ADVERTISEMENT

ಮನವೊಲಿಕೆಗೆ ಸಚಿವ ಸುಧಾಕರ್‌ ಸಭೆ: ವಿಫಲ

ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್‌– ಎತ್ತಿನ ಬಂಡಿಗಳ ಪರೇಡ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:21 IST
Last Updated 25 ಜನವರಿ 2021, 16:21 IST
ರೈತಪರ ಸಂಘಟನೆಗಳು ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಟ್ರ್ಯಾಕ್ಟರ್‌ ಪರೇಡ್‌ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೋಲಾರದಲ್ಲಿ ಸೋಮವಾರ ರೈತ ಮುಖಂಡರ ಸಭೆ ನಡೆಸಿ ಪರೇಡ್‌ ಕೈಬಿಡುವಂತೆ ಮನವಿ ಮಾಡಿದರು.
ರೈತಪರ ಸಂಘಟನೆಗಳು ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಟ್ರ್ಯಾಕ್ಟರ್‌ ಪರೇಡ್‌ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೋಲಾರದಲ್ಲಿ ಸೋಮವಾರ ರೈತ ಮುಖಂಡರ ಸಭೆ ನಡೆಸಿ ಪರೇಡ್‌ ಕೈಬಿಡುವಂತೆ ಮನವಿ ಮಾಡಿದರು.   

ಕೋಲಾರ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರೈತಪರ ಸಂಘಟನೆಗಳು ಬೆಂಗಳೂರಿನಲ್ಲಿ ಮಂಗಳವಾರ (ಜ.26) ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಬೃಹತ್‌ ಟ್ರ್ಯಾಕ್ಟರ್‌ ಪರೇಡ್‌ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಲ್ಲಿ ಸೋಮವಾರ ರಾತ್ರಿ ರೈತ ಮುಖಂಡರ ಸಭೆ ನಡೆಸಿ ಪರೇಡ್‌ ಕೈಬಿಡುವಂತೆ ಮನವಿ ಮಾಡಿದರು.

ದೆಹಲಿಯಲ್ಲಿ ದೇಶದ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್‌ ಪರೇಡ್‌ಗೆ ಬೆಂಬಲ ಸೂಚಿಸಿ ರೈತಪರ ಸಂಘಟನೆಗಳು ಬೆಂಗಳೂರಿನಲ್ಲಿ ಮಂಗಳವಾರ ಟ್ರ್ಯಾಕ್ಟರ್‌ ಪರೇಡ್ ನಡೆಸುವಂತೆ ಕರೆ ಕೊಟ್ಟಿವೆ. ಇದಕ್ಕೆ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೆಹಲಿ ಮತ್ತು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತ ಸಂಘಟನೆಗಳ ಟ್ರ್ಯಾಕ್ಟರ್‌ ಪರೇಡ್ ನಡೆಯಲಿದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗುವ ಮುಜುಗರ ತಪ್ಪಿಸುವ ಉದ್ದೇಶಕ್ಕೆ ಬಿಜೆಪಿ ವರಿಷ್ಠರ ಸೂಚನೆಯಂತೆ ಸಚಿವ ಸುಧಾಕರ್‌ ಅವರು ರೈತ ಸಂಘಟನೆಗಳ ಮುಖಂಡರ ಜತೆ ದಿಢೀರ್‌ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಆದರೆ, ಕೆಲ ರೈತ ಸಂಘಟನೆಗಳ ಮುಖಂಡರು ಹೋರಾಟ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಮನಸ್ಥಿತಿಯಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ’ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವರು ರಾಜಕೀಯ ದುರುದ್ದೇಶಕ್ಕೆ ರೈತರ ಹೋರಾಟಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ದೆಹಲಿಯ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ ಮತ್ತು ಎತ್ತಿನ ಬಂಡಿಗಳ ಪರೇಡ್‌ ನಡೆಸಲು ಸಂಘಟನೆಗಳು ಮುಂದಾಗಿವೆ. ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿಗಳ ಪರೇಡ್‌ ನಡೆಸಿದರೆ ಬೆಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪರೇಡ್‌ ಕೈಬಿಟ್ಟು ನೇರವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಸಂಘಟಿಸಿರುವ ಹೋರಾಟದಲ್ಲಿ ಭಾಗವಹಿಸಿ’ ಎಂದು ಮನವಿ ಮಾಡಿದರು.

ಸಚಿವರ ಮನವಿಗೆ ಒಪ್ಪದ ರೈತ ಸಂಘಟನೆಗಳ ಮುಖಂಡರು, ‘ಮಂಗಳವಾರ ಟ್ರ್ಯಾಕ್ಟರ್‌ ಮತ್ತು ಎತ್ತಿನ ಬಂಡಿಗಳ ಪರೇಡ್‌ ನಡೆಸುವುದು ಶತಸಿದ್ಧ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ’ ಎಂದು ಹೇಳಿದರು. ರೈತ ಮುಖಂಡರ ಬಿಗಿ ಪಟ್ಟಿನಿಂದಾಗಿ ಸಚಿವರ ಸಭೆ ವಿಫಲವಾಯಿತು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಉಪ ವಿಭಾಗಾಧಿಕಾರಿ ಸೋಮಶೇಖರ್‌ ಹಾಜರಿದ್ದರು.

ಪೊಲೀಸ್‌ ಕಟ್ಟೆಚ್ಚರ: ಜಿಲ್ಲೆಯಿಂದ ರೈತರು ಹಾಗೂ ರೈತ ಮುಖಂಡರು ಟ್ರ್ಯಾಕ್ಟರ್‌ ಮತ್ತು ಎತ್ತಿನ ಬಂಡಿಗಳಲ್ಲಿ ಮಂಗಳವಾರ ಬೆಂಗಳೂರಿಗೆ ತೆರಳಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.