ADVERTISEMENT

ಕೋಲಾರ: ನಂದಿನಿ ಉತ್ಪನ್ನ ತಯಾರು, ₹ 200 ಕೋಟಿ ಘಟಕ

ಫೆಬ್ರುವರಿಯೊಳಗೆ ಎಂವಿಕೆ ಗೋಲ್ಡನ್‌ ಡೇರಿ, ಸೌರ ಘಟಕ ಉದ್ಘಾಟನೆ: ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:55 IST
Last Updated 14 ಡಿಸೆಂಬರ್ 2025, 6:55 IST
ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಎಂವಿಕೆ ಗೋಲ್ಡನ್‌ ಡೇರಿಯ ಯಂತ್ರಗಳನ್ನು ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿದರು
ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಎಂವಿಕೆ ಗೋಲ್ಡನ್‌ ಡೇರಿಯ ಯಂತ್ರಗಳನ್ನು ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿದರು   

ಕೋಲಾರ: ಲಾಭದಾಯಕವಾಗಿರುವ ನಂದಿನಿ ಉತ್ಪನ್ನಗಳನ್ನು ಕೋಲಾರದ ಹಾಲು ಒಕ್ಕೂಟದಲ್ಲೇ (ಕೋಮುಲ್‌) ತಯಾರಿಸಲು ಸುಮಾರು ₹ 200 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.

ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಂಬಂಧ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಡಳಿತ ಮಂಡಳಿ ನಿರ್ದೇಶಕರು ಕೂಡ ಉತ್ಸುಕರಾಗಿದ್ದಾರೆ. ಆದಷ್ಟು ಬೇಗ ಈ ಯೋಜನೆ ಈಡೇರಲಿದೆ’ ಎಂದರು.

ಈ ಯೋಜನೆಗೆ ಜಾಗದ ಸಮಸ್ಯೆ ಇಲ್ಲ. ಹೊಸ ಡೇರಿ ನಿರ್ಮಾಣವಾಗಿ ಸ್ಥಳಾಂತರವಾದಾಗ ಈಗಿರುವ ಸ್ಥಳ ಲಭ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಜನವರಿ ಅಥವಾ ಫೆಬ್ರುವರಿಯಲ್ಲಿ ಎಂವಿಕೆ ಗೋಲ್ಡನ್‌ ಡೇರಿ, ಸೌರ ಘಟಕ ಉದ್ಘಾಟಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಸಮಯ ಕೇಳಲಾಗುವುದು ಎಂದು ತಿಳಿಸಿದರು.

₹ 250 ಕೋಟಿ ವೆಚ್ಚದಲ್ಲಿ ಗೋಲ್ಡನ್‌ ಡೇರಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಕಾಮಗಾರಿ ಬಾಕಿ ಇದೆ. ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಗುರಿ ನೀಡಿದ್ದು, ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದ್ದೇನೆ ಎಂದು ನುಡಿದರು.

12 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ. ಒಕ್ಕೂಟಕ್ಕೆ ಇದರಿಂದ ತಿಂಗಳಿಗೆ ಸುಮಾರು ₹80 ಲಕ್ಷ ವಿದ್ಯುತ್‌ ಶುಲ್ಕ ಉಳಿತಾಯವಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಬಿಎಂಸಿಗೂ ಸಂಪರ್ಕ ಕಲ್ಪಿಸಲು ನಿರ್ಧರಿಸಿದ್ದೇವೆ. ಇದರಿಂದ ತಿಂಗಳಿಗೆ ₹ 1.5 ಕೋಟಿ ಉಳಿತಾಯವಾಗುತ್ತದೆ ಎಂದರು.

ಚಿಂತಾಮಣಿಯಲ್ಲಿ ಐಸ್‌ ಕ್ರೀಂ ಘಟಕ ನಿರ್ಮಿಸಿದ್ದೆವು. ಹೈನುಗಾರರ ಹೆಣ್ಣು ಮಕ್ಕಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್‌ ವ್ಯವಸ್ಥೆ ಕೂಡ ಮಾಡಿದ್ದೇವೆ. ಬೆಂಗಳೂರಿನಿಂದ ಕೋಲಾರ ಒಕ್ಕೂಟ ಪ್ರತ್ಯೇಕವಾಗಿ 40 ವರ್ಷಗಳಾಗಿದೆ. ಇಂಥ ಕೆಲಸ ಮಾಡಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ನಮ್ಮ ಒಕ್ಕೂಟ ಸಾಲಕ್ಕೆ ಸಿಲುಕಿಕೊಂಡಿಲ್ಲ ಎಂದು ಹೇಳಿದರು.

ನಂಜೇಗೌಡ ಅವರು ನಿರ್ದೇಶಕರು ಹಾಗೂ ಅಧಿಕಾರಿಗಳ ಜತೆ ಗೋಲ್ಡನ್‌ ಡೇರಿ ಕಟ್ಟಡ ಹಾಗೂ ಯಂತ್ರಗಳನ್ನು ಪರಿಶೀಲಿಸಿದರು. ಕೆಲ ಸಲಹೆ, ಸೂಚನೆ ನೀಡಿದರು.

ಕೋಮುಲ್‌ ನಿರ್ದೇಶಕರಾದ ಚಂಜಿಮಲೆ‌ ಬಿ.ರಮೇಶ್‌, ಹನುಮೇಶ್‌, ಕೆ.ಕೆ.ಮಂಜುನಾಥ್‌, ನಾಗರಾಜ್, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.