ADVERTISEMENT

ಗಣ ರಾಜ್ಯೋತ್ಸವಕ್ಕೆ ಹರಿದುಬಂದ ಜನಸಾಗರ

ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಅನುರಣನ– ಕಳೆಗಟ್ಟಿದ ರಾಷ್ಟ್ರೀಯ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 15:19 IST
Last Updated 26 ಜನವರಿ 2019, 15:19 IST
ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.   

ಕೋಲಾರ: ಕ್ರೀಡಾಂಗಣದ ಮೂಲೆ ಮೂಲೆಯಲ್ಲೂ ರಾಷ್ಟ್ರಗೀತೆಯ ಅನುರಣನ... ಮನ ಮನದಲ್ಲೂ ರಾಷ್ಟ್ರಭಕ್ತಿಯ ಸಿಂಚನ... ಕಣ್ಣು ಹಾಯಿಸಿದಲ್ಲೆಲ್ಲಾ ತ್ರಿವರ್ಣ ಧ್ವಜದ ಸಾಲು... ಎಲ್ಲೆಲ್ಲೂ ರಾಷ್ಟ್ರೀಯ ಹಬ್ಬ ಗಣ ರಾಜ್ಯೋತ್ಸವದ ಸಂಭ್ರಮ....

ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದೇಶದ 70ನೇ ಗಣ ರಾಜ್ಯೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು. ಜಿಲ್ಲಾಡಳಿತವು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.

ಕಾರ್ಯಕ್ರಮ ಆರಂಭಕ್ಕೂ ಒಂದು ತಾಸು ಮುನ್ನವೇ ಶಾಲಾ ಮಕ್ಕಳು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕ್ರೀಡಾಂಗಣದತ್ತ ಧಾವಿಸಿದರು. ಪೂರ್ವ ನಿಗದಿಯಂತೆ 9 ಗಂಟೆಗೆ ಸಮಾರಂಭ ಆರಂಭವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ADVERTISEMENT

ಪೊಲೀಸರು ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿ ಕ್ರೀಡಾಂಗಣದ ಒಳ ಹೋಗಲು ಬಿಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು, ಪೊಲೀಸರು, ಸೇವಾದಳ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯು ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಸೊಗಸು ಇಮ್ಮಡಿ: ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಸಮಾರಂಭದ ಸೊಗಸು ಇಮ್ಮಡಿಗೊಳಿಸಿತು. ಸುವರ್ಣ ಸೆಂಟ್ರಲ್ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಚಿನ್ಮಯ, ಸೇಂಟ್‌ ಆನ್ಸ್‌, ಮಹಿಳಾ ಸಮಾಜ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಹಾಗೂ ನ್ಯಾಯಾಲಯ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಗಣ ರಾಜ್ಯೋತ್ಸವ ಆಚರಿಸಲಾಯಿತು. ಬಸ್‌ ಚಾಲಕರು, ಆಟೊ ಚಾಲಕರು ಹಾಗೂ ಬೈಕ್‌ ಸವಾರರು ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಕಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಬಹುಮಾನ ವಿತರಣೆ: ಕಾಲೇಜು ವಿಭಾಗದಲ್ಲಿ ಆಕರ್ಷಕ ಪಥಸಂಚಲನ ನಡೆಸಿದ ಸುಭಾಷ್ ಶಾಲಾ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ, ಎನ್‌ಸಿಸಿ ಬಾಲಕರ ತಂಡಕ್ಕೆ ದ್ವಿತೀಯ ಹಾಗೂ ಎಇಎಸ್ ಶಾಲೆಯ ಸ್ಕೌಟ್ಸ್ ತಂಡಕ್ಕೆ ತೃತೀಯ ಬಹುಮಾನ ನೀಡಲಾಯಿತು. ಶಾಲಾ ವಿಭಾಗದಲ್ಲಿ ಆರ್.ವಿ ಇಂಟರ್ ನ್ಯಾಷನಲ್ ಶಾಲೆ ಪ್ರಥಮ, ಮಹಿಳಾ ಸಮಾಜ ಶಾಲೆ ದ್ವಿತೀಯ ಹಾಗೂ ಸುವರ್ಣ ಸೆಂಟ್ರಲ್ ಶಾಲಾ ವಿದ್ಯಾರ್ಥಿಗಳ ತಂಡ ತೃತೀಯ ಬಹುಮಾನ ಪಡೆದವು.

ಪ್ರವಾಸೋದ್ಯಮ ಇಲಾಖೆ ವತಿಯಿಂದ 15 ಮಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲಾಯಿತು. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರಕ್ಕೆ ಚಾಲನೆ ನೀಡಲಾಯಿತು. ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಜೆ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನಗರವಾಸಿಗಳ ಮನಸೊರೆಗೊಂಡಿತು.

ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಕೆ.ಶುಭಾ ಕಲ್ಯಾಣ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.