ADVERTISEMENT

ಮಾಹಿತಿ ಕೊಡದಿದ್ದಾಗ ಬ್ಲ್ಯಾಕ್‌ಮೇಲರ್‌ ಸೃಷ್ಟಿ: ಮಾಹಿತಿ ಆಯುಕ್ತ ಎಸ್.ರಾಜಶೇಖರ್‌

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:12 IST
Last Updated 17 ಮೇ 2025, 16:12 IST
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಆಯುಕ್ತರಾದ ಎಸ್.ರಾಜಶೇಖರ್ ಹಾಗೂ ರುದ್ರಣ್ಣ ಹರ್ತಿಕೋಟೆ ಮಾತನಾಡಿದರು
ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಆಯುಕ್ತರಾದ ಎಸ್.ರಾಜಶೇಖರ್ ಹಾಗೂ ರುದ್ರಣ್ಣ ಹರ್ತಿಕೋಟೆ ಮಾತನಾಡಿದರು    

ಕೋಲಾರ: ‘ಅಧಿಕಾರಿಗಳು ಮಾಹಿತಿ ಕೊಡಲು ಹಿಂಜರಿದಾಗ ಬ್ಲ್ಯಾಕ್‌ಮೇಲರ್‌ಗಳು ಹೆಚ್ಚುತ್ತಾರೆ. ಮಾಹಿತಿ ಕೊಟ್ಟರೆ ಬ್ಲ್ಯಾಕ್‌ಮೇಲ್‌ ಮಾಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ. ಇಂಥ ಪರಿಸ್ಥಿತಿಯನ್ನು ಅಧಿಕಾರಿಗಳು ಸೃಷ್ಟಿಸಿಕೊಳ್ಳಬಾರದು’ ಎಂದು ಮಾಹಿತಿ ಆಯುಕ್ತ ಎಸ್.ರಾಜಶೇಖರ್‌ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಹಾಗೂ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕೆಲವೊಮ್ಮೆ ಕೆಲ ಅಧಿಕಾರಿಗಳೇ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಬ್ಲ್ಯಾಕ್‌ಮೇಲರ್‌ ಎಂದು ಬ್ರ್ಯಾಂಡಿಂಗ್ ಮಾಡುವ ಕೆಲಸ ನಡೆಯುತ್ತದೆ. ನನ್ನ ಪ್ರಕಾರ ಮಾಹಿತಿ ಹಕ್ಕು ಕಾರ್ಯಕರ್ತರು ಬ್ಲ್ಯಾಕ್‌ಮೇಲರ್‌ ಅಲ್ಲವೇ ಅಲ್ಲ. ಅಧಿಕಾರಿಗಳು ಮಾಹಿತಿ ಕೊಡದಿದ್ದಾಗ ಬ್ಲ್ಯಾಕ್‌ಮೇಲರ್‌ ಸೃಷ್ಟಿಯಾಗುತ್ತಾರೆ’ ಎಂದರು.

ADVERTISEMENT

‘ಯಾವುದೇ ಕಾರಣಕ್ಕೆ ಮಾಹಿತಿ ಕೊಡಲು ವಿಳಂಬ ಮಾಡಬಾರದು. 30 ದಿನ ನಿಗದಿ ಇದ್ದರೂ ಮಾಹಿತಿ ಇದ್ದಾಗ ಕೊಟ್ಟುಬಿಡಬೇಕು. ವಿಳಂಬ ಮಾಡಿದಷ್ಟು ಅನುಮಾನಗಳು ಬರುತ್ತವೆ. ಕಾಯ್ದೆ ಪ್ರಕಾರ ಅಧಿಕಾರಿಗಳು ಮಾಹಿತಿ ಕೊಡಲೇಬೇಕು. ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.

‘ಒಬ್ಬ ವ್ಯಕ್ತಿ ಇಷ್ಟೇ ಅರ್ಜಿ ಸಲ್ಲಿಸಬೇಕೆಂಬ ಮಿತಿ ಇಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿ ಅಡಗಿದೆಯೇ ಇಲ್ಲವೇ ಎಂಬುದನ್ನು ಮೇಲ್ಮನವಿ ಅಧಿಕಾರಿ ನಿರ್ಧರಿಸಬೇಕು’ ಎಂದು ನುಡಿದರು.

ಸಭೆಯಲ್ಲಿ ಮಾಹಿತಿ ಆಯುಕ್ತರಾದ ಎಸ್.ರಾಜಶೇಖರ್‌ ಹಾಗೂ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಹಿತಾಸಕ್ತಿ ರಕ್ಷಿಸಲು ಮಾಹಿತಿ ಹಕ್ಕು ಕಾಯ್ದೆ-2005 ಜಾರಿಗೆ ತರಲಾಗಿದೆ. ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ಉತ್ತಮ ಆಡಳಿತ ಮಾಹಿತಿ ಹಕ್ಕು ಕಾಯ್ದೆಯ ಮೂಲಮಂತ್ರವಾಗಿದೆ’ ಎಂದರು.

