
ಕೋಲಾರ: ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನಿಗದಿಪಡಿಸಿದೆ. ಆದರೆ, ಕೆಲ ಗುತ್ತಿಗೆದಾರರು ಸ್ವಲ್ಪ ಹಣ ಹಿಡಿದುಕೊಂಡು ನೀಡುತ್ತಿರುವ ಮಾಹಿತಿ ಬರುತ್ತಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಕೊಡದ ಸಂಸ್ಥೆ, ಕಂಪನಿ, ಏಜೆನ್ಸಿ, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 3 ಕೋಟಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಇದ್ದು, ಅವರ ಹಿತ ಕಾಯಲು ಬದ್ಧ. ಅವರಿಗೆ ತೊಂದರೆ ನೀಡಿದರೆ ಸಹಿಸಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಗುರುತಿನ ಚೀಟಿ ನೀಡುವ ಕೆಲಸ ನಡೆಯುತ್ತಿದೆ’ ಎಂದರು.
ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅಥವಾ ಸರ್ಕಾರದ ಗಮನಕ್ಕೆ ತಂದರೆ ಕಾರ್ಯಪ್ರವೃತ್ತರಾಗಿ ಪರಿಹಾರ ಒದಗಿಸಲಾಗುವುದು. ಪ್ರತಿ ಜಿಲ್ಲೆಗಳಿಗೆ ತೆರಳಿ ಸಭೆ ನಡೆಸಿ ಕಾರ್ಮಿಕರ ಸಮಸ್ಯೆ ಆಲಿಸುವೆ ಎಂದು ಹೇಳಿದರು.
ರಾಜ್ಯದಲ್ಲಿ ವಿರೋಧ ಪಕ್ಷದವರು ಗೊಂದಲಕಾರಿ ಹೇಳಿಕೆ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆರಂಭದಲ್ಲಿ ಗ್ಯಾರಂಟಿ ಯೋಜನೆ ಜಾರಿಯೇ ಅಸಾಧ್ಯ, ಕಾಂಗ್ರೆಸ್‌ನವರು ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಟೀಕಿಸಿದರು. ನಾವು ವಾರ್ಷಿಕ ₹56 ಸಾವಿರ ಕೋಟಿ ಅನುದಾನ ತೆಗೆದಿರಿಸಿದ ಮೇಲೆ ಪ್ರತಿ ತಿಂಗಳು ಜನರಿಗೆ ಗ್ಯಾರಂಟಿ ಹೋಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಒಂದೆರಡು ತಿಂಗಳ ವಿಳಂಬವಾದರೂ ಗ್ಯಾರಂಟಿಗಳಿಂದ ಜನ ಜೀವನ ಸುಧಾರಿಸಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಎಲ್ಲಾ ಕಡೆ ಕೋಮು ಸೌಹಾರ್ದ ಹಾಗೂ ಶಾಂತಿ ನೆಲೆಸಬೇಕು. ಯಾವುದೇ ಧರ್ಮದ ಧಾರ್ಮಿಕ ಆಚರಣೆಗೆ ಅಡ್ಡಿ ಮಾಡಬಾರದು, ಅವಹೇಳನ ಮಾಡಬಾರದು. ಕ್ರಿಸ್‌ಮಸ್ ಜಯಂತಿ ವೇಳೆ ಅಹಿತಕರ ಘಟನೆ ನಡೆಯಬಾರದಿತ್ತು ಎಂದು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಮತ್ತು ನೌಕರರ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷ ಸಮೀರ್ ಪಾಷ, ಬ್ಲಾಕ್ ಅಧ್ಯಕ್ಷ ಆರೋಗ್ಯನಾಥನ್, ಜಿಲ್ಲಾ ಅಧ್ಯಕ್ಷ ಶ್ರೀನಾಥ್, ಮೊಹಿನುದ್ದಿನ್, ಬರ್ಕತ್, ಜುನೈದ್ ಇದ್ದರು.
ಶಾಸಕರಿಗೆ ಎಐಸಿಸಿ ಸೂಚನೆ ನೀಡಿದೆ
‘ಶಾಸಕರಾದವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಆದರೆ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಯಾರೂ ಮಾತನಾಡಬಾರದೆಂದು ಎಐಸಿಸಿ ಅಧ್ಯಕ್ಷರೇ ಸೂಚನೆ ನೀಡಿದ್ದಾರೆ. ಹೀಗಾಗಿ ಯಾರೂ ಮಾತನಾಡಬಾರದು. ಮಾತನಾಡಿದವರ ಮೇಲೆ ಕ್ರಮವಾಗಲಿದೆ’ ಎಂದು ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ಟಿ.ಎಂ.ಶಾಹಿದ್ ತೆಕ್ಕಿಲ್ ಹೇಳಿದರು. ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೂ ವಿರೋಧ ಪಕ್ಷದವರು ಮಾಧ್ಯದಮವರು ಕುರ್ಚಿ ಖಾಲಿ ಆಗುತ್ತಿದೆ ಎಂಬುದಾಗಿ ವರ್ಷದಿಂದ ಹೇಳುತ್ತಿದ್ದಾರೆ. 2028ಕ್ಕೂ ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಲಿದೆ ಎಂದರು.
ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳಿಗೆ ಸರಿಯಾಗಿ ಸಲಹೆ ಕೊಡಲು ಕೂಡ ಬರುತ್ತಿಲ್ಲ. ಬದಲಾಗಿ ಜನರಲ್ಲಿ ಗೊಂದಲ ಮೂಡಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ-ಟಿ.ಎಂ.ಶಾಹಿದ್ ತೆಕ್ಕಿಲ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.