
ಕೋಲಾರ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ವಿಡಿಯೊ ನೋಡಿದ್ದೇನೆ. ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಮಾತೆತ್ತಿದರೆ ಗ್ಯಾರಂಟಿ ಎನ್ನುತ್ತಾರೆ. ಕೈದಿಗಳ ಮೋಜು, ಮಸ್ತಿಗೆ ಕಾಂಗ್ರೆಸ್‌ನ ಮತ್ತೊಂದು ಗ್ಯಾರಂಟಿ ಕೊಟ್ಟಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರ ಹೊರವಲಯದಲ್ಲಿ ಮಂಗಳವಾರ ಮಂಗಮ್ಮ ಮುನಿಸ್ವಾಮಿ ಅವರ ಜನ್ಮದಿನದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ’ಅನುದಾನ ತಾರತಮ್ಯ ಬರೀ ಜೆಡಿಎಸ್, ಬಿಜೆಪಿ ಶಾಸಕರಿಗೆ ಸಂಬಂಧಿಸಿದ್ದಲ್ಲ. ಕಾಂಗ್ರೆಸ್ ಶಾಸಕರ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ಟೀಕಿಸಿದರು.
ಅನುದಾನ ವಿಚಾರದಲ್ಲಿ ಮುಖ್ಯಮಂತ್ರಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುದಾನ ವಿಚಾರಕ್ಕೆ ಶ್ವೇತಾ ಪತ್ರ ಹೊರಡಿಸಲು ನಾವು ಸಿದ್ಧರಿದ್ದೇವೆ, ಕಾಂಗ್ರೆಸ್ ಸರ್ಕಾರವೂ ಹೊರಡಿಸಲಿ. ಕುಮಾರಣ್ಣ ರೈತರ ಸಾಲಮನ್ನಾ ಮಾಡಿದರು. ಅವರ ಆಡಳಿತದಲ್ಲಿ ಅಭಿವೃದ್ಧಿ ಯಾವತ್ತೂ ಕುಂಠಿತವಾಗಿಲ್ಲ. ಆ ಪಕ್ಷ ಈ ಪಕ್ಷವೆಂದು ತಾರತಮ್ಯ ಮಾಡದೆ ಎಲ್ಲಾ ಶಾಸಕರಿಗೂ ಸಮನಾಗಿ ಅನುದಾನ ಬಿಡುಗಡೆ ಮಾಡಿದರು’ ತಿರುಗೇಟು ನೀಡಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗಟ್ಟಿಯಾಗಿ ಮುಂದುವರಿಯಲಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಯಾವ ರೀತಿ ಸಾಗಬೇಕೆಂದು ಅತೀ ಶೀಘ್ರದಲ್ಲಿ ಎರಡೂ ಪಕ್ಷಗಳ ಮುಖಂಡರು ತೀರ್ಮಾನಿಸಲಿದ್ದಾರೆ. ಸಮಿತಿ ರಚನೆ ಮಾಡಿ ಯಾವ ರೀತಿ ಮೈತ್ರಿ ಬಲಪಡಿಸಬೇಕೆಂದು ಚರ್ಚಿಸಲಿದ್ದಾರೆ ಎಂದು ಹೇಳಿದರು.
ಕೋರ್ ಕಮಿಟಿ ಪರಿಷ್ಕರಣೆ ಸಂಬಂಧ ಪ್ರತಿಕ್ರಿಯಿಸಿ, ‘ಕುಮಾರಣ್ಣ, ಎಚ್.ಡಿ.ದೇವೇಗೌಡರು ಸೇರಿ ಚರ್ಚೆ ಮಾಡಿ ತೀರ್ಮಾನ ಕೈಗೊಂಡಿದ್ದಾರೆ. ಇದು ಒಮ್ಮತದ ತೀರ್ಮಾನ. ಮುಂದೆ ಪಕ್ಷ ಬಲಪಡಿಸಲು ನೀಲನಕ್ಷೆ ಮಾಡಿಕೊಂಡು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಕೃಷ್ಣಾರೆಡ್ಡಿ ಅವರನ್ನು ಮಾಡಿದ್ದಾರೆ’ ಎಂದರು.
ದೆಹಲಿ ಬಾಂಬ್ ಸ್ಫೋಟದ ಸಂಬಂಧ ತನಿಖೆ ನಡೆಸಿ ಸತ್ಯ ಹೊರಗಡೆ ತರಬೇಕು. ಯಾರೇ ಭಾಗಿಯಾಗಿದ್ದರೂ ಕಠಿಣ ಶಿಕ್ಷೆ ವಿಧಿಸಬೇಕು. ಇದೊಂದು ಅತ್ಯಂತ ನೋವಿನ ಸಂಗತಿ. ಅನೇಕ ಸಾವು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನವೆಂಬರ್ ಕ್ರಾಂತಿ ಮಾರ್ಚ್‌ವರೆಗೂ ಹೋಗುತ್ತಾ? ಬಿಹಾರ ಚುನಾವಣೆ ಮುಗಿದ ಮೇಲೆ ಹೊಸ ಕ್ರಾಂತಿ ಬರುತ್ತೊ? ಯಾರು ಕುರ್ಚಿ ಉಳಿಸಿಕೊಳ್ಳುತ್ತಾರೆ? ಯಾರು ಬಿಡುತ್ತಾರೆ? ಯಾರು ಕಿತ್ತು ಕೊಳ್ಳುತ್ತಾರೆ? ಕಾದು ನೋಡಣ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಜಿ.ಟಿ.ದೇವೇಗೌಡರು ಪಕ್ಷದ ಹಿರಿಯ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಕೋರ್ ಕಮಿಟಿ ಅಧ್ಯಕ್ಷರಾದವರು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕೆಂದು ಬದಲಾವಣೆ ಮಾಡಲಾಗಿದೆನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.