ಕೆಜಿಎಫ್ ತಾಲ್ಲೂಕು ದಾದೇನಹಳ್ಳಿ ಬಳಿ ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಲಾಗಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಬ್ಯಾನರ್
ಕೆಜಿಎಫ್ (ಕೋಲಾರ): ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ನೆರೆ ರಾಜ್ಯಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದರೂ ರೋಗ ಹರಡದಂತೆ ತಡೆಯಲು ಕೆಜಿಎಫ್ ಗಡಿ ಭಾಗದಲ್ಲಿ ಈವರೆಗೂ ಯಾವುದೇ ತಪಾಸಣಾ ಕೇಂದ್ರ ತೆರೆದಿಲ್ಲ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ನೆರೆ ರಾಜ್ಯದಿಂದ ಬರುತ್ತಿರುವ ಕೋಳಿಗಳ ಪರೀಕ್ಷೆ ನಡೆಯುತ್ತಿಲ್ಲ. ಯಾವ ಕಡೆಗಳಿಂದ ತಾಲ್ಲೂಕಿಗೆ ಕೋಳಿಗಳು ಬರುತ್ತಿವೆ ಎಂಬ ಮಾಹಿತಿಯೂ ಲಭ್ಯವಿಲ್ಲ. ಹೆಸರಿಗೆ ಮಾತ್ರ ಅಲ್ಲೊಂದು ಇಲ್ಲೊಂದು ಸೂಚನಾ ಫಲಕ ಕಾಣುತ್ತವೆಯೇ ಹೊರತು ಸಿಬ್ಬಂದಿ ಸುಳಿವಿಲ್ಲ!
ಪ್ರಸ್ತುತ ತಾಲ್ಲೂಕಿನಲ್ಲಿ ಕೇವಲ ಹತ್ತು ಸಿಬ್ಬಂದಿ ಇದ್ದಾರೆ. ಇವರಲ್ಲಿ ನಾಲ್ವರು ವೈದ್ಯರು ಮತ್ತು ಇತರ ಆರು ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಆಂಧ್ರ ಮತ್ತು ತಮಿಳುನಾಡಿನ ಗಡಿಗಳಲ್ಲಿ ತಪಾಸಣೆ ಕೇಂದ್ರ ತೆರೆಯಲು ಈ ಸಿಬ್ಬಂದಿಯಿಂದ ಸಾಧ್ಯವಾಗದು. ಪ್ರತಿನಿತ್ಯ ಪಶು ಆಸ್ಪತ್ರೆ ತೆರೆಯುವ, ಸಂಚಾರಿ ವಾಹನಗಳಲ್ಲಿ ಗ್ರಾಮಗಳಿಗೆ ತೆರಳುವ ಜವಾಬ್ದಾರಿ ಇರುವುದರಿಂದ ಅವರನ್ನೇ ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ನಿಲ್ಲಿಸಲಾಗದು. ಅದಕ್ಕೆ ಬೇರೆ ಸಿಬ್ಬಂದಿ ನಿಯೋಜಿಸಬೇಕು ಎನ್ನುತ್ತಾರೆ ಇಲಾಖೆಯ ಸಿಬ್ಬಂದಿ.
ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಗೂಗಲ್ ಮೀಟ್‌ನಲ್ಲಿ ತಿಳಿಸಿರುವಂತೆ ಮೂರು ತಂಡ ರಚಿಸಲಾಗಿದೆ. ಆಂಧ್ರದಿಂದ ಬರುವ ವಿ.ಕೋಟೆ ಬಳಿಯ ದಾದೇನಹಳ್ಳಿ ಬಳಿ, ಕೆಂಪಾಪುರ ಮತ್ತು ಇತರ ಭಾಗದಲ್ಲಿ ತಪಾಸಣೆ ನಡೆಸುವಂತೆ ಅವರಿಗೆ ತಿಳಿಸಲಾಗಿದೆ ಎಂದು ಹಿರಿಯ ಸಹಾಯಕ ನಿರ್ದೇಶಕ ತ್ರಿಮೂರ್ತಿ ನಾಯಕ್ ಹೇಳುತ್ತಾರೆ.
