ADVERTISEMENT

ಕೋಲಾರ: ಮನೆ ಸಮೀಪದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಆಯ್ಕೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಮೇ 2020, 14:17 IST
Last Updated 24 ಮೇ 2020, 14:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಕೊರೊನಾ ಸೋಂಕಿನ ಕಾರಣಕ್ಕೆ ಸ್ವಗ್ರಾಮಗಳಿಗೆ ವಾಪಸ್‌ ಹೋಗಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಅವರಿರುವ ಸ್ಥಳದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿ ಹಾಗೂ ವಲಸೆ ಕಾರ್ಮಿಕರ ಮಕ್ಕಳಾಗಿ ವಿವಿಧೆಡೆ ವಾಸವಿದ್ದರು. ಕೆಲ ಸರ್ಕಾರಿ ವಸತಿ ಶಾಲೆಗಳನ್ನು ಕೊರೊನಾ ಕ್ವಾರೆಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಮತ್ತೊಂದೆಡೆ ವಲಸೆ ಕಾರ್ಮಿಕರು ತಮ್ಮ ತಾತ್ಕಾಲಿಕ ಮನೆಗಳನ್ನು ತೊರೆದು ಮಕ್ಕಳ ಜತೆ ಸ್ವಗ್ರಾಮಗಳಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಪೋಷಕರೊಂದಿಗೆ ಸ್ವಗ್ರಾಮಕ್ಕೆ ಮರಳಿರುವ ವಿದ್ಯಾರ್ಥಿಗಳು ತಮಗೆ ಹತ್ತಿರವಿರುವ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳಲು ಮೇ 29ರೊಳಗೆ ಕಾಲಾವಕಾಶ ನೀಡಲಾಗಿದೆ. ಈ ಗಡುವಿನೊಳಗೆ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳದಿದ್ದರೆ ತಾವು ಓದಿದ ಮೂಲ ಕೇಂದ್ರದಲ್ಲೇ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ತಾಲ್ಲೂಕು ವ್ಯಾಪ್ತಿಯಲ್ಲೇ ಹಾಲಿ ಪರೀಕ್ಷಾ ಕೇಂದ್ರವಿದ್ದರೆ ಅದೇ ತಾಲ್ಲೂಕಿನ ಮತ್ತೊಂದು ಕೇಂದ್ರಕ್ಕೆ ಬದಲಾವಣೆ ಮಾಡಿಕೊಳ್ಳಲು ಅವಕಾಶವಿಲ್ಲ. ಕೇಂದ್ರ ಬದಲಾವಣೆ ಬಯಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಬೇಕು. ಸದ್ಯ ವಾಸವಿರುವ ಮನೆಗೆ ಹತ್ತಿರವಾದ ಪರೀಕ್ಷಾ ಕೇಂದ್ರದಿಂದ ಗುರುತಿಸಿರುವ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ಬದಲಾಯಿಸಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಕೇಂದ್ರ ಬದಲಾವಣೆ ಆದರೂ ಹಳೆಯ ನೋಂದಣಿ ಸಂಖ್ಯೆ ಮುಂದುವರಿಸಲಾಗುತ್ತದೆ. ಪ್ರಸ್ತುತ ಓದುತ್ತಿರುವ ಶಾಲೆಯ ಮುಖ್ಯ ಶಿಕ್ಷಕರಿಂದ ಅಥವಾ ಆಯ್ಕೆ ಮಾಡಿಕೊಂಡ ಹೊಸ ಕೇಂದ್ರದ ಮುಖ್ಯ ಶಿಕ್ಷಕರಿಂದ ಪ್ರವೇಶಪತ್ರ ಪಡೆಯಬಹುದು. ಇಲ್ಲವೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರವೇಶಪತ್ರದ ಪ್ರತಿ ಪಡೆದು ಪರೀಕ್ಷೆಗೆ ಹಾಜರಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.