ADVERTISEMENT

ಕೋಲಾರ| ಧರೆಗಿಳಿಯಲಿದೆ ಹೂವಿನ ಲೋಕ

ಫಲಪುಷ್ಪ ಪ್ರದರ್ಶನದ ಸೌಂದರ್ಯ ಕಣ್ತುಂಬಿಕೊಳ್ಳಲು ನಗರವಾಸಿಗಳು ಉತ್ಸುಕ

ಜೆ.ಆರ್.ಗಿರೀಶ್
Published 23 ಜನವರಿ 2020, 19:45 IST
Last Updated 23 ಜನವರಿ 2020, 19:45 IST
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆಗೆ ಕೋಲಾರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಹೂವಿನ ಗಿಡಗಳನ್ನು ಬೆಳೆಸಿರುವುದು.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆಗೆ ಕೋಲಾರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಹೂವಿನ ಗಿಡಗಳನ್ನು ಬೆಳೆಸಿರುವುದು.   

ಕೋಲಾರ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಕಳೆದೊಂದು ದಶಕದಿಂದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದೆ. ಅಂತೆಯೇ ಈ ಬಾರಿಯೂ ಪ್ರದರ್ಶನ ಆಯೋಜಿಸಲಾಗುತ್ತಿದೆ.

ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ತೋಟಗಾರಿಕೆ ಇಲಾಖೆ ನರ್ಸರಿಯು ಸುಮಾರು 4 ಎಕರೆ ವಿಸ್ತಾರವಾಗಿದ್ದು, ಸ್ಥಳೀಯರು ಸೇರಿದಂತೆ ಪ್ರತಿಯೊಬ್ಬರಿಗೂ ಇಷ್ಟವಾಗುವಂತೆ ಪ್ರದರ್ಶನ ನಡೆಸಲು ಸಿದ್ಧತೆ ನಡೆದಿದೆ. ಅಲಂಕಾರಿಕ ಗಿಡಗಳು, ಡೇಲಿಯಾ, ಸಾಲ್ವಿಯಾ, ಬೆರ್ಜೆನಿಯಾ, ಆಸ್ಟರ್, ಜರ್ಬರಸ್, ಸೆಲೋಸಿಯಾ, ಸೇವಂತಿಗೆ, ವಿಂಕ ರೋಸಿಯ, ಮಾರಿ ಗೋಲ್ಡ್‌ ಸೇರಿದಂತೆ ವಿವಿಧ ಹೂವುಗಳನ್ನು 6 ಸಾವಿರ ಕುಂಡಗಳಲ್ಲಿ ಬೆಳೆಸಲಾಗಿದೆ.

ADVERTISEMENT

ಹಿಂದಿನ ವರ್ಷ ಇಸ್ರೇಲ್‌ ಮಾದರಿ ತೋಟಗಾರಿಕೆ ಪರಿಕಲ್ಪನೆಯೊಂದಿಗೆ ಫಲಪುಷ್ಪ ಪ್ರದರ್ಶನ ರೂಪಿಸಲಾಗಿತ್ತು. ಈ ಬಾರಿ ತೋಟಗಾರಿಕೆ ಬೆಳೆಗಳ ಸಸ್ಯ ಸಂತೆಯ ಪರಿಕಲ್ಪನೆಯೊಂದಿಗೆ ಪ್ರದರ್ಶನ ನಡೆಸಲಾಗುತ್ತಿದೆ. ಆಹಾರ, ತಿಂಡಿ ತಿನಿಸು ಮಳಿಗೆಗಳು, ಕರಕುಶಲ ವಸ್ತುಗಳು, ಕೃಷಿ ಉತ್ಪನ್ನ ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆ ತೆರೆಯಲಿವೆ. ಪ್ರಗತಿಪರ ರೈತರು, ಕೃಷಿ ತಜ್ಞರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲು ಉದ್ದೇಶಿಸಲಾಗಿದೆ.