ಆದರೆ ವಾಸ್ತವವಾಗಿ ಎಲ್ಲಿಯೂ ತಂಡಗಳು ಗಡಿಯಲ್ಲಿ ನಿಂತು ಹೊರ ರಾಜ್ಯದಿಂದ ಬರುವ ವಾಹನಗಳ ತಪಾಸಣೆ ನಡೆಸುತ್ತಿರುವುದು ಕಂಡುಬಂದಿಲ್ಲ.
ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋಳಿ ಫಾರ್ಮ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ 73 ಕೋಳಿ ಫಾರ್ಮ್‌ಗಳಿವೆ. ಅವುಗಳಲ್ಲಿ ಸುಮಾರು 11 ಲಕ್ಷ ಕೋಳಿ ಸಾಕಲಾಗುತ್ತಿದೆ. ಜೊತೆಗೆ ಗಡಿ ಪಕ್ಕದಲ್ಲಿಯೇ ನೆರೆಯ ರಾಜ್ಯದ ಕೋಳಿ ಫಾರ್ಮ್ ಕೂಡ ಇವೆ. ಗಡಿ ಆಚೆಯ ಫಾರ್ಮ್ ಕೋಳಿಗಳು ಯಾವುದೇ ಅಡೆತಡೆಗಳಿಲ್ಲದೆ ರಾಜ್ಯಕ್ಕೆ ಪ್ರವೇಶ ಪಡೆಯುತ್ತವೆ. ಎಲ್ಲಾದರೂ ಕೋಳಿಗಳು ಸತ್ತಿರುವ ಸುದ್ದಿ ಬಂದರೆ ಅವುಗಳನ್ನು ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷೆ ಮಾಡಬೇಕೆಂಬ ಸೂಚನೆ ಬಂದಿದೆ. ಆದರೆ ಇದುವರೆಗೂ ಕೋಳಿಗಳು ಸತ್ತಿರುವ ವರದಿ ಬಂದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
‘ನಗರದ ಕೋಳಿಮಾಂಸದ ಅಂಗಡಿಗಳಿಗೆ ಹೋಗಿ ಹಕ್ಕಿಜ್ವರದ ಬಗ್ಗೆ ಮಾಹಿತಿ ನೀಡಿದ್ದೇವೆ. ಕೋಳಿಗಳನ್ನು ಖರೀದಿ ಮಾಡುವ ಮುನ್ನ ವಹಿಸಬೇಕಾದ ಎಚ್ಚರಗಳ ಬಗ್ಗೆ ವಿವರಿಸಲಾಗಿದೆ’ ಎಂದು ಸಿಬ್ಬಂದಿ ಹೇಳುತ್ತಾರೆ.
ಸೋಮವಾರ ಜಿಲ್ಲಾಧಿಕಾರಿಗಳು ಪೊಲೀಸರ ಸಹಕಾರ ಪಡೆದು ಗಡಿಯಲ್ಲಿ ತಪಾಸಣೆ ನಡೆಸಲು ಸೂಚನೆ ಕೊಟ್ಟಿದ್ದಾರೆ. ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿ ಪೊಲೀಸ್ ಸಿಬ್ಬಂದಿಯ ನೆರವು ಪಡೆದು ತಪಾಸಣೆ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು
ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯು ಗಡಿಯಲ್ಲಿಒಂಬತ್ತು ಗಡಿ ಕೇಂದ್ರಗಳನ್ನು ತೆರೆದಿದೆ. ಅದರ ಜೊತೆಗೆ ಪಶು ಪಾಲನಾ ಇಲಾಖೆಯವರು ಕೆಲಸ ಮಾಡಲು ಅಡ್ಡಿ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.ಕೃಷ್ಣಮೂರ್ತಿ
ಜಿಲ್ಲಾಡಳಿತದ ಸೂಚನೆ ಮೇರೆಗೆ ಇತರ ಇಲಾಖೆಯ ಜೊತೆ ಸಮನ್ವಯದಿಂದ ಕೆಲಸ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಕೆ.ಎಂ.ಶಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಕೃಷ್ಣಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.