‘ಆರ್‌ಟಿಐ ಕಾಯ್ದೆ ಜಾರಿಯಾಗಿ 20ವರ್ಷಗಳು ಸಂದಿವೆ. ಈ ಕಾಯ್ದೆಯು ಇಂದು ನಾಗರಿಕರನ್ನು ಸಶಕ್ತಗೊಳಿಸಿದ್ದು, ಆಡಳಿತಾತ್ಮಕ ಸುಧಾರಣೆ ತಂದಿದೆ. ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದೆ. ಒಂದು ಹಂತಕ್ಕೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಆದಾಗ್ಯೂ ಇನ್ನೂ ಹಲವು ಸವಾಲುಗಳು ಉಳಿದುಕೊಂಡಿವೆ. ಸಾವಿರಾರು ದೂರುಗಳು ಬರುತ್ತಿವೆ. ಪ್ರತಿ ತಿಂಗಳು ಸಾವಿರಕ್ಕೂ ಅಧಿಕ ಮೇಲ್ಮನವಿ ಅರ್ಜಿಗಳು ದಾಖಲಾಗುತ್ತಿವೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾಹಿತಿ ನೀಡಲು ಉಪೇಕ್ಷೆ ಮಾಡುತ್ತಿರುವುದನ್ನು ತೋರಿಸುತ್ತದೆ. ಬಹುತೇಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಮೇಲ್ಮನವಿ ಪ್ರಾಧಿಕಾರಗಳು ತಪ್ಪುಗಳನ್ನು ಮುಚ್ಚಿ ಹಾಕಲು ಅಥವಾ ಯಾರದೋ ಹಿತಾಸಕ್ತಿಯನ್ನು ಉಳಿಸಲು ಮಾಹಿತಿ ನೀಡಲು ನಿರಾಕರಿಸುತ್ತಾರೆ. ಈ ಹಿಂಜರಿಕೆಯು ಕಾನೂನಿನ ಉದ್ದೇಶವನ್ನೇ ಹಾಳು ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರತಿ ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ಜನಪ್ರತಿನಿಧಿಗಳು ಮಾಹಿತಿ ಹಕ್ಕು ವಿಷಯವನ್ನು ಸಹ ಚರ್ಚಿಸಿ ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಅಗತ್ಯವಿದ್ದರೆ ಆಂದೋಲನಗಳನ್ನು ಆಯೋಜಿಸಿ ಅರ್ಜಿಗಳನ್ನು ಮಾಹಿತಿ ಒದಗಿಸಿ ವಿಲೇ ಮಾಡಬೇಕು’ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲೆಯ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದ್ದರು.

ಕೋಲಾರದಿಂದ ಅತ್ಯಧಿಕ ಅರ್ಜಿ

‘ಬೆಂಗಳೂರು ನಗರ ಬೆಳಗಾವಿ ಹೊರತುಪಡಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳು ಸ್ವೀಕೃತವಾಗುತ್ತಿರುವುದು ಕಂಡುಬಂದಿದೆ. ಇದು ಸಾರ್ವಜನಿಕರಲ್ಲಿ ಕಾಯ್ದೆ ಬಗ್ಗೆ ಇರುವ ಅರಿವು ತೋರಿಸಿದರೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹ ಕಾಣಬಹುದಾಗಿದೆ. ಅಧಿಕಾರಿಗಳು ಹೊಣೆಗಾರಿಕೆಯಿಂದ ವರ್ತಿಸಬೇಕು. ಯಾವುದೇ ಹಿಂಜರಿಕೆ ಇಲ್ಲದೆ ಸ್ಪಷ್ಟ ಮಾಹಿತಿಯನ್ನು ಒದಗಿಸುವುದು ಕರ್ತವ್ಯವಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು’ ಎಂದು ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.

ಜಿಲ್ಲೆಯಲ್ಲಿ 2988 ಅರ್ಜಿ ಬಾಕಿ

‘ಕೋಲಾರ ಜಿಲ್ಲೆಯಲ್ಲಿ 2988 ಮೇಲ್ಮನವಿ ಅರ್ಜಿಗಳು ಬಾಕಿಯಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅತಿ ಹೆಚ್ಚು (1836) ಅರ್ಜಿಗಳು ಬಾಕಿ ಇವೆ. ಕಂದಾಯ ಇಲಾಖೆಯಲ್ಲಿ 623 ನಗರಾಭಿವೃದ್ಧಿಯಲ್ಲಿ 123 ಸಮಾಜ ಕಲ್ಯಾಣ ಇಲಾಖೆಯಲ್ಲಿ 80 ಗೃಹ ಇಲಾಖೆಯಲ್ಲಿ 72 ಅರಣ್ಯ ಇಲಾಖೆಯಲ್ಲಿ 51 ಶಿಕ್ಷಣ ಇಲಾಖೆಯಲ್ಲಿ 30 ಕೃಷಿ ಇಲಾಖೆಯಲ್ಲಿ 20 ಇಂಧನ ಇಲಾಖೆಯಲ್ಲಿ 20 ಜಲಸಂಪನ್ಮೂಲ ಇಲಾಖೆಯಲ್ಲಿ 16 ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೇಲ್ಮನವಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸಾಧ್ಯವಾದಷ್ಟು ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲೇ ನಿಯಮಾನುಸಾರ ಮಾಹಿತಿ ಒದಗಿಸಿ ಆಯೋಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು’ ಎಂದು ರುದ್ರಣ್ಣ ಹರ್ತಿಕೋಟೆ ತಿಳಿಸಿದರು. ರಾಜ್ಯದಲ್ಲಿ ಒಟ್ಟು 54 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ ಕೋಲಾರದ ನಾಲ್ಕು ಮಂದಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಮಾಹಿತಿ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.