ಪ್ರಮುಖ ಆಕರ್ಷಣೆ: ಕಲ್ಲಂಗಡಿ, ಕುಂಬಳಕಾಯಿ, ಸೋರೆಕಾಯಿ, ಬಾಳೆದಿಂಡು, ಹಾಗಲಕಾಯಿ ಸೇರಿದಂತೆ ವಿವಿಧ ತರಕಾರಿ ಮತ್ತು ಹಣ್ಣುಗಳಿಂದ ಪ್ರಾಣಿ ಪಕ್ಷಿ, ಶಿವಲಿಂಗ, ನಂದಿ, ವೀಣೆ, ಚಿಟ್ಟೆ ಆಕೃತಿಗಳನ್ನು ಕೆತ್ತನೆ ಮೂಲಕ ನಿರ್ಮಿಸಲಾಗುತ್ತದೆ. ತರಕಾರಿ ಕೆತ್ತನೆಗಳು, ರೈತರು ಬೆಳೆದ ಕೃಷಿ ಉತ್ಪನ್ನಗಳು, ಪಾಲಿಹೌಸ್, ಕೃಷಿ ಹೊಂಡ, ತಾರಸಿ ತೋಟ, ಕೈತೋಟ, ಹಸಿರು ಮನೆಯಲ್ಲಿ ಇಂಗ್ಲಿಷ್‌ ಸೌತೆಕಾಯಿ ಬೆಳೆ ಪ್ರಾತ್ಯಕ್ಷಿಕೆ, ಕುಂಡಗಳಲ್ಲಿ ತರಕಾರಿ ಬೇಸಾಯ, ಎಂ–ಸ್ಯಾಂಡ್‌ನಲ್ಲಿ ನಿರ್ಮಿಸಿದ ಎಂ.ಎಚ್‌.ಮರೀಗೌಡರ ಕಲಾಕೃತಿ, ದೊಣ್ಣೆ ಮೆಣಸಿನಕಾಯಿಯಲ್ಲಿ ಮಾಡಿದ ಮನೆ ಮಾದರಿಯು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

ಸಸ್ಯ ಸಂತೆ: ತೋಟಗಾರಿಕೆ ಬೆಳೆಗಳ ಸಸ್ಯ ಸಂತೆಯು ಈ ಬಾರಿಯ ಪ್ರದರ್ಶನದ ವಿಶೇಷವಾಗಿದೆ. ಮಾವು, ಸೀಬೆ, ನೇರಳೆ, ಗೋಡಂಬಿ, ದಾಳಿಂಬೆ, ಅಂಜೂರ, ಸೀತಾಫಲ, ಬೆಣ್ಣೆ ಹಣ್ಣು, ಬೆಟ್ಟದ ನೆಲ್ಲಿಕಾಯಿ, ಕಿತ್ತಳೆ, ಚಕೋತ, ಹಲಸು ಹಣ್ಣುಗಳನ್ನು ಗ್ರಾಹಕರಿಗೆ ಕೈಗೆಟುಕುವ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಫಲಪುಷ್ಪ ಪ್ರದರ್ಶನಕ್ಕೆ ಸುಮಾರು ₹ 10 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರದರ್ಶನಕ್ಕೆ ಜಿಲ್ಲಾ ಪಂಚಾಯಿತಿ ₹ 6 ಲಕ್ಷ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ₹ 4 ಲಕ್ಷ ಮೀಸಲಿಡಲಾಗಿದೆ. ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 30 ಮಂದಿ ಪ್ರಗತಿಪರ ರೈತರನ್ನು ಪುರಸ್ಕರಿಸಲಾಗುತ್ತಿದೆ.

ಉಚಿತ ಪ್ರವೇಶ: ಹೂವಿನ ಗಿಡ ಹಾಗೂ ಮರಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿರುವುದು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಲಿದೆ. ಜ.26 ಮತ್ತು 27ರಂದು ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಎರಡೂ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 8ರವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಫಲಪುಷ್ಪ ಪ್ರದರ್ಶನದ ಸೌಂದರ್ಯ ಕಣ್ತುಂಬಿಕೊಳ್ಳಲು ನಗರವಾಸಿಗಳು ಹಾಗೂ ಶಾಲಾ ಮಕ್ಕಳು ಉತ್ಸುಕರಾಗಿದ್ದಾರೆ. ವಾರಾಂತ್ಯದ ಭಾನುವಾರ ಹೆಚ್ಚಿನ ಮಂದಿ ಪ್ರದರ್ಶನ ವೀಕ್ಷಣೆಗೆ ಬರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.