ADVERTISEMENT

ಮುಳಬಾಗಿಲು: ಅವ್ಯವಸ್ಥೆಗಳ ಆಗರ ರಾಷ್ಟ್ರೀಯ ಹೆದ್ದಾರಿ 75

ಹೆಸರಿಗಷ್ಟೇ ಹೆದ್ದಾರಿ ಮೂಲಸೌಲಭ್ಯಗಳಿಲ್ಲದೆ ಸವಾರರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:15 IST
Last Updated 24 ನವೆಂಬರ್ 2025, 6:15 IST
<div class="paragraphs"><p>ಮುಳಬಾಗಿಲು ತಾಲ್ಲೂಕಿನ ನಂಗಲಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಪಕ್ಕದಲ್ಲಿ ನಿಂತಿರುವ ವಾಹನಗಳು</p></div>

ಮುಳಬಾಗಿಲು ತಾಲ್ಲೂಕಿನ ನಂಗಲಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಪಕ್ಕದಲ್ಲಿ ನಿಂತಿರುವ ವಾಹನಗಳು

   

ಮುಳಬಾಗಿಲು: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ದೇಶದಲ್ಲೇ ಅತಿದೊಡ್ಡ ಹೆದ್ದಾರಿಗಳಲ್ಲಿ ಒಂದಾಗಿದ್ದು, ಅವ್ಯವಸ್ಥೆಗಳ ಆಗರವಾಗಿ ನಲಗುತ್ತಿದೆ.

ಬೆಂಗಳೂರಿನ ಕೆ.ಆರ್.ಪುರಂನಿಂದ ಮುಳಬಾಗಿಲು ತಾಲ್ಲೂಕಿನ ನಂಗಲಿ ಗಡಿಯ ಮೂಲಕ ನೆರೆಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರ ಉದ್ದಕ್ಕೂ ಅನೇಕ ಸಮಸ್ಯೆಗಳನ್ನು ಹೊದ್ದು ಮಲಗಿದೆ. ಹೆಸರಿಗೆ ಹೆದ್ದಾರಿಯಾದರೂ ಮೂಲ ಸೌಲಭ್ಯಗಳಿಲ್ಲದೆ ವಾಹನ ಸವಾರರು ನರಳುವಂತಾಗಿದೆ.

ADVERTISEMENT

ರಾಜ್ಯದ ಮೆಟ್ರೋಪಾಲಿಟನ್ ಸಿಟಿ ಬೆಂಗಳೂರು ಹಾಗೂ ತಮಿಳುನಾಡಿನ ಪ್ರಸಿದ್ಧ ಮಾರುಕಟ್ಟೆಗಳ ಸಮೀಪವಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 75ಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಆದರೆ, ಹೆದ್ದಾರಿಗಳಲ್ಲಿ ಮೂಲ ಸೌಲಭ್ಯಗಳಿಲ್ಲದೆ ಸವಾರರು ವಂಚಿತರಾಗಿದ್ದಾರೆ.

ತಾಲ್ಲೂಕಿನ ನಂಗಲಿ, ಎನ್.ವಡ್ಡಹಳ್ಳಿ, ತಾಯಲೂರು ವೃತ್ತ, ಕೆಜಿಎಫ್ ವೃತ್ತ, ವಿರುಪಾಕ್ಷಿ, ಮದರಸ ಸಮೀಪದ ವೃತ್ತ, ಕೆ.ಬೈಯಪ್ಪನಹಳ್ಳಿ, ನಂಗಲಿ ಗಡಿ ಮತ್ತಿತರ ಕಡೆ ಮೂರು ವರ್ಷಗಳಿಂದ ಹೆದ್ದಾರಿಯ ನಾನಾ ಕಾಮಗಾರಿಗಳು ನಡೆಯುತ್ತಿವೆ. ಹಾಗಾಗಿ ಹೆದ್ದಾರಿ ಪ್ರಾಧಿಕಾರ ಅಥವಾ ಗುತ್ತಿಗೆದಾರರು ಸೂಕ್ತ ರಸ್ತೆ ನಿರ್ಮಿಸಿ ಕಾಮಗಾರಿ ನಡೆಸಬೇಕಿತ್ತು. ಆದರೆ, ಸರ್ವಿಸ್ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದು, ಕೆಲವೆಡೆ ಡಾಂಬರು ರಸ್ತೆ ಮಣ್ಣು ಹಾಗೂ ಜಲ್ಲಿ ಕಲ್ಲಿನ ರಸ್ತೆಯಾಗಿದ್ದರೆ, ಇನ್ನೂ ಕೆಲವೆಡೆ ಭಾರೀ ಗಾತ್ರದ ಗುಂಡಿಗಳಿವೆ. ಸ್ವಲ್ವ ಯಮಾರಿದರೂ ಅಪಘಾತ ಗ್ಯಾರಂಟಿ.

