇಶದ ವಿವಿಧೆಡೆ 150 ಜಿಲ್ಲೆಗಳಿಗೆ ಈ ಸೇವೆ ಲಭ್ಯವಿರುತ್ತದೆ. ಮುಂದಿನ ಒಂದು ವರ್ಷದಲ್ಲಿ ಹಂತ ಹಂತವಾಗಿ ದೇಶದ ಉಳಿದ ಜಿಲ್ಲೆಗಳಿಗೂ ಈ ಸೇವೆ ವಿಸ್ತರಿಸಲಾಗುತ್ತದೆ ಎಂದು ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮಳೆಯಾಶ್ರಿತ ಮತ್ತು ಒಣ ಬೇಸಾಯ ಕೃಷಿಯಲ್ಲಿ ರೈತರು ಕೈಗೊಳ್ಳುವ ಪ್ರತಿ ಚಟುವಟಿಕೆ ಅಂದರೆ ಭೂಮಿ ತಯಾರಿಕೆ, ಬಿತ್ತನೆ, ಕಳೆ ಮತ್ತು ಕೀಟನಾಶಕಗಳ ಬಳಕೆ, ಕಟಾವು, ಕೃಷಿ ಉತ್ಪನ್ನ ಸಾಗಣೆ ಹಾಗೂ ಬೆಳೆ ಇಳುವರಿ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ರೈತರಿಗೆ ಅನುಕೂಲವಾಗುವ ಎಲ್ಲಾ ಮಾಹಿತಿಯನ್ನು ನೂತನ ಆ್ಯಪ್‌ ಮೂಲಕ ನೀಡಲಾಗುತ್ತದೆ.

ADVERTISEMENT

ಈ ತಂತ್ರಾಂಶದಲ್ಲಿ ಬಳಕೆದಾರರು ತಮ್ಮ ಹೆಸರು, ಸ್ಥಳದ ವಿವರ ನೋಂದಾಯಿಸಿ ಪ್ರದೇಶದ ನಿರ್ದಿಷ್ಟ ಮಾಹಿತಿ ಪಡೆಯಬಹುದು. ಇದು ಸ್ಥಳೀಯವಾಗಿ ರೈತರಿಗೆ ಸ್ಥಳ, ಬೆಳೆ ಮತ್ತು ಜಾನುವಾರು- ನಿರ್ದಿಷ್ಟ ಹವಾಮಾನ ಆಧಾರಿತ ಕೃಷಿ ಸಲಹೆ ನೀಡುತ್ತದೆ. ನೈಜ ಸಮಯದಲ್ಲಿ ಎಚ್ಚರಿಕೆ ಸಂದೇಶ ಮತ್ತು ಇತರ ದತ್ತಾಂಶ ನವೀಕರಿಸಲು ಈ ಆ್ಯಪ್‌ ಭಾರತದ ಎಲ್ಲಾ ಹವಾಮಾನ ಕಚೇರಿಗಳಿಗೆ ಕೇಂದ್ರಿಕೃತ ಪೋಟಲ್‌ ಆಗಿ ಕಾರ್ಯ ನಿರ್ವಹಿಸುತ್ತದೆ.

ಈ ಆ್ಯಪ್‌ ಗರಿಷ್ಠ ಹಾಗೂ ಕನಿಷ್ಠ ತಾಪಮಾನ, ಬೆಳಗಿನ ಹಾಗೂ ಮಧ್ಯಾಹ್ನದ ಆರ್ದತೆ ಪ್ರಮಾಣ, ಮೋಡ ಹಾಗೂ ಮಳೆ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವೇಗಕ್ಕೆ ಸಂಬಂಧಿಸಿದ ಮುನ್ಸೂಚನೆ ಒದಗಿಸುತ್ತದೆ. ಇದು ಕೃಷಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರೈತರು ಬೆಳೆ ಮತ್ತು ಜಾನುವಾರುಗಳನ್ನು ಹೇಗೆ ನೋಡಿಕೊಳ್ಳಬೇಕೆಂಬ ಕುರಿತು ಸಲಹೆ ನೀಡುತ್ತದೆ.

ಮಂಗಳವಾರ ಮತ್ತು ಶುಕ್ರವಾರದಂದು ವಾರಕ್ಕೆ 2 ಬಾರಿ ಮಾಹಿತಿ ನವೀಕರಿಸಲಾಗುತ್ತದೆ. ಮುಂದಿನ 5 ದಿನಗಳ ವಾತಾವರಣದ ಮುನ್ಸೂಚನೆ ಮತ್ತು ಕೃಷಿ ಹವಾಮಾನ ಕ್ಷೇತ್ರ ಘಟಕಗಳು ನೀಡುವ ಜಿಲ್ಲೆಯ ಬೆಳೆವಾರು ಸಲಹೆ ಬಗ್ಗೆ ಮಾಹಿತಿ ಪಡೆಯಬಹುದು. ರೈತರು ಈ ತಂತ್ರಾಂಶದಿಂದ ಪಡೆದ ಮಾಹಿತಿ ಅನುಸರಿಸಿ ಹಾಗೂ ತಮ್ಮಲ್ಲಿನ ಸಲಹೆಗಳನ್ನು ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 08152 243099 ದೂರವಾಣಿ ಸಂಖ್ಯೆ ಅಥವಾ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಬಹುದು ಎಂದು ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.