
ಮುಳಬಾಗಿಲು: ‘ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸಚಿವರಾಗಿ ಕೆಲಸ ಮಾಡುವುದನ್ನು ಬಿಟ್ಟು ಶಾಸ್ತ್ರ ಹೇಳುವುದನ್ನು ಕಲಿತಿದ್ದಾರೆ. ಹೀಗಾಗಿಯೇ 2028ಕ್ಕೆ ಕಾಂಗ್ರೆಸ್ ಪಕ್ಷದ ಆದಿನಾರಾಯಣ ಶಾಸಕರಾಗುವುದು ಖಚಿತ’ ಎಂದು ಹೇಳಿದ್ದಾರೆಂದು ಶಾಸಕ ಸಮೃದ್ಧಿ ಮಂಜುನಾಥ್ ಟೀಕಿಸಿದರು.
ಭಾನುವಾರ ಮುಳಬಾಗಿಲು ತಾಲ್ಲೂಕಿನ ಆವಣಿಯಲ್ಲಿ ಸಿಸಿ ರಸ್ತೆ, ಅಂಗನವಾಡಿ ಕಟ್ಟಡ ಹಾಗೂ ಕಗ್ಗನಹಳ್ಳಿಯಲ್ಲಿ ಡಾಂಬರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆದಿನಾರಾಯಣ ಗೆದ್ದಿದ್ದರೆ, ತಾಲ್ಲೂಕು ಅಭಿವೃದ್ಧಿ ಆಗುತಿತ್ತು. ಆದರೂ 2028ರಲ್ಲಿ ಆದಿನಾರಾಯಣ ಶಾಸಕರಾಗುವುದು ಖಚಿತ. ತಾಲ್ಲೂಕು ಎಲ್ಲಾ ರೀತಿಯಲ್ಲಿ ಅಭಿವೃದ್ಧಿಯಾಗುವುದು ಸಹ ಗ್ಯಾರಂಟಿ ಎಂದು ಹೇಳಿದ್ದಾರೆ. ಇದರಿಂದ ಬೈರತಿ ಸಚಿವರಾ ಅಥವಾ ಶಾಸ್ತ್ರ ಹೇಳುವವರಾ’ ಎಂದು ವ್ಯಂಗ್ಯವಾಡಿದರು.
‘ಮುಳಬಾಗಿಲಿನಲ್ಲಿ ಕನಕ ಭವನವನ್ನು ಭಾನುವಾರ ಉದ್ಘಾಟನೆ ಮಾಡುವ ಕುರಿತು ಕರಪತ್ರ ಮುದ್ರಣ ಮಾಡಿ ಬೈರತಿ ಸುರೇಶ್ ಮುಖ್ಯ ಅತಿಥಿಯಾಗಿ, ನನ್ನನ್ನು ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ನಿಗದಿ ಮಾಡಲಾಗಿತ್ತು. ಆದರೆ, ಕುರುಬ ಸಮುದಾಯದವರು ಬೈರತಿ ಸುರೇಶ್ ಅವರನ್ನು ಶನಿವಾರವೇ ಕರೆಸಿ ಕನಕ ಭವನವನ್ನು ಉದ್ಘಾಟನೆ ಮಾಡಿದ್ದಾರೆ. ಕುರುಬ ಸಮುದಾಯದ ತಾಲ್ಲೂಕು ಅಧ್ಯಕ್ಷ ಸುಬ್ರಮಣಿ ಅವರು ಕುರುಬ ಸಂಘದ ಅಧ್ಯಕ್ಷರೋ ಅಥವಾ ಕಾಂಗ್ರೆಸ್ ಗುಲಾಮರೊ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕನಕ ಭವನ ಉದ್ಘಾಟನೆ ಸಚಿವರ ಕೈಯಲ್ಲಿ ಆತುರವಾಗಿ ಮಾಡಿಸಿದ್ದು ಸರಿಯಲ್ಲ. ಅಕಸ್ಮಾತ್ ಮಾಡಲೇಬೇಕು ಎಂದರೆ ಕನಿಷ್ಠ ಸೌಜನ್ಯಕ್ಕೆ ಮಾಹಿತಿ ನೀಡಿಲ್ಲ. ಕನಕ ಭವನ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ಹಾಗೂ ವಯಕ್ತಿಕವಾಗಿ ₹10 ನೀಡಿದ್ದೇನೆ. ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಾಯ ಮಾಡಿದ್ದೇನೆ. ಆದರೆ, ಕುರುಬ ಸಮುದಾಯದವರು ಅವಮಾನ ಎಸಗಿದ್ದಾರೆ. ಮುಂದೆ ನಾನೂ ನೋಡುತ್ತೇನೆ’ ಎಂದರು.
ಎರಡು ಬಾರಿ ಕನಕ ಭವನ ಉದ್ಘಾಟನಾ ಕಾರ್ಯಕ್ರಮ: ಭಾನುವಾರ ನಿಗದಿಯಾಗಿದ್ದ ಕನಕ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಶನಿವಾರ ಬೈರತಿ ಸುರೇಶ್ ಅವರು ಮಾಡಿದ್ದರು. ಹಾಗಾಗಿ ನಿಗದಿಯಂತೆ ಭಾನುವಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಶಾಸಕರು ಗೈರಾಗಿದ್ದರು. ಇದರಿಂದ ಕೆಲವೇ ಅತಿಥಿಗಳಿಂದ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.