ಹೆದ್ದಾರಿಯ ಎನ್.ವಡ್ಡಹಳ್ಳಿ ಬಳಿ ಬಿದ್ದಿರುವ ಗುಂಡಿಗಳು

ರಾತ್ರೋ ರಾತ್ರಿ ಹೆದ್ದಾರಿ ಇಕ್ಕೆಲದ ಮರಗಳು ಕಟಾವು:

ಹೆದ್ದಾರಿಯ ಉದ್ದಕ್ಕೂ ರಸ್ತೆ ನಿರ್ಮಾಣದ ಸಮಯದಲ್ಲಿ ನಾಟಿ ಮಾಡಿದ್ದ ಸಸಿಗಳು ಮರಗಳಾಗಿ ಬೆಳೆದಿವೆ. ಆದರೆ, ಹೋಟೆಲ್, ಬಾರ್, ರೆಸ್ಟೋರೆಂಟ್, ಡಾಬಾ, ಪೆಟ್ರೋಲ್ ಬಂಕ್, ಮಾರುಕಟ್ಟೆ ಮತ್ತಿತರ ನಿರ್ಮಾಣದ ನೆಪದಲ್ಲಿ ರಾತ್ರೋ ರಾತ್ರಿ ಮರಗಳನ್ನು ಕಟಾವು ಮಾಡುತ್ತಿದ್ದಾರೆ.

ಹೆದ್ದಾರಿಯ ತಾತಿಕಲ್ಲು ಬಳಿ ತಾಲ್ಲೂಕಿನ ಆದರ್ಶ ಶಾಲೆಯಿದೆ. ಆದರೆ, ಅಲ್ಲಿ ಸ್ಕೈ ವಾಕ್, ಬ್ಯಾರಿಕೇಡ್, ಸಿಗ್ನಲ್ ದೀಪ ಹಾಗೂ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ನೂರಾರು ಮಂದಿ ಆ ರಸ್ತೆಯಲ್ಲಿ ಸಂಚರಿಸಬೇಕಿದೆ.

ಹೆದ್ದಾರಿ ಪಕ್ಕದಲ್ಲೇ ಸರಕು ಸಾಗಾಣೆ ವಾಹನಗಳ ನಿಲುಗಡೆ:

ತಮಿಳುನಾಡು, ಆಂಧ್ರಪ್ರದೇಶ, ವಿಶಾಕಪಟ್ಟಣ ಮತ್ತಿತರ ಕಡೆ ತರಕಾರಿ, ಹೂ ಸಾಗಿಸುವ ವಾಹನಗಳು ರಸ್ತೆಯಲ್ಲಿ ಗಂಟೆಗಟ್ಟಲೆ ನಿಂತಿದ್ದು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಹೆದ್ದಾರಿಯ ಇಕ್ಕೆಲಗಳಲ್ಲಿ ಕಸದ ರಾಶಿ:

ಹೆದ್ದಾರಿ ಉದ್ದಕ್ಕೂ ನಂಗಲಿ, ಎನ್.ವಡ್ಡಹಳ್ಳಿ, ತಾಯಲೂರು, ಮುಳಬಾಗಿಲು ನಗರದ ಹೊರವಲಯ, ಕಪ್ಪಲಮಡಗು ಮುಂತಾದ ಕಡೆ ವ್ಯಾಪಾರಿಗಳು ಕಸ, ಕೋಳಿ ರೆಕ್ಕೆ ಪುಕ್ಕ, ಪ್ಲಾಸ್ಟಿಕ್ ತ್ಯಾಜ್ಯ ಸುರಿಯುತ್ತಿದ್ದು ಕೊಳೆತು ದುರ್ನಾತ ಬೀರುತ್ತಿದೆ. ಜೊತೆಗೆ ತ್ಯಾಜ್ಯವೆಲ್ಲಾ ರಸ್ತೆಗೆ ಬರುವ ಮೂಲಕ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.

ಹೆದ್ದಾರಿಯ ಇಕ್ಕೆಲಗಳಲ್ಲಿ ಬಿದ್ದಿರುವ ತ್ಯಾಜ್ಯ

ಹೆದ್ದಾರಿಯಲ್ಲಿ ಇಲ್ಲ ಕ್ಯಾಟ್ ಐಸ್:

ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಬಸ್ ನಿಲ್ದಾಣ ಹಾಗೂ ಗ್ರಾಮದ ಗೇಟ್ ಬಂದಲ್ಲಿ ವಾಹನ ಸವಾರರಿಗೆ ಎಚ್ಚರಿಕೆಯಾಗಿ ಕ್ಯಾಟ್ ಐಸ್ (ರೇಡಿಯಂ ಲೈಟಿಂಗ್) ಅಳವಡಿಸುವುದು ಕಡ್ಡಾಯ. ಆದರೆ, ಹೆದ್ದಾರಿಯಲ್ಲಿ ಎಲ್ಲಿಯೂ ಕ್ಯಾಟ್ ಐಸ್ ಇಲ್ಲ. ಹಾಗಾಗಿ ವಾಹನಗಳು ವೇಗವಾಗಿ ಚಲಿಸುತ್ತಿವೆ.

ತಾತಿಕಲ್ಲು ಸಮೀಪದ ರಸ್ತೆ ದಾಟುತ್ತಿರುವ ವಿದ್ಯಾರ್ಥಿಗಳು 

ಹೆದ್ದಾರಿ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸಮಸ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಅಜಿತ್, ಹೆದ್ದಾರಿ ನಿರ್ವಹಣಾಧಿಕಾರಿ
ಬಹುತೇಕ ಸಮಸ್ಯೆಗಳಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಾಲ್ಲೂಕಿನ ಎರಡು ಟೋಲ್ ಸಂಗ್ರಹ ಕೇಂದ್ರಗಳಲ್ಲಿ ವಸೂಲಾತಿ ಮಾತ್ರ ಕಡ್ಡಾಯ.
ಸೋಮಶೇಖರ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.