ADVERTISEMENT

ಕೋಲಾರ | ಆನ್‌ಲೈನ್‌ ವಹಿವಾಟು: ಅಂಚೆಯಲ್ಲಿ ಮಾವು ರವಾನೆ

ಜಿಲ್ಲೆಯ ರೈತರಿಂದ ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ಮಾವು

ಜೆ.ಆರ್.ಗಿರೀಶ್
Published 7 ಮೇ 2020, 6:06 IST
Last Updated 7 ಮೇ 2020, 6:06 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೋಲಾರ: ಜಿಲ್ಲೆಯ ಮಾವಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಅಂಚೆ ಇಲಾಖೆ ಮೂಲಕ ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ಮಾವಿನ ಹಣ್ಣು ತಲುಪಿಸುವ ವಿನೂತನ ಸೇವೆ ಆರಂಭಿಸಿದೆ.

ಅಂಚೆ ಇಲಾಖೆ ಜತೆ ಒಪ್ಪಂದ ಮಾಡಿಕೊಂಡಿರುವ ನಿಗಮವು ಮಾವು ಬೆಳೆಗಾರರು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಜಾ ಹಾಗೂ ರುಚಿಕರ ಮಾವಿನ ಹಣ್ಣುಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಂದ ನೇರವಾಗಿ ಗ್ರಾಹಕರ ಕೈ ಸೇರುತ್ತಿವೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಮಾವು ರಫ್ತು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸದ್ಯ 52,371 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ಈ ಬಾರಿ ಸುಮಾರು 2.35 ಲಕ್ಷ ಟನ್‌ ಫಸಲು ನಿರೀಕ್ಷಿಸಲಾಗಿದೆ.

ADVERTISEMENT

ಲಾಕ್‌ಡೌನ್ ಕಾರಣಕ್ಕೆ ಮಾವು ಬೆಳೆಗಾರರಿಗೆ ಬೆಲೆ ಕುಸಿತದ ಆತಂಕ ಎದುರಾಗಿದ್ದು, ರೈತರ ಸಂಕಷ್ಟ ನಿವಾರಣೆಗಾಗಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಮಾವಿನ ಆನ್‌ಲೈನ್‌ ವಹಿವಾಟು ಆರಂಭಿಸಿದೆ. ಈ ಉದ್ದೇಶಕ್ಕಾಗಿ ನಿಗಮವು www.karsirimangoes.karnataka.gov.in ವೆಬ್‌ ಪೋರ್ಟಲ್‌ ತೆರೆದಿದೆ.

ಜಿಲ್ಲೆಯ ಮಾವು ಬೆಳೆಗಾರರ ಜತೆಗೆ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 68 ರೈತರು ಮಾವು ಮಾರಾಟಕ್ಕೆ ಆಸಕ್ತಿ ತೋರಿ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ. ಜಿಲ್ಲೆಯಲ್ಲಿ ಮೇ ಆರಂಭದಿಂದ ಮಾವು ಕೊಯ್ಲು ಆರಂಭವಾಗಿದ್ದು, ಈವರೆಗೆ 28 ಮಂದಿ ಮಾವು ಬೆಳೆಗಾರರು ಪೋರ್ಟಲ್‌ನಲ್ಲಿ ಹೆಸರು ದಾಖಲಿಸಿದ್ದಾರೆ.

ಸಂದೇಶ ರವಾನೆ: ರೈತರು ತಮ್ಮ ಹೆಸರು ಮತ್ತು ಮೊಬೈಲ್‌ ಸಂಖ್ಯೆಯ ಜತೆ ತಾವು ಬೆಳೆದಿರುವ ಮಾವಿನ ತಳಿ, ಹಣ್ಣಿನ ಬೆಲೆಯ ವಿವರವನ್ನು ಪೋರ್ಟಲ್‌ನಲ್ಲಿ ದಾಖಲಿಸಿದ್ದಾರೆ. ಗ್ರಾಹಕರು ಈ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿ ತಮಗೆ ಇಷ್ಟವಾದ ತಳಿಯ ಮಾವಿನ ಹಣ್ಣು ಮತ್ತು ಬೆಲೆ ಪರೀಕ್ಷಿಸಿ ಎಷ್ಟು ಪ್ರಮಾಣದಲ್ಲಿ ಹಣ್ಣು ಬೇಕೆಂದು ಬುಕ್ಕಿಂಗ್‌ ಮಾಡಿದರೆ ನಿಗಮಕ್ಕೆ ಹಾಗೂ ಸಂಬಂಧಪಟ್ಟ ರೈತರ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.

ನಂತರ ರೈತರು ತಮಗೆ ಬರುವ ಬುಕ್ಕಿಂಗ್‌ ಆರ್ಡರ್ ಕ್ರೋಢೀಕರಿಸಿ ಬಾಕ್ಸ್‌ನಲ್ಲಿ ಮಾವಿನ ಹಣ್ಣುಗಳನ್ನು ಪ್ಯಾಕ್‌ ಮಾಡಿ ಗ್ರಾಹಕರ ವಿಳಾಸ ನಮೂದಿಸಿ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ ರವಾನಿಸುತ್ತಿದ್ದಾರೆ. ಅಲ್ಲಿಂದ ಪೋಸ್ಟ್‌ಮನ್‌ಗಳು ಗ್ರಾಹಕರ ಮನೆಗೆ ಮಾವಿನ ಹಣ್ಣು ತಲುಪಿಸುತ್ತಿದ್ದಾರೆ. ಸದ್ಯ ವಾರದಲ್ಲಿ 2 ದಿನ ಮಾತ್ರ (ಮಂಗಳವಾರ ಮತ್ತು ಶುಕ್ರವಾರ) ಈ ಸೇವೆ ನೀಡಲಾಗುತ್ತಿದ್ದು, ಮಾವು ಹಣ್ಣಿನ ಬಾಕ್ಸ್‌ಗಳ ಸಾಗಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ.

ಸೇವಾ ಶುಲ್ಕ: ಗ್ರಾಹಕರು ಹಣ್ಣು ಬುಕ್ಕಿಂಗ್‌ ಮಾಡುವ ಸಂದರ್ಭದಲ್ಲೇ ಅದರ ಮೊತ್ತವನ್ನು ನಿಗಮಕ್ಕೆ ಪಾವತಿಸಬೇಕು. ಜತೆಗೆ ಪ್ರತಿ ಕೆ.ಜಿ ಹಣ್ಣಿಗೆ ಸೇವಾ ಶುಲ್ಕವಾಗಿ ₹ 27ನ್ನು ಅಂಚೆ ಇಲಾಖೆಗೆ ಪಾವತಿಸಬೇಕು. ಹಣ್ಣು ಗ್ರಾಹಕರ ಕೈ ಸೇರಿದ ನಂತರ ನಿಗಮವು ಸಂಬಂಧಪಟ್ಟ ರೈತರ ಖಾತೆಗೆ ಹಣ ಜಮಾ ಮಾಡುತ್ತಿದೆ.

ನಿಗಮದ ಈ ಸೇವೆಗೆ ಮಾವು ಬೆಳೆಗಾರರು ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವ ರೈತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.